ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿದ ಕುರಿಗಳ್ಳತನ: ಆತಂಕದಲ್ಲಿ ಕುರಿಗಾಹಿ ಸಮುದಾಯ!
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಕುರಿಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕುರಿಗಾಹಿ ಸಮುದಾಯಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಮೇ.29): ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಕುರಿಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕುರಿಗಾಹಿ ಸಮುದಾಯಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ. ರಾತ್ರಿ ಹೊತ್ತು ಅಟ್ಯಾಕ್ ಮಾಡುತ್ತಿರುವ ಕುರಿಗಳ್ಳರು ಕುರಿಗಳನ್ನ ಕದ್ದೊಯ್ಯುತ್ತಿದ್ದು, ಇದ್ರಿಂದ ಕುರಿಗಾಹಿಗಳು ಪೋಲಿಸ ಇಲಾಖೆ ವಿರುದ್ದ ಅಸಮಾಧಾನಗೊಂಡಿದ್ದು, 10 ದಿನಗಳ ಡೆಡ್ಲೈನ್ ನೀಡಿದ್ದಾರೆ.
ಹೌದು! ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕುರಿಗಾಹಿಗಳು ತಮಗೆ ಅನುಕೂಲವಿದ್ದಷ್ಟು ಕುರಿಗಳ ಸಾಕಾಣಿಕೆ ಮಾಡುವ ಮೂಲಕ ಅದರಿಂದಲೇ ಬದುಕು ಕಟ್ಟಿಕೊಂಡು ಮುನ್ನಡೆಯೋದನ್ನ ನೋಡುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕುರಿಗಳಿಗೆ ಇನ್ನಿಲ್ಲದ ಬೇಡಿಕೆ ಬರುತ್ತಿದ್ದಂತೆ ಕಳ್ಳರು ಇದನ್ನೇ ಒಂದು ಉದ್ಯೋಗವನ್ನಾಗಿಸಿ ರಾತ್ರೋರಾತ್ರಿ ಕುರಿದೊಡ್ಡಿಗಳಿಗೆ ಕನ್ನ ಹಾಕುವ ಮೂಲಕ ಇಲ್ಲವೇ ಯಾರೂ ಇಲ್ಲದಿರುವ ಹೊಲಗದ್ದೆಗಳಿಗೆ ಲಗ್ಗೆ ಇಟ್ಟು ಅಲ್ಲಿರುವ ಕುರಿಗಳನ್ನ ಹೊತ್ತೊಯ್ಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಆಗಾಗ ನಡೆಯುತ್ತಿದ್ದರೂ ಕುರಿಗಾಹಿಗಳು ಇದನ್ನು ಮೇಲಿಂದ ಮೇಲೆ ಪೋಲಿಸ ಇಲಾಖೆಗೂ ಕಂಪ್ಲೇಂಟ್ ಮಾಡಿದ್ದರು ಆದರೂ ಅದು ಯಾಕೋ ಎಫೆಕ್ಟ್ ಆಗಿಲ್ಲ.
ನಾನೇನಾದ್ರೂ ತಪ್ಪು ಮಾಡಿದ್ರೆ ದೇವರು ನನಗೆ ಶಿಕ್ಷೆ ನೀಡಲಿ; KS Eshwarappa
ಒಂದೇ ತಿಂಗಳಲ್ಲಿ 42ಕ್ಕೂ ಅಧಿಕ ಕುರಿಗಳ್ಳತನ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಕುರಿಗಳ್ಳತನ ನಡೆಯುತ್ತಿವೆ. ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರ, ಲೋಕಾಪೂರ, ಇಲಕಲ್, ಹುನಗುಂದ, ಗುಳೇದಗುಡ್ಡ ಹಾಗೂ ಬಾದಾಮಿ ಸೇರಿದಂತೆ ಹಲವೆಡೆ ರಾತ್ರೋರಾತ್ರಿ ಕಳ್ಳರು ಕುರಿಗಳ್ಳತನಕ್ಕೆ ಮುಂದಾಗುತ್ತಿದ್ದಾರೆ. ಈ ಮಧ್ಯೆ ಇದೇ ತಿಂಗಳಲ್ಲಿಯೇ ಈಶ್ವರ ಬಿಜ್ಜಣ್ಣವರ ಅವರ 32 ಕುರಿಗಳು, ಭೀಮಪ್ಪ ಎಂಬುವವರ 5 ಕುರಿಗಳು ಸೇರಿದಂತೆ 42 ಕುರಿಗಳು ಕಳ್ಳತನವಾಗಿವೆ. ಹೀಗಾಗಿ ಕುರಿಗಾರರು ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆಲ್ಲಾ ಜಿಲ್ಲೆಯ ಪೋಲಿಸ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿರೋ ಕುರಿಗಾರ ಮುಖಂಡರು ಪೋಲಿಸ ಇಲಾಖೆ ಈ ಸಂಬಂಧ ಇನ್ನು 10 ದಿನಗಳಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡೋದಾಗಿ ಡೆಡ್ಲೈನ್ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಕುರಿಗಾರ ಮುಖಂಡ ಸಿದ್ದಪ್ಪ ಹೇಳಿದ್ದಾರೆ.
ಎಸ್ಪಿ ಕಚೇರಿ ಎದುರೇ ಧರಣಿ: ಜಿಲ್ಲೆಯ ಹಲವೆಡೆ ಈ ತೆರನಾದ ಕುರಿಗಳ್ಳತನ ಪ್ರಕರಣಗಳು ಕಂಡು ಬರುತ್ತಿರೋದು ಕುರಿಗಾಹಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿ ಆತಂಕಪಡುವಂತಾಗಿದೆ. ಒಂದೊಮ್ಮೆ ಕುರಿಗಳ ಕಳ್ಳತನ ಜೊತೆಗೆ ತಮ್ಮ ಮೇಲೆ ಹಲ್ಲೆ ಸೇರಿದಂತೆ ಜೀವಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳಿದ್ದು, ಹೀಗಾಗಿ ಕೂಡಲೇ ಮಾನ್ಯ ಪೋಲಿಸ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಬಾಗಲಕೋಟೆ ಎಸ್ಪಿ ಕಚೇರಿ ಎದುರು ಧರಣಿಯನ್ನೂ ಸಹ ನಡೆಸಲಾಯಿತು. ಅಲ್ಲದೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನೂ ಸಹ ನಡೆಸಲಾಯಿತು. ಈ ಸಂಬಂಧ ಪೋಲಿಸ ಇಲಾಖೆ ತಂಡವನ್ನ ರಚಿಸಿ ಕಳುವಾಗಿರೋ ಕುರಿಗಳ್ಳರನ್ನ ಪತ್ತೆ ಹಚ್ಚಿ ಕುರಿ ಕಳೆದುಕೊಂಡವರಿಗೆ ನ್ಯಾಯ ಕೊಡಿಸುವ ಕೆಲ್ಸ ಮಾಡಬೇಕೆಂದು ಮುಖಂಡ ಯಲ್ಲಪ್ಪ ಹೆಗಡೆ ಒತ್ತಾಯಿಸಿದ್ದಾರೆ.
ಬಾಗಲಕೋಟೆ ತೋವಿವಿ ಘಟಿಕೋತ್ಸವ: 16 ಗೋಲ್ಡ್ ಮೆಡಲ್‌ಗೆ ಮುತ್ತಿಟ್ಟ ರೈತನ ಮಗಳು..!
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಕುರಿಗಳ್ಳತನ ಪ್ರಕರಣಗಳು ಜಿಲ್ಲೆಯ ಕುರಿಗಾಹಿ ಸಮುದಾಯಕ್ಕೆ ತೀವ್ರ ಸಮಸ್ಯೆಯನ್ನು ಎದುರಿಸುವಂತೆ ಮಾಡಿದ್ದು, ಇದಕ್ಕೆ ಪೋಲಿಸ್ ಇಲಾಖೆ ಯಾವ ಕ್ರಮಗಳನ್ನ ಕೈಗೊಳ್ಳುವುದರ ಮೂಲಕ ಅವರ ನೆರವಿಗೆ ಧಾವಿಸುತ್ತೆ ಅಂತ ಕಾದು ನೋಡಬೇಕಿದೆ.