ಮಯೂರ ಹೆಗಡೆ

ಹುಬ್ಬಳ್ಳಿ(ನ.02): ಕೋವಿಡ್‌-19 ಹಿನ್ನೆಲೆಯ ಲಾಕ್‌ಡೌನ್‌ ಕಾರಣಕ್ಕೆ ಒಂದಿಷ್ಟು ಶುದ್ಧವಾಗಿದ್ದ ಹು-ಧಾ ಮಹಾನಗರದ ಮತ್ತೆ ಹದಗೆಟ್ಟಿದೆ. ಮಾರ್ಚ್‌ ಅಂತ್ಯದಿಂದ ಎರಡೂವರೆ ತಿಂಗಳ ಕಾಲ ನಿಯಂತ್ರಣದಲ್ಲಿದ್ದ ವಾಯಮಾಲಿನ್ಯ ಪುನಃ ಹಿಂದಿನ ಸ್ಥಿತಿಗೆ ಮರಳಿದೆ.

ಲಾಕ್‌ಡೌನ್‌ ವೇಳೆ ಅಂದರೆ ಮಾರ್ಚ್‌ ಏಪ್ರಿಲ್‌-ಮೇ ತಿಂಗಳಲ್ಲಿ ಮಹಾನಗರದಲ್ಲಿ ವಾಯುಮಾಲಿನ್ಯ ಮಟ್ಟ ಶೇ. 50ರಷ್ಟು ತಗ್ಗಿತ್ತು. ಬಳಿಕ ಮಳೆ ಆರಂಭವಾದ ಹಿನ್ನೆಲೆಯಲ್ಲೂ ಕಳೆದ ಹದಿನೈದು ದಿನಗಳ ಹಿಂದಿನವರೆಗೂ ನಿಯಂತ್ರಣದಲ್ಲಿತ್ತು. ಈಚೆಗೆ ಮಾಲಿನ್ಯದ ಪ್ರಮಾಣ ಪುನಃ ಹಿಂದಿನ ಮಟ್ಟಕ್ಕೆ ತಲುಪಿದೆ. ಸಹಜ ಸ್ಥಿತಿಯತ್ತ ಮರಳಿದ ವಾಹನ ಸಂಚಾರ, ಕೈಗಾರಿಕೆಗಳ ಆರಂಭವಾದ ಕಾರಣದಿಂದ ಮಾಲಿನ್ಯದ ಕಣಗಳು ವಾತಾವರಣ ಸೇರಿವೆ.
ವಾಹನಗಳಿಂದ ಹೊರಹೊಮ್ಮುವ ಕಾರ್ಬನ್‌ ಮೊನಾಕ್ಸೈಡ್‌, ಸೂಕ್ಷ್ಮ ಧೂಳಿನ ಕಣಗಳಾದ ಪಿಎಂ (ಪರ್ಟಿಕ್ಯುಲೆಟ್‌ ಮ್ಯಾಟರ್‌) 2.5 ಮತ್ತು ಪಿಎಂ 10 ಕಣಗಳು ಮತ್ತೆ ವಾತಾವರಣದಲ್ಲಿ ಹೆಚ್ಚಿವೆ ಎಂಬುದನ್ನು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಕೆಎಸ್‌ಪಿಸಿಬಿ ಕಚೇರಿ ಅಂಕಿ-ಅಂಶಗಳು ತಿಳಿಸುತ್ತಿವೆ. ಒಟ್ಟಾರೆ ಪುನಃ ಹುಬ್ಬಳ್ಳಿ ಧೂಳುಮಯವಾಗಿದ್ದು, ಕೊರೋನಾ ತೊಲಗಿದರೂ ಮಾಲಿನ್ಯ ಕಾರಣಕ್ಕೆ ಜನತೆ ಮಾಸ್ಕ್‌ ಬಿಡುವ ಹಾಗಿಲ್ಲ ಎಂಬಂತಾಗಿದೆ.

ಈ ಕುರಿತು ಮಾತನಾಡಿದ ಜಿಲ್ಲಾ ಪರಿಸರ ಅಧಿಕಾರಿ ಶೋಭಾ, ಹುಬ್ಬಳ್ಳಿಗೆ ಹೋಲಿಸಿದರೆ, ಧಾರವಾಡದಲ್ಲಿ ಮಾಲಿನ್ಯ ಪ್ರಮಾಣ ಈಗಲೂ ಕೊಂಚ ಕಡಿಮೆ ಇದೆ. ಮುಂಬರುವ ಹಬ್ಬ ಇತರ ಕಾರ್ಯಕ್ರಮದಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ವಾಹನಗಳು, ಕೈಗಾರಿಕೆ ಆರಂಭವಾದ ಕಾರಣ ಹಿಂದಿನ ಸ್ಥಿತಿ ತಲುಪಿದೆ ಎಂದರು.

ಹುಬ್ಬಳ್ಳಿ: ನೈಋುತ್ಯ ರೈಲ್ವೆಯಲ್ಲಿ ಕನ್ನಡದ ಕಂಪು..!

ಎಷ್ಟಿತ್ತು? ಎಷ್ಟಾಗಿದೆ?

ನ್ಯಾಷನಲ್‌ ಆ್ಯಂಬಿಯಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್ (ಎನ್‌ಎಎಕ್ಯುಎಸ್‌) ಪ್ರಕಾರ ದಿನದ ಒಂದು ಮೀಟರ್‌ ಕ್ಯುಬಿಕ್‌ ಮೀ. ಧೂಳಿನಲ್ಲಿ ಪಿಎಂ 10 ಕಣ 100 ಮೈಕ್ರೋಗ್ರಾಂ ಒಳಗಿರಬೇಕು. ಅಪಾಯಕಾರಿ 2.5 ಕಣ 60 ಮೈ.ಗ್ರಾಂ ನೊಳಗೆ ಇರಬೇಕು. ಲಾಕ್‌ಡೌನ್‌ ವೇಳೆ ಪಿಎಂ 10 ಕಣಗಳು 40.54ರಿಂದ 55.21 ಮೈ.ಗ್ರಾಂ.ನಷ್ಟಿತ್ತು. ಅ. 30ರಂದು ಇದರ ಪಿಎಂ 10 ಗರಿಷ್ಠ 156 ಮೈ.ಗ್ರಾಂ. ತಲುಪಿದೆ. ಅ. 31ರಂದು 130 ಮೈ.ಗ್ರಾಂ. ಇತ್ತು. ಎರಡು ತಿಂಗಳ ಹಿಂದೆ ಅಪಾಯಕಾರಿ ಪಿಎಂ 2.5 ಕಣಗಳು 23.37ರಿಂದ 28.06 ರಷ್ಟಿತ್ತು. ಇದೀಗ ಒಂದು ಮೀಟರ್‌ ಕ್ಯುಬಿಕ್‌ ಮೀ. ಧೂಳಿನಲ್ಲಿ 64 ಮೈ.ಗ್ರಾಂ. ನಷ್ಟು ಪ್ರಮಾಣ ಇದೆ. ಅ. 31ರಂದು 54 ಮೈ.ಗ್ರಾ. ನಷ್ಟಿದೆ. ಇವು ಅತೀ ಅಪಾಯಕಾರಿ ಧೂಳಿನ ಕಣಗಳಾಗಿದ್ದು, ನಿರಂತರವಾಗಿ ಶ್ವಾಸಕೋಶ ತಲುಪಿದರೆ ಗಂಭೀರ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ. ಇನ್ನು ಕಾರ್ಬನ್‌ ಮೊನಾಕ್ಸೈಡ್‌ ಕೂಡ 0.8 ಮಿಲಿಗ್ರಾಂ ಇದೆ ಎಂದು ಎನ್‌ಎಎಕ್ಯುಎಸ್‌ನಲ್ಲಿ ದಾಖಲಾಗಿದೆ.

ಲಾಕ್‌ಡೌನ್‌ ವೇಳೆ ವಾಯುಮಾಲಿನ್ಯ ತಗ್ಗಿತ್ತು. ಮಳೆ ಇದ್ದ ಕಾರಣ ಧೂಳಿನ ಕಣಗಳ ಹಾರಾಟ ಕಡಿಮೆಯಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ ಕೊಂಚ ತಗ್ಗಿತ್ತು. ಈಗ ಪುನಃ ಹಿಂದಿನ ಸ್ಥಿತಿಗೆ ಬಂದಿದೆ ಎನ್ನಬಹುದು ಎಂದು ಜಿಲ್ಲಾ ಪರಿಸರ ಅಧಿಕಾರಿ ಶೋಭಾ ತಿಳಿಸಿದ್ದಾರೆ.