ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಎರಡನೇ 'ವಂದೇ ಭಾರತ್ ಸ್ಲೀಪರ್' ರೈಲು ಬೆಂಗಳೂರಿಗೆ ಆಗಮಿಸಿದೆ. ಬಿಇಎಂಎಲ್‌ನಿಂದ ತಯಾರಿಸಲ್ಪಟ್ಟ ಈ ರೈಲು, ಪರೀಕ್ಷಾರ್ಥ ಸಂಚಾರಕ್ಕಾಗಿ ಬಂದಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಸೇವೆ ಆರಂಭಿಸಲಿದೆ.
ಬೆಂಗಳೂರು (ಜು.02): ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಈಗ ಶುಭ ಸುದ್ದಿ ಸಿಕ್ಕಿದೆ. ಭಾರತೀಯ ರೈಲ್ವೆಯ ಅತ್ಯಂತ ಮಹತ್ವಾಕಾಂಕ್ಷೆಯ 'ವಂದೇ ಭಾರತ್ ಸ್ಲೀಪರ್' (Vande Bharat Sleeper) ರೈಲಿನ ಎರಡನೇ ಸೆಟ್ ಬೆಂಗಳೂರಿಗೆ ಆಗಮಿಸಿದೆ. ಕೆಸರಿ ಮತ್ತು ಬೂದು ಬಣ್ಣದ ಈ ಅದ್ಭುತ ರೈಲು ಇದೀಗ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.
ಬೆಂಗಳೂರಿನ ಬಿಇಎಂಎಲ್ (BEML) ಘಟಕದಲ್ಲಿ ತಯಾರಾದ ಈ ರೈಲು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ತಂತ್ರಜ್ಞಾನವನ್ನು ಒಳಗೊಂಡಿದೆ. ಸದ್ಯ ಈ ರೈಲು ಪರೀಕ್ಷಾರ್ಥ ಸಂಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಶೀಘ್ರದಲ್ಲೇ ಕೆಎಸ್ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಅಧಿಕೃತವಾಗಿ ಸಂಚರಿಸಲಿದೆ.
ದೇಶದ ಎರಡನೇ ಸ್ಲೀಪರ್ ರೈಲು:
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು 2026ರ ಜನವರಿಯಲ್ಲಿ ಹೌರಾ ಮತ್ತು ಕಾಮಾಕ್ಯ ನಡುವೆ ಸಂಚಾರ ಆರಂಭಿಸಿತ್ತು. ಅದು ಕೇವಲ 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿತಾಯ ಮಾಡಿ ಯಶಸ್ವಿಯಾಗಿದೆ. ಇದೀಗ ಅದರ ಬೆನ್ನಲ್ಲೇ ಬೆಂಗಳೂರು ಮತ್ತು ಮುಂಬೈ ನಡುವೆ ಎರಡನೇ ಸ್ಲೀಪರ್ ರೈಲು ಹಳಿ ಏರಲು ಸಿದ್ಧವಾಗುತ್ತಿದೆ. ನೈಋತ್ಯ ರೈಲ್ವೆಯ (SWR) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಖಾಸಗಿ ಮಾಧ್ಯಮವೊಮದಕ್ಕೆ ನೀಡಿರುವ ಮಾಹಿತಿ ಪ್ರಕಾರ, ಈ ರೈಲು ಪ್ರಸ್ತುತ ಬಿಇಎಂಎಲ್ (BEML) ವಶದಲ್ಲಿದ್ದು, ಅಂತಿಮ ಹಂತದ ಪರೀಕ್ಷೆಗಳಿಗಾಗಿ ಬೆಂಗಳೂರಿನ ಎಸ್ಎಂವಿಟಿ (SMVT) ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಎಲ್ಲಾ ಪರೀಕ್ಷೆಗಳು ಮುಗಿದ ನಂತರ ಇದನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು.
ಯಾವೆಲ್ಲಾ ನಗರಗಳಿಗೆ ಸಂಪರ್ಕ?
ಬೆಂಗಳೂರು ಮತ್ತು ಮುಂಬೈ ನಡುವಿನ ಈ ರೈಲು ಕೇವಲ ಎರಡು ನಗರಗಳಿಗೆ ಮಾತ್ರವಲ್ಲದೆ, ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳಿಗೂ ವರದಾನವಾಗಲಿದೆ. ಜೊತೆಗೆ ಮಹಾರಾಷ್ಟ್ರದ ಪುಣೆ ನಗರಕ್ಕೂ ಸುಲಭ ಸಂಪರ್ಕ ಕಲ್ಪಿಸಲಿದೆ. ಈ ರೈಲಿನ ಸಂಚಾರದಿಂದ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ವೇಗ ಸಿಗುವ ನಿರೀಕ್ಷೆಯಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಟಾಪ್ ವೈಶಿಷ್ಟ್ಯಗಳು:
ಈ ಹೊಸ ರೈಲು ಸಾಮಾನ್ಯ ರೈಲುಗಳಿಗಿಂತ ಸಂಪೂರ್ಣ ಭಿನ್ನವಾಗಿದ್ದು, ವಿಮಾನದ ಮಾದರಿಯ ಸೌಕರ್ಯಗಳನ್ನು ಹೊಂದಿದೆ.
ಕೋಚ್‌ಗಳ ವಿವರ: ಈ ರೈಲು ಒಟ್ಟು 16 ಕೋಚ್‌ಗಳನ್ನು ಹೊಂದಿದೆ. ಇದರಲ್ಲಿ 11 ಕೋಚ್‌ಗಳು 3-ಟೈರ್ ಎಸಿ (3-Tier AC), 4 ಕೋಚ್‌ಗಳು 2-ಟೈರ್ ಎಸಿ (2-Tier AC) ಮತ್ತು 1 ಕೋಚ್ 1ನೇ ದರ್ಜೆಯ ಎಸಿ (1st AC) ಸೌಲಭ್ಯವನ್ನು ಹೊಂದಿದೆ.
ಪ್ರಯಾಣಿಕರ ಸಾಮರ್ಥ್ಯ: ಒಟ್ಟು 823 ಪ್ರಯಾಣಿಕರು ಏಕಕಾಲದಲ್ಲಿ ಈ ರೈಲಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ಸೂಪರ್ ಫಾಸ್ಟ್ ವೇಗ: ಇದು ಸೆಮಿ ಹೈಸ್ಪೀಡ್ ರೈಲಾಗಿದ್ದು, ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಸುಧಾರಿತ ಬರ್ತ್‌ಗಳು: ಪ್ರಯಾಣಿಕರ ನಿದ್ರೆಯ ಸೌಕರ್ಯಕ್ಕಾಗಿ ಬರ್ತ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಕುಶನ್ ಮತ್ತು ಎರ್ಗೋನಾಮಿಕ್ ವಿನ್ಯಾಸವು ಪ್ರಯಾಣವನ್ನು ಹಿತವಾಗಿಸುತ್ತದೆ.
ಆಧುನಿಕ ತಂತ್ರಜ್ಞಾನ: ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು (Automatic Doors) ಮತ್ತು ಶಬ್ದ ಮುಕ್ತ ಪ್ರಯಾಣಕ್ಕಾಗಿ 'ನಾಯ್ಸ್ ರಿಡಕ್ಷನ್' ತಂತ್ರಜ್ಞಾನ ಬಳಸಲಾಗಿದೆ.
ಸುರಕ್ಷತೆ (Kavach): ರೈಲು ಅಪಘಾತಗಳನ್ನು ತಡೆಯುವ 'ಕವಚ' (Kavach) ವ್ಯವಸ್ಥೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಚಾಲಕರ ಜೊತೆ ಮಾತನಾಡಲು 'ಟಾಕ್-ಬ್ಯಾಕ್' ಸಿಸ್ಟಮ್ ಅಳವಡಿಸಲಾಗಿದೆ.
ನೈರ್ಮಲ್ಯಕ್ಕೆ ಆದ್ಯತೆ: ರೈಲಿನಲ್ಲಿ ಹೆಚ್ಚಿನ ನೈರ್ಮಲ್ಯವನ್ನು ಕಾಪಾಡಲು ಡಿಸ್‌ಇನ್‌ಫೆಕ್ಟೆಂಟ್ (Disinfectant) ತಂತ್ರಜ್ಞಾನ ಮತ್ತು ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಇದೆ.
ವೈಮಾನಿಕ ವಿನ್ಯಾಸ: ರೈಲಿನ ಹೊರಭಾಗವು ಏರೋಡೈನಾಮಿಕ್ ಫಿನಿಶ್ ಹೊಂದಿದ್ದು, ನೋಡಲು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.
ಯಾವಾಗ ಸಂಚಾರ ಆರಂಭ?
ಸದ್ಯ ಬಿಇಎಂಎಲ್ ಇಂಜಿನಿಯರ್‌ಗಳು ಈ ರೈಲಿನ ಮೇಲೆ ಎಲ್ಲಾ ರೀತಿಯ ಸುರಕ್ಷತಾ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅಂತಿಮ ಹಂತದ ಪರೀಕ್ಷೆಗಳು ಮುಗಿದು ರೈಲ್ವೆ ಮಂಡಳಿಯಿಂದ ಒಪ್ಪಿಗೆ ಸಿಕ್ಕ ಕೂಡಲೇ ಈ ರೈಲು ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಬೆಂಗಳೂರು-ಮಂಬೈ ನಡುವೆ ನೀವು ಈ ಅತ್ಯಾಧುನಿಕ ರೈಲಿನಲ್ಲಿ ನಿದ್ರಿಸುತ್ತಾ ಪ್ರಯಾಣಿಸಬಹುದು!


