ಕಲಬುರಗಿ(ಫೆ.06): ಜಿಲ್ಲೆಯಲ್ಲಿ ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹಗಳಲ್ಲಿ ಹೆಚ್ಚಳವಾಗಿದೆಯೆ? ಅಂಕಿ- ಸಂಖ್ಯೆ ಗಮನಿಸಿದಾಗ ಹೌದು ಎಂದೇ ಹೇಳಬೇಕಾಗಿದೆ. ಇಲ್ಲಿನ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮನ್ವವಯ ಮತ್ತು ಪರಿಶೀಲನಾ ಸಮಿತಿಗಳ ಸಭೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಪ್ರಸಕ್ತ 2020-21ನೇ ಸಾಲಿನಲ್ಲಿ ಬಾಲ್ಯ ವಿವಾಹ ತಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1098 ಟೋಲ್‌ ಫ್ರೀ ಸಂಖ್ಯೆಗೆ ಬಂದ ದೂರಿನ ಕರೆಯನ್ನಾಧರಿಸಿ ಲಾಕ್ಡೌನ್‌ ಅವಧಿಯ ಬಾಲ್ಯ ವಿವಾಹ ಹೆಚ್ಚಳದ ಬಗ್ಗೆ ಅಧಿಕಾರಿಗಳು ಗಮನ ಹರಿಸಿದ್ದು ಆತಂಕ ಪಟ್ಟಿದ್ದಾರೆ.

2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 89 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಆದರೆ 110 ಬಾಲ್ಯ ವಿವಾಹದ ಕರೆಗಳು ಚೈಲ್ಡ್‌ಲೈನ್‌ಗೆ ಬಂದಿವೆ. ಇದೇ ಆತಂಕದ ಸಂಗತಿ. ಈ ಪೈಕಿ ಹಲವು ಹುಸಿ ಕರೆಗಳಿದ್ದರೂ ಹೆಚ್ಚಿನವು ಬಾಲ್ಯ ವಿವಾಹದ ಕರೆಯ ಪ್ರಕರಣಗಲೇ ಆಗಿರೋದರಿಂದ ಸಭೆಯಲ್ಲಿ ಅಧಿಕಾರಿಗಳು ಈ ಬಗ್ಗೆ ತೆಲೆಕೆಡಿಸಿಕೊಳ್ಳುವಂತಾಗಿದೆ.

ಕೊರೋನಾ ಭಯ: ಬೇಗ ಬೇಗ ಮದ್ವೆಯಾಗ್ತಿದ್ದಾರೆ ಜನ, ಬಾಲ್ಯವಿವಾಹ ಶೇ.15 ಹೆಚ್ಚಳ!

ಚೈಲ್ಡ್‌ ಲೈನ್‌ ಸಂಯೋಜಕ ಬಸವರಾಜ ಅವರು 110 ಬಾಲ್ಯ ವಿವಾಹ ಆಗುವ ಪ್ರಕರಣಗಳು ಸೇರಿದಂತೆ 154 ಹುಸಿ ಕರೆಗಳ ಮಾಹಿತಿ ಬಂದಿವೆ ಎಂದಾಗ, ಪ್ರತಿ ಸಿ.ಡಿ.ಪಿ.ಓ. ಗಳು ತಮ್ಮ ತಾಲೂಕಿನ ಎಲ್ಲಾ ಪ್ರಕರಣಗಳ ಸಮಗ್ರ ವರದಿ ನೀಡುವಂತೆ ಡಿ.ಸಿ. ಜ್ಯೋತ್ಸಾನ ಸೂಚಿಸಿದರಲ್ಲದೆ ಬಾಲ್ಯ ವಿವಾಹ ತಡೆಗಟ್ಟಲು ಐ.ಇ.ಸಿ. ಚಟುವಟಿಕೆಗಳು ತೀವ್ರಗೊಳಿಸಬೇಕು. ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಎಫ್‌.ಐ.ಆರ್‌. ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿದ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಮಾತನಾಡಿ ತಮಗೆ ಸರ್ಕಾರದಿಂದ 500 ರು. ಮಾಸಾಶನ ನೀಡುವ ಯೋಜನೆ ಇದೆ. ಇಲ್ಲಿನ ಕಂದಾಯ ಇಲಾಖೆಯಲ್ಲಿ ಯೋಜನೆಯ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣ ಮಾಸಾಶನ ತಮಗೆ ಸರಿಯಾಗಿ ತಲುಪುತ್ತಿಲ್ಲ. ಅಲ್ಲದೆ ಮನೆಯಿಲ್ಲದೆ ಬಹಳಷ್ಟು ಜನ ಲೈಂಗಿಕ ಅಲ್ಪಸಂಖ್ಯಾತರಿದ್ದು, ಇವರಿಗೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್‌.ಶೆಟ್ಟರ್‌, ಡಿ.ಎಚ್‌.ಓ. ಡಾ.ರಾಜಶೇಖರ್‌ ಮಾಲಿ, ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ರುದ್ರವಾಡಿ, ಡಿ.ಎಸ್‌.ಪಿ. ಜೇಮ್ಸ್‌ ಮಿನೇಜಸ್‌, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಎಸ್‌.ಎನ್‌.ಹಿರೇಮಠ, ಆಹಾರ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ತಾಲೂಕಿನ ಸಿ.ಡಿ.ಪಿ.ಓ.ಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಭರತೇಶ ಶೀಲವಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.