ಕೊರೋನಾತಂಕ: ಮಕ್ಕಳಲ್ಲಿ ಹೆಚ್ಚಿದ ವೈರಲ್‌ ಕಾಯಿಲೆ..!

*  ಮಕ್ಕಳಲ್ಲಿ ಹೆಚ್ಚಿದ ಕೆಮ್ಮು, ಜ್ವರ, ಉಸಿರಾಟದ ತೊಂದರೆ
*  ಆಸ್ಪತ್ರೆಗಳಿಗೆ ಎಡತಾಕುತ್ತಿರುವ ಮಕ್ಕಳು
*  ಕೊರೋನಾ ಆತಂಕ ಸೃಷ್ಟಿ
 

Increased Viral Disease  to Children in Bengaluru grg

ಬೆಂಗಳೂರು(ಸೆ.17): ರಾಜ್ಯ ರಾಜಧಾನಿಯಲ್ಲಿ ಕಳೆದ ಕೆಲ ದಿನಗಳಿಂದ ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯ ಕಾರಣಕ್ಕೆ ಆಸ್ಪತ್ರೆಗೆ ಹೆಚ್ಚು ಹೆಚ್ಚು ಮಂದಿ ಎಡತಾಕುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.

ಆರನೇ ತರಗತಿಗಿಂತ ಮೇಲ್ಪಟ್ಟ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ ಬಳಿಕ ಮಕ್ಕಳಲ್ಲಿ ಕೋವಿಡ್‌ನ ಗುಣಲಕ್ಷಣಗಳನ್ನು ಹೋಲುವ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, ವೈದ್ಯರು ಕೋವಿಡ್‌, ಡೆಂಘೀ ಮತ್ತು ಮಲೇರಿಯಾ ಪ್ರಕರಣದಲ್ಲಿ ಹೆಚ್ಚಳವಾಗಿಲ್ಲ. ಇದು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ವೈರಲ್‌ ಜ್ವರದ ಲಕ್ಷಣಗಳು ಎಂದು ಹೇಳುತ್ತಾರೆ.
ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ವೈರಲ್‌ ಪ್ರಕರಣಗಳು ಹೆಚ್ಚು ವರದಿಯಾಗುತ್ತವೆ. ಆಗಸ್ಟ್‌ ಕೊನೆಯ ವಾರ ಮತ್ತು ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ ಮಳೆಯಾಗುತ್ತಿತ್ತು. ಹಾಗೆಯೇ ದೈನಂದಿನ ಹವಾಮಾನದಲ್ಲಿಯೂ ಚಳಿ, ಸೆಖೆ ಮತ್ತು ಮಳೆ ಇರುವುದು ವೈರಲ್‌ ಮತ್ತು ಇನ್ನಿತರ ಆರೋಗ್ಯ ಸಮಸ್ಯೆ ಹೆಚ್ಚಲು ಕಾರಣವಾಗಿದೆ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ.

ಮಕ್ಕಳು ಆಸ್ಪತ್ರೆಗೆ ಬರುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಬಹುತೇಕರು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ವೈರಲ್‌ ಸೋಂಕಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಕೋವಿಡ್‌ ಇದೆಯೇ ಇಲ್ಲವೇ ಎಂಬುದರ ಕಡ್ಡಾಯ ಪರೀಕ್ಷೆ ನಡೆಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಮನೆಯ ಬಹುತೇಕರು ಹೊರಗೆ ಹೋಗುತ್ತಿದ್ದಾರೆ. ಮನೆಯಲ್ಲಿ ತಂದೆ ತಾಯಿ, ಅಜ್ಜ, ಅಜ್ಜಿ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಅವರಲ್ಲಿ ಕೋವಿಡ್‌ ಸೋಂಕಿನ ಗುಣಲಕ್ಷಣಗಳಿಲ್ಲದೇ ಅಥವಾ ಸೌಮ್ಯ ಗುಣ ಲಕ್ಷಣಗಳಿದ್ದು, ಮಕ್ಕಳಿಗೆ ಕೋವಿಡ್‌ ಬಂದಿರುವ ಸಾಧ್ಯತೆಯೂ ಇದೆ. ಆದರೆ, ಮಕ್ಕಳ ಕೋವಿಡ್‌ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದು ಫೆäರ್ಟಿಸ್‌ ಆಸ್ಪತ್ರೆಯ ಇಂಟರ್ನಲ್‌ ಮೆಡಸಿನ್‌ ವಿಭಾಗದ ನಿರ್ದೇಶಕಿ ಡಾ. ಶೀಲಾ ಚಕ್ರವರ್ತಿ ಹೇಳುತ್ತಾರೆ.

ಮಕ್ಕಳಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿದ್ದರೆ ಆಂತಕ ಬೇಡ

ಮಕ್ಕಳಲ್ಲಿನ ವೈರಲ್‌ ಕಾಯಿಲೆಗಳು ಪಾರಾಸಿಟಮಲ್‌, ಕ್ರೋಸಿನ್‌ಗಳಿಂದ ಕಡಿಮೆ ಆಗುತ್ತದೆ. ಜ್ವರ ತುಸು ಜಾಸ್ತಿ ಇದ್ದರೆ ಬೆಚ್ಚಗಿನ ಬಟ್ಟೆಯಲ್ಲಿ ಮೈ ಉಜ್ಜಬೇಕು. ಮೂರು ದಿನಗಳಿಂದ ಹೆಚ್ಚು ಜ್ವರ ಇದ್ದರೆ ವೈದ್ಯರನ್ನು ಭೇಟಿಯಾಗಬೇಕು. ದಯಮಾಡಿ ಸಣ್ಣಪುಟ್ಟಶೀತ, ಕೆಮ್ಮು, ಜ್ವರಗಳಿಗೆ ಅಂಟಿ ಬಯೊಟಿಕ್‌ಗಳನ್ನು ಸೇವಿಸಬೇಡಿ. ಇದರಿಂದ ಮಕ್ಕಳಲ್ಲಿ ಅಂಟಿ ಬಯೊಟಿಕ್‌ಗಳಿಗೆ ಪ್ರತಿರೋಧ ಹೆಚ್ಚಿಸಲಿದೆ ಎಂದು ಡಾ. ಶೀಲಾ ಚಕ್ರವರ್ತಿ ಹೇಳುತ್ತಾರೆ.

ನಮ್ಮಲ್ಲಿನ ಎಲ್ಲ ಬೆಡ್‌ಗಳು ಭರ್ತಿಯಾಗಿದೆ. ಈಗ ಕೆಮ್ಮು, ನೆಗಡಿ, ಜ್ವರ, ಉಬ್ಬಸ, ಉಸಿರಾಟದ ತೊಂದರೆಯ ಪ್ರಕರಣಗಳು ಬರುತ್ತಿವೆ. ಅದರಲ್ಲಿ ಕೆಲ ಮಕ್ಕಳಿಗೆ ವೈರಲ್‌ ನ್ಯುಮೋನಿಯಾ ಆಗಿದೆ. ಅಲ್ಲೊಂದು, ಇಲ್ಲೊಂದು ಡೆಂಗ್ಯೂ ಪ್ರಕರಣಗಳೂ ಇವೆ. ಕಳೆದ ವರ್ಷ ಇಷ್ಟು ಡೆಂಘೀ ಪ್ರಕರಣ ಬಂದಿರಲಿಲ್ಲ. ಉಸಿರಾಟದ ತೊಂದರೆಯಿಂದ ಬಂದ ಮಕ್ಕಳ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಲಾಗಿತ್ತು. ಆದರೆ, ಕೋವಿಡ್‌ ಪಾಸಿಟಿವ್‌ ಕಂಡು ಬಂದಿಲ್ಲ. ಈ ಋುತುವಿನಲ್ಲಿ ಬರುವ ಸಾಮಾನ್ಯ ವೈರಸ್‌ನಿಂದ ಅನಾರೋಗ್ಯ ಕಂಡುಬರುತ್ತಿದೆ ಎಂದು ಕೆ.ಸಿ.ಜನರಲ್‌ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮೀಪತಿ ಹೇಳುತ್ತಾರೆ.

ಕೊರೋನಾ ಸೇರಿದಂತೆ ಎಲ್ಲ ವೈರಸ್‌ಗಳು ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತದೆ. ಆದರೆ ಸೋಂಕಿನ ಗಂಭೀರತೆ ಬೇರೆ ಬೇರೆ ಆಗಿರುತ್ತದೆ. ಎಲ್ಲ ವೈರಾಣು ಕಾಯಿಲೆಗಳಿಗೂ ಸೂಕ್ತ ಚಿಕಿತ್ಸೆ ಇದೆ. ಆಮ್ಲಜನಕ ಕಡಿಮೆ ಆದರೆ ಆಮ್ಲಜನಕ ನೀಡಬೇಕು. ಜ್ವರ ಹೆಚ್ಚಿದ್ದರೆ ಪ್ಯಾರಸಿಟಮಲ್‌ ನೀಡಬೇಕು. ತಂಪಾದ ವಾತಾವರಣ ಮತ್ತು ಉಷ್ಣತೆಯಲ್ಲಿನ ವ್ಯತ್ಯಾಸ ವೈರಾಣು ಸಮಸ್ಯೆಗೆ ಕಾರಣವಾಗಿದೆ. ಶಾಲೆಗೆ ಹೋಗವ ಮಕ್ಕಳಿಗಿಂತಲೂ ಒಂದರಿಂದ ಮೂರು ವರ್ಷದ ಮಕ್ಕಳಲ್ಲಿ ವೈರಾಣು ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಡಾ. ಲಕ್ಷ್ಮೀಪತಿ ತಿಳಿಸುತ್ತಾರೆ.
 

Latest Videos
Follow Us:
Download App:
  • android
  • ios