ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಗಾಂಜಾ ಘಾಟು..!
* ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಮೇಲೆ ಹದ್ದಿನ ಕಣ್ಣು
* 23 ಪ್ರಕರಣ ದಾಖಲಿಸಿ 34 ಜನರ ಬಂಧನ
* ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ
ಕಾರವಾರ(ಜು.16): ಕೊಲೆ, ದೊಂಬಿ, ಗಲಾಟೆ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಕಡಿಮೆಯಿರುವ ಹಿನ್ನಲೆ ಶಾಂತಿಪ್ರಿಯರ ಜಿಲ್ಲೆ ಎಂದು ಉತ್ತರ ಕನ್ನಡ ಪ್ರಸಿದ್ಧ ಹೊಂದಿದೆ. ಆದರೆ ಜಿಲ್ಲೆಯನ್ನು ಆವರಿಸಿರುವ ಗಾಂಜಾ ಘಾಟು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುತ್ತಿದೆ.
ಕೋವಿಡ್ 19 ಸೋಂಕಿನ 2ನೇ ಅಲೆಯ ಲಾಕ್‌ಡೌನ್ ಬಳಿಕ ಅನ್‌ಲಾಕ್ ಜಾರಿಯಾಗಿದ್ದು, ಪ್ರವಾಸಿಗರ ಆಗಮನ ನಿಧಾನಗತಿಯಲ್ಲಿ ಪ್ರಾರಂಭವಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದ್ದು ಸದ್ದಿಲ್ಲದೇ ನಡೆಯುತ್ತಿದ್ದ ಗಾಂಜಾ ವ್ಯವಹಾರದ ಮೇಲೆ ಕಡಿವಾಣ ಹಾಕಲು ಮುಂದಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಶಿರಸಿ, ಕಾರವಾರ, ಮುರ್ಡೇಶ್ವರ, ಅಂಕೋಲಾ ಹಾಗೂ ಬನವಾಸಿ ಭಾಗದಲ್ಲಿ 5 ಗಾಂಜಾ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸಂಬಂಧ 12 ಮಂದಿ ಆರೋಪಿಗಳ ಬಂಧನವಾಗಿದೆ. ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿದ್ದಂತೆ ಜಿಲ್ಲಾ ಮಟ್ಟದಲ್ಲಿ ತಂಡವೊಂದನ್ನು ರಚಿಸಲಾಗಿದೆ. ಗಾಂಜಾ ಸರಬರಾಜಾಗಬಹುದಾದ ಹಾಟ್ ಸ್ಪಾಟ್‌ಗಳನ್ನು ಗುರುತಿಸಿಕೊಂಡು ಪೊಲೀಸರು ನಿಗಾವಹಿಸಿದ್ದಾರೆ. ಈ ಮೂಲಕ ಅಕ್ರಮ ಗಾಂಜಾ ಸಾಗಾಟ ಜಾಲದ ಮೇಲೆ ಇಲಾಖೆ ಕಣ್ಣಿರಿಸಿದೆ.
ಗಾಂಜಾ ಸಾಗಾಟ: ಅಂತಾರಾಜ್ಯ ಗ್ಯಾಂಗ್‌ನ ಇಬ್ಬರ ಬಂಧನ
ಜಿಲ್ಲೆಯಲ್ಲಿ 2021 ಜನವರಿಯಿಂದ ಜುಲೈ ವರೆಗಿನ ಅವಧಿಯಲ್ಲಿ ಪೊಲೀಸರು ಬರೋಬ್ಬರಿ 23 ಗಾಂಜಾ ಸಾಗಾಟ ಪ್ರಕರಣಗಳನ್ನು ಪತ್ತೆ ಮಾಡಿದ್ದು, 34 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟೂ. 2,86,600 ಮೌಲ್ಯದ ಹತ್ತು ಕೆಜಿಯಷ್ಟುಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ವರೆಗೆ ಪತ್ತೆಯಾದ ಪ್ರಕರಣಗಳನ್ನು ಆಧರಿಸಿ ಉತ್ತರ ಕನ್ನಡ ಜಿಲ್ಲೆಗೆ ಹಾವೇರಿಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸಾಗರ, ಮಹಾರಾಷ್ಟ್ರದ ಪುಣೆ ಭಾಗದಿಂದ ಗಾಂಜಾ ಸಾಗಾಟವಾಗುತ್ತಿರುವುದು ಖಚಿತವಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಪೆಡ್ಲರ್‌ಗಳು ಸಹ ಬಂಧಿತರಾಗಿದ್ದು, ಕೆಲವು ಪ್ರಕರಣಗಳಲ್ಲಿ ಮೂಲ ಪತ್ತೆ ಮಾಡುವುದು ಕಷ್ಟಕರವಾಗಿದೆ. ಈ ಹಿಂದೆ ವಿದೇಶಿ ಪ್ರವಾಸಿಗರಿಂದಲೇ ಗಾಂಜಾ ಸರಬರಾಜು ಹೆಚ್ಚಾಗಿತ್ತು. ಆದರೆ ವಿದೇಶಿ ಪ್ರವಾಸಿಗರು ಇಲ್ಲದ ವೇಳೆಯೂ ಗಾಂಜಾ ಪೂರೈಕೆ ನಡೆದಿದ್ದು, ಸ್ಥಳೀಯ ಯುವಕರು ಗಾಂಜಾಕ್ಕೆ ದಾಸರಾಗಿರುವುದು ಬೆಳಕಿಗೆ ಬಂದಂತಾಗಿದೆ. ಪೂರೈಕೆ ಆಗುವ ಮೂಲಗಳನ್ನು ಹುಡುಕಿ ಕಟ್ಟುನಿಟ್ಟಿನ ತನಿಖೆ ನಡೆಸಬೇಕಿದೆ.
ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸುತ್ತಿದ್ದರೂ ಗಾಂಜಾದಂತಹ ಮಾದಕ ವಸ್ತು ತಡೆಯುವುದು ಸಾಕಷ್ಟು ಸವಾಲಿನ ಕೆಲಸವಾಗಿದೆ. ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು ಕೈಜೋಡಿಸಿದರೆ ಜಿಲ್ಲೆಯಲ್ಲಿನ ಗಾಂಜಾ ಗಮ್ಮತ್ತನ್ನು ನಿಯಂತ್ರಣಕ್ಕೆ ತರಬಹುದಾಗಿದೆ.
ಕಳೆದ ಕೆಲವು ತಿಂಗಳಲ್ಲಿ 23 ಗಾಂಜಾ ಸಾಗಾಟ ಪ್ರಕರಣ ಬೇಧಿಸಲಾಗಿದೆ. 34 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ವಿರೋಧಿ ಕಾಯಿದೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.