Asianet Suvarna News Asianet Suvarna News

ಕೊರೋನಾ ಭಯ: ಬೇಗ ಬೇಗ ಮದ್ವೆಯಾಗ್ತಿದ್ದಾರೆ ಜನ, ಬಾಲ್ಯವಿವಾಹ ಶೇ.15 ಹೆಚ್ಚಳ!

ರಾಜ್ಯದಲ್ಲಿ ಕೊರೋನಾ ಬಳಿಕ ಬಾಲ್ಯವಿವಾಹ ಶೇ.15 ಹೆಚ್ಚಳ! ಶಾಲೆ ಬಂದ್‌, ಬಡತನ ಮುಖ್ಯ ಕಾರಣ | 2020ರಲ್ಲಿ 188 ಬಾಲ್ಯವಿವಾಹ ಪತ್ತೆ | 2074 ಬಾಲ್ಯವಿವಾಹಕ್ಕೆ ಅಧಿಕಾರಿಗಳ ತಡೆ

Child marriage increased in Karnataka during pandemic dpl
Author
Bangalore, First Published Jan 2, 2021, 7:50 AM IST

ಬೆಂಗಳೂರು(ಜ.02): ಕೊರೋನಾ ವೈರಸ್‌ ಕಂಡು ಬಂದ ಬಳಿಕ ಕಾರ್ಮಿಕರ ವಲಸೆ, ನಿರುದ್ಯೋಗ, ಬಡತನ, ಶಾಲೆ ಬಂದ್‌ ಕಾರಣಗಳಿಂದಾಗಿ ರಾಜ್ಯದಲ್ಲಿ ಬಾಲ್ಯ ವಿವಾಹ ಹೆಚ್ಚಳವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಾಲ್ಯ ವಿವಾಹ ಪ್ರಮಾಣ ಶೇ.15ರಷ್ಟುಏರಿಕೆಯಾಗಿದೆ.

2020ರ ಸಾಲಿನಲ್ಲಿ ರಾಜ್ಯದಲ್ಲಿ 188 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ 2074 ಬಾಲ್ಯ ವಿವಾಹ ನಡೆಸುವ ಪ್ರಯತ್ನವನ್ನು ಅಧಿಕಾರಿಗಳು ತಡೆದಿದ್ದಾರೆ. ಈ ಪ್ರವೃತಿ ಲಾಕ್‌ಡೌನ್‌ ಸಮಯದಲ್ಲೇ ವಿಪರೀತವಾಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೊರೋನಾ ಸೋಂಕು: ಆತಂಕ

ರಾಜ್ಯದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಹಾಸನದಲ್ಲಿ ನಡೆದಿದೆ. ಹಾಸನದಲ್ಲಿ 26, ಮಂಡ್ಯ 25, ಮೈಸೂರು 24, ಬೆಳಗಾವಿಯಲ್ಲಿ 19 ಪ್ರಕರಣಗಳು ಕಂಡುಬಂದಿವೆ. ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ. ಬಳ್ಳಾರಿಯಲ್ಲಿ 218, ಮೈಸೂರಿನಲ್ಲಿ 177, ಬೆಳಗಾವಿಯಲ್ಲಿ 131 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಈ ಅವಧಿಯಲ್ಲಿ ಉಡುಪಿ, ಕಲಬುರಗಿ, ಚಿಕ್ಕಮಗಳೂರಿನಲ್ಲಿ ಒಂದೂ ಪ್ರಕರಣಗಳು ವರದಿಯಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೇ ಅಧಿಕ ಪ್ರಕರಣಗಳು ವರದಿಯಾಗಿವೆ.

ಬಳ್ಳಾರಿ, ಮೈಸೂರು, ಬಾಗಲಕೋಟೆ, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಯಾದಗಿರಿ, ರಾಯಚೂರು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಅವುಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಬಹುತೇಕ ಯಶಸ್ವಿಯಾಗಿದ್ದಾರೆ. ಬಾಲ್ಯ ವಿವಾಹ ತಡೆಗಟ್ಟಲು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಬಾಲ್ಯ ವಿವಾಹ ತಡೆಗಟ್ಟಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios