ಬೆಂಗಳೂರು: ಮೆಟ್ರೋ ನೇರಳೆ ಮಾರ್ಗ ಆರಂಭದ ಬಳಿಕ ಹೆಚ್ಚಾದ ಪ್ರಯಾಣಿಕರ ದಟ್ಟಣೆ
ಚಲ್ಲಘಟ್ಟ-ವೈಟ್‌ಫೀಲ್ಡ್ ನಡುವಣ ಪೂರ್ಣ ಮೆಟ್ರೋ ಸಂಚಾರ ಆರಂಭಕ್ಕೂ ಮೊದಲು ಈ ಮಾರ್ಗದಲ್ಲಿ 6.30 ಲಕ್ಷ ಜನ ಸರಾಸರಿ ಸಂಚರಿಸುತ್ತಿದ್ದರು. ಆದರೆ, ಇದೀಗ 70 ಸಾವಿರ ಹೆಚ್ಚುವರಿ ಪ್ರಯಾಣಿಕರು ದೈನಂದಿನ ಸಂಚರಿಸುತ್ತಿದ್ದಾರೆ. ಅದರಲ್ಲೂ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಹೆಚ್ಚಿನ ಟೆಕಿಗಳು ಮೆಟ್ರೋವನ್ನು ಬಳಸುತ್ತಿರುವುದು ನೇರಳೆ ಮಾರ್ಗದ ಹೆಚ್ಚಿನ ಜನಸಂಚಾರಕ್ಕೆ ಕಾರಣವಾಗಿದೆ.

ಬೆಂಗಳೂರು(ಅ.13): ನೇರಳೆ ಮಾರ್ಗದ ಪೂರ್ಣ ಸಂಚಾರ ಪ್ರಾರಂಭವಾದ ಮೂರನೇ ದಿನವೇ (ಆ.11) ನಮ್ಮ ಮೆಟ್ರೋ 7 ಲಕ್ಷ ಪ್ರಯಾಣಿಕರನ್ನು ಕಂಡಿದೆ. ಕ್ರಿಕೆಟ್ ಪಂದ್ಯ, ವೀಕೆಂಡ್ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಇಷ್ಟೊಂದು ಪ್ರಯಾಣಿಕರನ್ನು ಕಂಡಿದ್ದ ಬೆಂಗಳೂರು ಮೆಟ್ರೋ ನಿಗಮವು (ಬಿಎಂಆರ್‌ಸಿಎಲ್) ಇದೀಗ ಸಾಮಾನ್ಯ ದಿನಗಳಲ್ಲೂ ಇಷ್ಟು ಪ್ರಮಾಣದ ಜನರಿಗೆ ಸೇವೆ ಒದಗಿಸುತ್ತಿದೆ.
ಚಲ್ಲಘಟ್ಟ-ವೈಟ್‌ಫೀಲ್ಡ್ ನಡುವಣ ಪೂರ್ಣ ಮೆಟ್ರೋ ಸಂಚಾರ ಆರಂಭಕ್ಕೂ ಮೊದಲು ಈ ಮಾರ್ಗದಲ್ಲಿ 6.30 ಲಕ್ಷ ಜನ ಸರಾಸರಿ ಸಂಚರಿಸುತ್ತಿದ್ದರು. ಆದರೆ, ಇದೀಗ 70 ಸಾವಿರ ಹೆಚ್ಚುವರಿ ಪ್ರಯಾಣಿಕರು ದೈನಂದಿನ ಸಂಚರಿಸುತ್ತಿದ್ದಾರೆ. ಅದರಲ್ಲೂ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಹೆಚ್ಚಿನ ಟೆಕಿಗಳು ಮೆಟ್ರೋವನ್ನು ಬಳಸುತ್ತಿರುವುದು ನೇರಳೆ ಮಾರ್ಗದ ಹೆಚ್ಚಿನ ಜನಸಂಚಾರಕ್ಕೆ ಕಾರಣವಾಗಿದೆ.
ಇದು ನಮ್ಮ ಮೆಟ್ರೋ ತಾಕತ್ತು: 43 ಕಿ.ಮೀ ಪ್ರಯಾಣಕ್ಕೆ ಕೇವಲ 66 ರೂ.!
ಅ.7ರಂದು ಅಂದರೆ ಕೆ.ಆರ್.ಪುರ-ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚಲ್ಲಘಟ್ಟ ನಡುವೆ ಸುಮಾರು 6.28 ಲಕ್ಷ ಜನ ಸಂಚರಿಸಿದ್ದರು. ಅ.11ರಂದು 7,01,455 ಜನ ಓಡಾಡಿದ್ದಾರೆ. ಹಿಂದೆ ತೀರಾ ವಿಶೇಷ ಸಂದರ್ಭದಲ್ಲಿ ಮಾತ್ರ ಇಷ್ಟೊಂದು ಪ್ರಯಾಣಿಕರು ಮೆಟ್ರೋವನ್ನು ಬಳಸಿದ್ದರು. ಮುಂದಿನ ವಾರಕ್ಕೆ ಈ ಸಂಖ್ಯೆ 7.50 ಲಕ್ಷ ತಲುಪುವ ನಿರೀಕ್ಷೆಯಿದ್ದು, ನಾವು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ದಿನಕ್ಕೆ 180 ಟ್ರಿಪ್‌ಗಳಂತೆ ನೇರಳೆ ಮಾರ್ಗದಲ್ಲಿ ತಲಾ ಆರು ಕೋಚ್‌ಗಳ 33 ರೈಲುಗಳನ್ನು ಸಂಚರಿಸಲಾಗುತ್ತಿದೆ. ಆದರೆ, ಪ್ರಯಾಣಿಕರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಕೆಲ ರೈಲುಗಳನ್ನು ಈ ಮಾರ್ಗದಲ್ಲಿ ಓಡಿಸಲು ಯೋಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ನಗರದ ಮೆಜೆಸ್ಟಿಕ್ ಸೇರಿ ಕೆ.ಆರ್.ಪುರ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.