ನೂತನ ಸಚಿವ ವಿಜಯಾನಂದ ಕಾಶಪ್ಪನವರ ತವರಿಗೆ ಆಗಮಿಸಿದಾಗ, ಅವರ ಮಗಳು ಸಮಿಕ್ಷಾ 'ದುಡ್ಡು ಬೇಡ, ಬಡವರ ಸೇವೆ ಮಾಡು' ಎಂದು ಹೇಳಿ ಎಲ್ಲರ ಮನಗೆದ್ದಳು. ಇದೇ ವೇಳೆ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಂಬಂಧಿಸಿದಂತೆ ತಿಮ್ಮಾಪುರ ಮತ್ತು ನಂಜಯ್ಯನಮಠ ಅವರ ಆಡಿಯೋ ವಿವಾದದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಬಾಗಲಕೋಟೆ: ಅಪ್ಪಾ ನನಗೆ ದುಡ್ಡು ಬೇಡ ಮತ ನೀಡಿದ ಬಡ ಜನರ ಸೇವೆ ಮಾಡು ಅಪ್ಪಾ ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಮಗಳು ಸಮಿಕ್ಷಾ ತಂದೆಗೆ ಆರತಿ ಬೆಳಗಿ ಮನವಿ ಮಾಡಿಕೊಂಡಳು.
ನೂತನ ಸಚಿವರಾಗಿ ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರಕ್ಕೆ ಬಂದ ಸಚಿವರು ತಮ್ಮ ಮನೆಗೆ ಬಂದಾಗ ಮನೆಯ ಮುಂದೆ ಅವರ ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು ಸ್ವಾಗತ ಮಾಡಿಕೊಳ್ಳುವಾಗ ಮಗಳು ಸಮಿಕ್ಷಾ ಕೂಡ ತಂದೆ, ಸಚಿವ ವಿಜಯಾನಂದ ಕಾಶಪ್ಪನವರಿಗೆ ಆರತಿ ಮಾಡಿದಾಗ ಸಚಿವರು ಮಗಳ ಆರತಿ ತಟ್ಟೆಗೆ ದುಡ್ಡು ಹಾಕಲು ಮುಂದಾದರು. ಆಗ ಮಗಳು ದುಡ್ಡು ಬೇಡ ಸಮಾಜ ಸೇವೆ ಮಾಡು ಎಂದು ಹೇಳಿದಳು. ಆಗ ಅಲ್ಲಿ ನೆರೆದಿದ್ದ ಅಪಾರ ಜನರ ಮನಸು ಗೆದ್ದಿತು.
ಸಚಿವರ ಪುತ್ರಿಯ ಆ ಮಾತು ಕೇಳಿದ ಸಚಿವ ಕಾಶಪ್ಪನವರು, ಕ್ಷಣ ಹೊತ್ತು ಆಶ್ಚರ್ಯಚಕಿತರಾಗಿ ಮಗಳಿಗೆ ಕೃಮುಗಿದು ಅಪ್ಪಿಕೊಂಡರು. ಚಿಕ್ಕವಳಾದ ಅವಳ ಬಾಯಿಯಿಂದ ಸಮಾಜ ಸೇವೆ ಮಾಡುವ ಗುರಿ ಕೇಳಿ ಸಂತಸ ಪಟ್ಟರು. ಸಚಿವ ವಿಜಯಾನಂದ ಕಾಶಪ್ಪನವರ ಧರ್ಮಪತ್ನಿ ವೀಣಾ ಕಾಶಪ್ಪನವರ ಕೂಡ ಸಚಿವರಿಗೆ ಹಾರ ಹಾಕಿ ಸ್ವಾಗತಿಸಿಕೊಂಡರು ನಂತರ ಕೂಡಿದ ಜನತೆ ಜೃಕಾರ ಹಾಕಿದರು.
ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋ
ನನ್ನ ಉಸ್ತುವಾರಿ ತಪ್ಪಿಸುವುದಕ್ಕೆ, ನಿರ್ಧಾರ ಮಾಡುವುದಕ್ಕೆ ಪಕ್ಷ ಇದೆ. ನಮ್ಮ ಮುಖ್ಯಮಂತ್ರಿಗಳು ಇದ್ದಾರೆ. ನಿರ್ಧಾರ ಮಾಡೋದಕ್ಕೆ ಇವರಿಬ್ಬರು ಹೇಳಿದರೆ ಮಾಡುತ್ತಾರಾ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಪ್ರಶ್ನಿಸಿದ್ದಾರೆ. ಜಿಲ್ಲೆಯ ಇಳಕಲ್ಲಿನಲ್ಲಿ ಬುಧವಾರ ಮಾತನಾಡಿದ ಅವರು, ಕಾಶಪ್ಪನವರ ಅವರನ್ನು ಬಾಗಲಕೋಟೆ ಉಸ್ತುವಾರಿ ತಪ್ಪಿಸಲು, ಕಾಂಗ್ರೆಸ್ ಶಾಸಕರ ಸಹಿ ಬಗ್ಗೆ ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋದಲ್ಲಿ ಪ್ರಸ್ತಾಪ ಮಾಡಿರುವುಕ್ಕೆ ತಿರುಗೇಟು ನೀಡಿದರು. 2008ರಲ್ಲಿ ಕಾಶಪ್ಪನವರಗೆ ನಾನು ಅನ್ಯಾಯ ಮಾಡಿದೆ ಎಂದು ನಂಜಯ್ಯನಮಠ ತಾವೆ ಬರೆದ ಪುಸ್ತಕದಲ್ಲಿ ಬರೆದಿದ್ದಾರೆ. ಇವರು ಕಾಯಂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಇವರು ಯಾವತ್ತು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಎಂದರು.
ಇಬ್ಬರ ಬಗ್ಗೆ ಹೈಕಮಾಂಡ್‌ಗೆ ದೂರ ನೀಡುತ್ತಿರಾ ಎಂಬ ಪ್ರಶ್ನೆಗೆ, ನಾನು ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟಿದ್ದೇನೆ. ನಾನು ಸಂಸ್ಕಾರ ಇರುವಂತಹ ಕುಟುಂಬದಲ್ಲಿ ಹುಟ್ಟಿದ್ದೇನೆ. ಕಾಂಗ್ರೆಸ್ ಪಕ್ಷ ನಮ್ಮ ತಂದೆ-ತಾಯಿ ಎಲ್ಲರನ್ನು ಶಾಸಕರನ್ನಾಗಿ ಮಾಡಿದೆ. 6 ಬಾರಿ ನಮ್ಮ ಮನೆತನದವರನ್ನು ಶಾಸಕರನ್ನಾಗಿ ಮಾಡಿದೆ. ನಾವು ಸೇವೆ ಮಾಡುವವರು. ದ್ವೇಷ ಮಾಡುವುದು ಅಥವಾ ವಿರುದ್ಧವಾಗಿ ಏನಾದರೂ ಹೇಳೋದು ನಮ್ಮ ಮನಸಿನಲ್ಲಿ ಇಲ್ಲ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿದರು.
ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ
ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ ಆಗಿದ್ದೇನೆ. ಆದ್ದರಿಂದ ನನಗೆ ಉಸ್ತುವಾರಿ ಕೊಡಬೇಕು. ನಾವು ಯಾವುದೇ ರೀತಿ ಕಚ್ಚಾಟ ಮಾಡುವುದಿಲ್ಲ. ಈಗ ಅವರವರೆ (ಆರ್.ಬಿ.ತಿಮ್ಮಾಪುರ ಮತ್ತು ನಂಜಯ್ಯನಮಠ) ಮಾತನಾಡಿಕೊಂಡಿದ್ದಾರೆ. ಅವರಿಗೆ ಏನು ನೋವು ಆಗಿದೆಯೋ ಗೊತ್ತಿಲ್ಲ. ಸಹಜವಾಗಿ ಕೆಲವಷ್ಟು ಜನಕ್ಕೆ ನೋವಾಗುತ್ತೆ. ಅವರಿಗೂ ಅವಕಾಶ ಕೊಟ್ಟಿದೆಯಲ್ಲ ಪಕ್ಷ, ಅದನ್ನು ಹೇಳಬೇಕಲ್ಲ. ಯಾರಾರ ಮೇಲೆ ಏನೇನೋ ಆರೋಪ ಮಾಡೋದು, ಶೇ.80 ದುಡ್ಡು ತಗೊಂಡೆ ಸಚಿವ ಸಂಪುಟ ಮಾಡಿದ್ದಾರೆ ಅಂತ ಹೇಳೋದು. ಪಾಪ ನಮ್ಮ ನಾಗೇಂದ್ರ ಬಗ್ಗೆ ಕೇಸ್ ಇದೆ. ಅವರನ್ನು ಹೇಗೆ ಮಾಡಿದ್ರು ಅನ್ನೋದು. ವೇಣುಗೋಪಾಲ್ ಅವರಿಗೆ ಏಕವಚನದಲ್ಲಿ ಮಾತನಾಡುವುದು, ಹುಚ್ಚರು ಅನ್ನೋದು ಹೈಕಮಾಂಡ್‌ನವರನ್ನು ಹುಚ್ಚರು ಅನ್ನೋದು. ನಮ್ಮ ವರಿಷ್ಠರು ಇದಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೇಳ್ತೀನಿ ಇದೇನು ನಮಗೆ ಹೊಸದಲ್ಲ. ಇದನ್ನು ನಮ್ಮ ತಂದೆ-ತಾಯಿ ಕಾಲದಿಂದಲೂ ಎದುರಿಸಿಕೊಂಡು ಬಂದಿದ್ದೇವೆ. ಮುಂದೆ ಎದುರಿಸಿಕೊಂಡು ಹೋಗುತ್ತೇವೆ. ನಾವು ಗಟ್ಟಿಯಾಗಿದ್ದೇವೆ ಎಂದರು.


