ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ 23 ಕಿ.ಮೀ. ಉದ್ದದ ಬಿಆರ್‌ಟಿಎಸ್ ಮಾರ್ಗದಲ್ಲಿ ಆಧುನಿಕ ಟ್ರ್ಯಾಮ್ ಸಾರಿಗೆ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತಿಸಿದೆ. ಈ ಯೋಜನೆ ಜಾರಿಯಾದರೆ ಆಧುನಿಕ ಟ್ರ್ಯಾಮ್ ಹೊಂದಿದ ದೇಶದ ಮೊದಲ ನಗರಗಳಾಗಿ ಇವು ಹೊರಹೊಮ್ಮಲಿವೆ.

ಏಕೇ ಬೇಕು ಹೊಸ ಟ್ರ್ಯಾಮ್‌?

  • ಅವಳಿ ನಗರದಲ್ಲೀಗ 23 ಕಿ.ಮೀ ಉದ್ದದ ಬಿಆರ್‌ಟಿಎಸ್‌ ಮಾರ್ಗ
  • ಈ ಮಾರ್ಗದಲ್ಲೇ ಹಳಿ ಹಾಕಿ ಟ್ರ್ಯಾಮ್‌ ವ್ಯವಸ್ಥೆ ಜಾರಿಗೆ ಪ್ಲ್ಯಾನ್‌
  • ಇದು ಪರಿಸರ ಸ್ನೇಹಿ ಜೊತೆಗೆ ಹೆಚ್ಚು ಜನರ ಹೊತ್ತೊಯ್ಯಬಲ್ಲದು
  • ಸದ್ಯ ವಿದೇಶಗಳಲ್ಲಿ ಮಾತ್ರವೇ ಇಂಥ ಆಧುನಿಕ ಟ್ರ್ಯಾಮ್‌ ಇದೆ
  • ಮೆಟ್ರೋಗಿಂತ ಕಡಿಮೆ ಟಿಕೆಟ್‌ ದರ, ನಿರ್ವಹಣಾ ವೆಚ್ಚವೂ ಕಡಿಮೆ

ಮಂಜುನಾಥ ನಾಗಲೀಕರ್

ಬೆಂಗಳೂರು (ಅ.9): ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಜನ ಸಂಚಾರಕ್ಕೆ ಹವಾನಿಯಂತ್ರಣ (ಎಸಿ) ವ್ಯವಸ್ಥೆಯೊಂದಿಗೆ ‘ಆಧುನಿಕ ಟ್ರ್ಯಾಮ್’ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯ ನಗರ ಭೂ ಸಾರಿಗೆ ನಿರ್ದೇಶನಾಲಯ ಮುಂದಾಗಿದೆ.

ವಿದೇಶಗಳಲ್ಲಿ ಮಾತ್ರ ಇದೆ ಟ್ರ್ಯಾಮ್ ಸಂಚಾರ

ಒಂದು ವೇಳೆ ಈ ಯೋಜನೆ ಕಾರ್ಯಸಾಧು ಎಂದು ಅಧ್ಯಯನ ವರದಿಯಲ್ಲಿ ಕಂಡು ಬಂದು ಜಾರಿಯಾದರೆ, ಆಧುನಿಕ ಟ್ರ್ಯಾಮ್ ವ್ಯವಸ್ಥೆ ಹೊಂದಿರುವ ದೇಶದ ಮೊದಲ ನಗರಗಳು ಎಂಬ ಹೆಗ್ಗಳಿಕೆಗೆ ಹುಬ್ಬಳ್ಳಿ-ಧಾರವಾಡ ಪಾತ್ರವಾಗಲಿವೆ. ಫ್ರಾನ್ಸ್, ಜರ್ಮನಿ, ಸ್ವಿಜರ್ಲೆಂಡ್‌ ಸೇರಿದಂತೆ ಇನ್ನಿತರ ಯುರೋಪಿಯನ್ ದೇಶಗಳ ಪ್ರಮುಖ ನಗರಗಳಲ್ಲಿ ಆಧುನಿಕ ಟ್ರ್ಯಾಮ್ ಸಾರಿಗೆ ವ್ಯವಸ್ಥೆ ಇದೆ. ರಸ್ತೆ ಮೇಲೆ ಅಳವಡಿಸುವ ಹಳಿಗಳ ಮೇಲೆ ಸಂಚರಿಸುವ ಟ್ರ್ಯಾಮ್‌ಗೆ ಕನಿಷ್ಠ 2 ಕೋಚ್‌ಗಳು ಹಾಗೂ ಗರಿಷ್ಠ 5 ಕೋಚ್‌ಗಳನ್ನು ಅಳವಡಿಸಬಹುದು. ಪ್ರಯಾಣಿಕರ ತಂಗುದಾಣಗಳಿಗೂ ಹೆಚ್ಚು ವೆಚ್ಚ ಮಾಡಬೇಕಿಲ್ಲ.

ಟ್ರ್ಯಾಮ್ ಸಾರಿಗೆ ವ್ಯವಸ್ಥೆ ಜಾರಿಯಾದರೆ ಏನು ಬದಲಾವಣೆ?

ಹಾಲಿ ಹುಬ್ಬಳ್ಳಿ-ಧಾರವಾಡ ನಡುವಣ 23 ಕಿ.ಮೀ. ಉದ್ದದ ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸುವ ಚಿಗರಿ ಬಸ್‌ಗಳಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಟ್ರ್ಯಾಮ್ ಸಾರಿಗೆ ವ್ಯವಸ್ಥೆ ಜಾರಿಯಾದರೆ ವಿದ್ಯುತ್ ಚಾಲಿತ ಟ್ರ್ಯಾಮ್ ಕೋಚ್‌ಗಳಲ್ಲಿ ಏಕ ಕಾಲದಲ್ಲಿ ಹೆಚ್ಚು ಜನ ಪ್ರಯಾಣಿಸಬಹುದು. ಅಲ್ಲದೇ, ಮಾಲಿನ್ಯವೂ ಇರುವುದಿಲ್ಲ. ಟ್ರ್ಯಾಮ್ ಹಳಿ ಅಳವಡಿಸಲು ಹೆಚ್ಚು ವೆಚ್ಚವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅವಳಿ ನಗರಗಳ ನಡುವೆ ಟ್ರ್ಯಾಮ್ ಪರಿಚಯಿಸಲು ನಗರಾಭಿವೃದ್ಧಿ ಇಲಾಖೆ ಯೋಜಿಸಿದೆ.

ಟ್ರ್ಯಾಮ್ ಟಿಕೆಟ್ ದರ ಮೆಟ್ರೋ ರೈಲುಗಳಿಗಿಂತ ಕಡಿಮೆ

ಟ್ರ್ಯಾಮ್‌ ಸಾರಿಗೆ ವ್ಯವಸ್ಥೆಯಲ್ಲಿ ನಿರ್ವಹಣೆ ಕಡಿಮೆ ಇರುತ್ತದೆ. ಹಾಲಿ ಇರುವ ಬಿಆರ್‌ಟಿಎಸ್ ಮಾರ್ಗದಲ್ಲೇ ತ್ವರಿತವಾಗಿ ಅನುಷ್ಠಾನಗೊಳಿಸಬಹುದು. ಟಿಕೆಟ್ ದರ ಕೂಡ ಮೆಟ್ರೋ ರೈಲುಗಳಿಗಿಂತ ಕಡಿಮೆ ಇರಲಿದೆ. ಇನ್ನು ಹಾಲಿ ನೂರಾರು ಬಸ್‌ಗಳನ್ನು ನಿಯಮಿತವಾಗಿ ನಿರ್ವಹಿಸುವಷ್ಟು ನಿರ್ವಹಣೆ ಟ್ರ್ಯಾಮ್ ಸಾರಿಗೆ ವ್ಯವಸ್ಥೆಗೆ ಇರುವುದಿಲ್ಲ. ಆದರೆ, ಯೋಜನೆಯು ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಕಾರ್ಯಸಾಧುವೇ ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಇದಕ್ಕೆ ಕಾರ್ಯಸಾಧ್ಯತೆ ಅಧ್ಯಯನ ವರದಿಯಿಂದ ಸ್ಪಷ್ಟತೆ ನೀಡಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ಹೇಳಿವೆ.

ಕೋಲ್ಕತ್ತಾದಲ್ಲಿದೆ ಹಳೇ ಟ್ರ್ಯಾಮ್:

ದೇಶದಲ್ಲಿ ಪಶ್ಟಿಮ ಬಂಗಾಳದ ಕೋಲ್ಕತ್ತಾದಲ್ಲಿ ಮಾತ್ರ ಅತ್ಯಂತ ಹಳೇ ಟ್ರ್ಯಾಮ್ ಸಾರಿಗೆ ವ್ಯವಸ್ಥೆಯಿದೆ. ಬ್ರಿಟಿಷರ ಅವಧಿಯಲ್ಲಿ ಆರಂಭವಾಗಿರುವ ಈ ಟ್ರ್ಯಾಮ್ ಶತಮಾನದಷ್ಟು ಹಳೆಯದಾಗಿದೆ. ಮೇಲ್ದರ್ಜೆಗೆ ಏರಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ.