ಬಾಗಲಕೋಟೆ ತೋವಿವಿ ಘಟಿಕೋತ್ಸವ: 16 ಗೋಲ್ಡ್​ ಮೆಡಲ್‌ಗೆ ಮುತ್ತಿಟ್ಟ ರೈತನ ಮಗಳು..!

*   ಗೋಲ್ಡ್​ ಮೆಡಲ್​ ಪಡೆದವಳ ಭವಿಷ್ಯದ ಓದಿಗೆ ಸಂಕಷ್ಟ
*   ತೋಟಗಾರಿಕೆ ವಿವಿ 11ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
*  ಉಮ್ಮೆಸರಾಗೆ ವಿದೇಶಿ ಕಲಿಕೆಗೆ ಬೇಕಿದೆ ಸಾಲ ಸೌಲಭ್ಯ 
 

Umme Sara Got 16 Gold Medals From Horticultural Sciences University  Bagalkot grg

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಮೇ.26): ಬದುಕಿನಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಈ ಮಧ್ಯಮ ಕುಟುಂಬ ವರ್ಗದಿಂದ ಬಂದ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಯಾಕಂದರೆ ಓರ್ವ ರೈತನ ಮಗಳು ಶೈಕ್ಷಣಿಕವಾಗಿ ಅದ್ಭುತ ಸಾಧನೆ ಮಾಡಿ ಸಾಧನೆ ಶಿಖರ ಏರಿದ್ದಾಳೆ. ಸಾಲದ್ದಕ್ಕೆ ವಿಶ್ವವಿದ್ಯಾಲಯದಲ್ಲಿ ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. 

ಅದು ರಾಜ್ಯದ ಮೊದಲ ತೋಟಗಾರಿಕೆ ವಿವಿಯ 11ನೇ ಘಟಿಕೋತ್ಸವ, ಘಟಿಕೋತ್ಸವದ ವೇದಿಕೆ ಮೇಲೆ ರಾಜ್ಯಪಾಲರಿಂದ  ಪದವಿ ಪ್ರಮಾಣಪತ್ರ  ಚಿನ್ನದ ಪದಕ ವಿತರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ತಮಗೆ ಸಿಕ್ಕ ಚಿನ್ನದ ಪದಕ ತೋರಿಸಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳಿದ್ದರು, ಇವುಗಳ ಮಧ್ಯೆ ಏಕಕಾಲಕ್ಕೆ 16 ಗೋಲ್ಡ್​ ಮೆಡಲ್​ ಪಡೆದು ಖುಷಿಯಲ್ಲಿರೋ ವಿದ್ಯಾರ್ಥಿನಿ, ಇಡೀ ಘಟಿಕೋತ್ಸವದಲ್ಲಿ ಹಬ್ಬದ ವಾತಾವರಣ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳಿದ್ದರು. 

Umme Sara Got 16 Gold Medals From Horticultural Sciences University  Bagalkot grg

Textbook Controversy: ಪಠ್ಯ ಪರಿಷ್ಕರಣೆಗೆ ಹೆಚ್ಚಾಗುತ್ತಿದೆ ವಿರೋಧದ ಕೂಗು!

ಹೌದು, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಸ್ನಾತಕ, ಸ್ನಾತಕೋತ್ತರ, ಪಿಹೆಚ್‌ಡಿ ಸೇರಿದಂತೆ ಒಟ್ಟು 680 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಇದರಲ್ಲಿ ಓರ್ವ ವಿದ್ಯಾರ್ಥಿನಿ ಸಾಧನೆ ಮಾತ್ರ ಅಪಾರವಾಗಿತ್ತು. ಸಾಧಿಸೋಕೆ ಛಲ ಬೇಕು ಗುರಿಯಿರಬೇಕು ಎಂಬುದನ್ನು ಓರ್ವ ರೈತನ‌ ಮಗಳು ಸಾಧಿಸಿ ತೋರಿಸಿದ್ದಳು. ಅವಳೇ ಉಮ್ಮೇಸರಾ. ಮೂಲತ: ಚಿಕ್ಕಮಗಳೂರು ಜಿಲ್ಲೆಯ ಸಾತಿಹಳ್ಳಿ ಗ್ರಾಮದ ಹಸ್ಮತ್ ಅಲಿ ಮತ್ತು ರಹೀಮ ಬಾನು ಎಂಬುವವರ ಮಗಳಾದ ಉಮ್ಮೇಸರಾ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ವಿಜ್ಞಾನಿಗಳ ಬಿಎಸ್‌ಸಿ ಪದವಿಯಲ್ಲಿ ಬರೋಬ್ಬರಿ 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನ್ನಿಸಿಕೊಂಡಿದ್ದಾಳೆ. 

ತೋಟಗಾರಿಕೆ ಮಹಾವಿದ್ಯಾಲಯ ಶಿರಸಿಯಲ್ಲಿ ಬಿಎಸ್‌ಸಿ ಪದವಿ ಓದಿದ ಉಮ್ಮೇಸರಾಗೆ 16 ಚಿನ್ನದ‌ ಪದಕಗಳು ಅರಸಿ ಬಂದಿವೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ರಿಂದ ಚಿನ್ನದ ಪದಕ ಪಡೆದ ಉಮ್ಮೇಸರಾ ಚಿನ್ನದ ಪದಕಗಳನ್ನು ತಮ್ಮ ತಂದೆ ತಾಯಿ ಕೈಗೆ ಕೊಟ್ಟು ಸಂಭ್ರಮಿಸಿದರು. ನಾನು ರೈತನ ಮಗಳು ನನ್ನ ಸಾಧನೆಗೆ ತಂದೆ ತಾಯಿ ಪ್ರೋತ್ಸಾಹ ಕಾರಣ ಅವರ ಮುಖದಲ್ಲಿ‌ ನನಗಿಂತ ಖುಷಿ‌ ಸಂಭ್ರಮವಿದೆ, ಅದು ನನಗೆ ಸಾಕು ಎಂದರು. ಮುಂದೆ ಇಟಲಿಯಲ್ಲಿ ಎಂಎಸ್‌ಸಿ ಮಾಡುವ ಕನಸು ಹೊಂದಿದ್ದು, ವಿದ್ಯಾಭ್ಯಾಸ ಮುಗಿಸಿ ಸಂಶೋಧನಾ ವಿಭಾಗದಲ್ಲಿ ಸಾಧನೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು.

ಉಮ್ಮೇಸರಾ ವಿದೇಶಿ ಶಿಕ್ಷಣಕ್ಕೆ ಸಿಗ್ತಿಲ್ಲ ಸಾಲ, ಸಿಎಂಗೆ ಮೊರೆ ಇಟ್ಟ ಕುಟುಂಬ

ಉಮ್ಮೇಸರಾ ಸದ್ಯ ಶಿರಸಿಯಲ್ಲಿ ತೋಟಗಾರಿಕೆ ಬಿಎಸ್‌ಸಿ ಪದವಿ‌ ಮುಗಿಸಿದ್ದಾರೆ. ಬಿಎಸ್‌ಸಿಯಲ್ಲಿ 91.1 ಅಂಕ ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನೆಲೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ಇವರ ತಂದೆ ಹಸ್ಮತ್ ಅಲಿ ರೈತನಾಗಿದ್ದು ನಾಲ್ಕು ಎಕರೆ ಹೊಲ ಇದೆ, ಹೊಲದಲ್ಲಿ ಕಾಫಿ ಕರಿಮೆಣಸು ಕೃಷಿ ಮಾಡಿದ್ದಾರೆ. ಮೂಲತಃ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿನಿಯಾಗಿರುವ ಉಮ್ಮೇಸರಾ ಸ್ಕಾಲರ್ ಶಿಪ್, ಎಜ್ಯುಕೇಶನ್ ಲೋನ್ ಪಡೆದು ಓದಿ ಸಾಧಿಸಿದ್ದಾಳೆ. ಆದರೆ ಇದೀಗ ಮಗಳು ಮುಂದಿನ ಶಿಕ್ಷಣವನ್ನು ಇಟಲಿಯಲ್ಲಿ ಕಲಿಯಬೇಕಿರೋದ್ರಿಂದ ಇದ್ದ ಜಮೀನಿನ ಮೇಲೆ ಸಾಲ ಕೇಳಿದ್ರೆ ಬ್ಯಾಂಕ್​ನವರು ಸಾಲ ನೀಡಲು ಮುಂದಾಗುತ್ತಿಲ್ಲವಂತೆ. ಈ ಬಗ್ಗೆ ಸಾಕಷ್ಟು ಬಾರಿ ಬ್ಯಾಂಕ್​ಗೆ ಅಲೆದ್ರೂ ಪ್ರಯೋಜನವಾಗಿಲ್ಲ.

ಹೀಗಾಗಿ ಮಗಳ ಸಾಧನೆಗೆ ಸಂಭ್ರಮಿಸುತ್ತಲೇ ಅಸಮಾಧಾನ ಹೊರಹಾಕಿದ ತಂದೆ ಹಸ್ಮತ್ ಅಲಿ ಅವರು, ಮಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ಹೊಂದಿದ್ದಾಳೆ. ಏನು ಮಾಡೋದು  16 ಚಿನ್ನದ ಪದಕ ಪಡೆದು ಇಷ್ಟು ಸಾಧನೆ ಮಾಡಿದರೂ ನಮ್ಮ ಹೊಲದ ಮೇಲೆ ಹದಿನೈದು ಲಕ್ಷ ಸಾಲ ಕೊಡಲು ಯಾವ ಬ್ಯಾಂಕ್ ಒಪ್ಪುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನಮ್ಮ ನೆರವಿಗೆ ಬಂದು ನಮ್ಮ ಮಗಳ ಓದಿಗೆ ಸಹಾಯ ಮಾಡಬೇಕೆಂದು ಉಮ್ಮೇಸರಾಳ ತಂದೆ ಹಸ್ಮತ್ ಅಲಿ ಮತ್ತು ತಾಯಿ ರಹೀಮಾ ಭಾನು ಮನವಿ ಮಾಡಿದ್ದಾರೆ.                      

ಪಶು ವಿವಿ 12ನೇ ಘಟಿಕೋತ್ಸವ: ರೈತನ ಮಗನ ಚಿನ್ನದ ಫಸಲು, ಸೈನಿಕನ ಮಗಳ ಬಂಗಾರದ ಬೇಟೆ          

ಬಾಗಲಕೋಟೆ ತೋಟಗಾರಿಕೆ ವಿವಿಯಿಂದ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ವಿತರಣಾ ಸಂಪ್ರದಾಯ

ಇನ್ನು ತೋಟಗಾರಿಕೆ ವಿವಿಯಲ್ಲಿ ಇದೇ ಮೊದಲ ಬಾರಿಗೆ ಗೌರವ ಡಾಕ್ಟರೇಟ್​ ನೀಡುವ ಸಂಪ್ರದಾಯ ಶುರುವಾಗಿದ್ದು, ಮೊದಲ ಬಾರಿಗೆ ಎಚ್​.ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್​ ಪದವಿಯನ್ನು ರಾಜ್ಯಪಾಲರಾದ ಥಾವರಚಂದ್​ ಗೆಹ್ಲೋಟ್​ ನೀಡಿ ಗೌರವಿಸಿದರು. ಇನ್ನು ವೇದಿಕೆಯಲ್ಲಿ ಮಾತನಾಡಿದ ರಾಜ್ಯಪಾಲರು ಭವಿಷ್ಯದಲ್ಲಿ ತೋಟಗಾರಿಕೆ ಬೆಳೆಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ ಎಂದು ಹೇಳಿದರು. 

Umme Sara Got 16 Gold Medals From Horticultural Sciences University  Bagalkot grg

ವೇದಿಕೆಯಲ್ಲಿ ಮಾತಾಡಿದ ತೋಟಗಾರಿಕೆ ಸಚಿವ ಮುನಿರತ್ನ, ಇಸ್ರೇಲ್ ದೇಶ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದು ಇಸ್ರೇಲ್ ಗೆ ಹೋಗಬಯಸುವ ರೈತರ ಪಟ್ಟಿ ಕಳಿಸಿ ಇಸ್ರೇಲ್ ಗೆ ರೈತರನ್ನು ನಮ್ಮ ಇಲಾಖೆಯಿಂದ ಕಳಿಸುವ ಕಾರ್ಯ ಮಾಡೋದಾಗಿ ವಿವಿ ಕುಲಪತಿ ಅವರಿಗೆ ಸಚಿವ ಮುನಿರತ್ನ ಹೇಳಿದರು.

ಒಟ್ಟಿನಲ್ಲಿ ಮದ್ಯಮ ವರ್ಗದ ರೈತನ ಮಗಳು ಉಮ್ಮೇಸರಾ ತನ್ನ ಶ್ರಮದಿಂದ ಸಾಧನಾ ಶಿಖರ ತಲುಪಿ ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದ್ದಾಳೆ. ಇನ್ನಾದ್ರೂ ಸಂಭಂದಪಟ್ಟ ಬ್ಯಾಂಕ್​ನವರು ಆಕೆಯ ವಿದೇಶಿ ಶಿಕ್ಷಣಕ್ಕೆ ಸಾಲ ನೀಡುವಂತಾಗಲಿ ಇಲ್ಲವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಉಮ್ಮೆಸರಾಳ ಶಿಕ್ಷಣಕ್ಕೆ ಸಹಾಯ ಮಾಡಲಿ ಅನ್ನೋದೆ ಎಲ್ಲರ ಆಶಯ.
 

Latest Videos
Follow Us:
Download App:
  • android
  • ios