ಪ್ರಧಾನಮಂತ್ರಿ ಮೋದಿಜೀಯವರ ಆಡಳಿತದಿಂದಾಗಿ ಭಾರತ ಇಂದು ವಿಶ್ವದ ಹಿರಿಯಣ್ಣನಾಗಿ ರೂಪುಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟರು.

ಹುಣಸೂರು : ಪ್ರಧಾನಮಂತ್ರಿ ಮೋದಿಜೀಯವರ ಆಡಳಿತದಿಂದಾಗಿ ಭಾರತ ಇಂದು ವಿಶ್ವದ ಹಿರಿಯಣ್ಣನಾಗಿ ರೂಪುಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬಿಜೆಪಿಯಿಂದ ವಿಜಯಸಂಕಲ್ಪ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಬೃಹತ್‌ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಗರೀಬಿ ಹಟಾವೋ ಘೋಷಣೆಯ ಮೂಲಕ ಕಾಂಗ್ರೆಸ್‌ ಮೂರು ಬಾರಿ ಅಧಿಕಾರವನ್ನು ಗಳಿಸಿದರೂ ಬಡತನ ತೊಗಲಿಲಲ್ಲ. ಬದಲಾಗಿ ಕಾಂಗ್ರೆಸ್ಸಿಗರ ಬಡತನ ನಿರ್ಮೂಲನೆಯಾಯಿತು. ಆದರೆ 9 ವರ್ಷಗಳ ಮೋದಿ ಆಡಳಿತದಲ್ಲಿ ಬಡಜನರ ಪರವಾದ ಕಲ್ಯಾಣ ಕಾರ್ಯಕ್ರಮಗಳು ದೇಶದ ಪ್ರತಿಯೊಬ್ಬ ಪ್ರಜೆಯೂ ಫಲಾನುಭವಿಯಾಗುವಂತಾಯಿತು ಎಂದರು.

ಜನಧನ್‌ ಯೋಜನೆ, ಉಜ್ವಲ್‌, ಆಯುಷ್ಮಾನ್‌ ಭಾರತ್‌, ಕಿಸಾನ್‌ ಸಮ್ಮಾನ್‌ ಹೀಗೆ ಅಭಿವೃದ್ಧಿಪರ ಯೋಜನೆಗಳು ಈ ದೇಶದ ರಾಜಕೀಯ ನೀತಿಯನ್ನೇ ಬದಲಾಯಿಸಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಜನತೆ ಎಂದೂ ಪೂರ್ಣಬಹುಮತ ನೀಡಿಲ್ಲ ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ನಿಟ್ಟಿನಲ್ಲಿ ಹುಣಸೂರಿನ ಕ್ಷೇತ್ರವೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯವನ್ನು ಜನತೆ ಮಾಡಬೇಕೆಂದು ಕೋರಿದರು

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಈ ದೇಶದ ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ರಾಷ್ಟ್ರೀಯವಾದಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಉಳಿಸಬೇಕಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಜಾತ್ಯಾತೀತ ಪಕ್ಷವೆಂದು ಹೇಳಿಕೊಂಡು ಜಾತೀವಾದಿ ನಿಲುವು ಅನುಸರಿಸುತ್ತಿವೆ. ಆದರೆ ಬಿಜೆಪಿ ಎಂದಿಗೂ ಜಾತಿ ಹೆಸರುಹೇಳಿ ಮತ ಕೇಳುವುದಿಲ್ಲ ಮತ್ತು ಅಧಿಕಾರ ನಡೆಸಿಲ್ಲ. ರಾಷ್ಟೀಯವಾದವೇ ನಮ್ಮ ಧರ್ಮ. ಈ ನೆಲದ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿಯೇ ಬಿಜೆಪಿ ಇದೆ. ಮೋದಿ ಒಬ್ಬ ವಿಶ್ವನಾಯಕ. ಮೋದಿ ಮತ್ತು ಅಮಿತ್‌ ಶಾ ಬಂದಲ್ಲಿ ಜನತೆ ಅವರನ್ನು ನಂಬಿ ವೋಟ್‌ ಹಾಕ್ತಾರೆ. ಕಾಂಗ್ರೆಸ್‌ನವರು ರಾಹುಲ್‌ ಗಾಂಧಿ, ಸೋನಿಯಾಗಾಂಧಿಯನ್ನು ಕರೆತರಲಿ ಬೇಡವೆನ್ನುವವರು ಯಾರು? ನಮ್ಮಲ್ಲಿ 50 ಮಂದಿ ನಾಯಕರು ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆ ನಡೆಸುತ್ತಿದ್ದೇವೆ. ಕಾಂಗ್ರೆಸ್‌ನ ನೀವಿಬ್ಬರು ಒಂದಾಗಿ ಬನ್ನಿ ನೋಡೋಣ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಇತ್ತೀಚೆಗಷ್ಟೆಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ ದೇವರಹಳ್ಳಿ ಸೋಮಶೇಖರ್‌ ಮಾತನಾಡಿದರು.

ವಿಜಯಸಂಕಲ್ಪ ಯಾತ್ರೆಯ ಸಂಚಾಲಕ ರಾಜೇಂದ್ರ, ಜಿಲ್ಲಾಧ್ಯಕ್ಷ ಮಂಗಳ ಸೋಮಶೇಖರ್‌, ತಾಲೂಕು ಉಸ್ತುವಾರಿ ರಘು ಕೌಟಿಲ್ಯ, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ನಗರಮಂಡಲ ಅಧ್ಯಕ್ಷ ಗಣೇಶ್‌ಕುಮಾರಸ್ವಾ,ಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಯೋಗಾನಂದಕುಮಾರ್‌, ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್‌ಕುಮಾರ್‌, ನಾಗರಾಜ ಮಲ್ಲಾಡಿ, ಅಣ್ಣಯ್ಯನಾಯ್ಕ ಇದ್ದರು.