ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಪ್ರಯಾಣಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2023-24ರಲ್ಲಿ 3.75 ಕೋಟಿ ಜನರು ವಿಮಾನ ಯಾನ ಮಾಡಿದ್ದಾರೆ.
ಬೆಂಗಳೂರು (ಏ.28): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಪ್ರಯಾಣಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2023-24ರಲ್ಲಿ 3.75 ಕೋಟಿ ಜನರು ವಿಮಾನ ಯಾನ ಮಾಡಿದ್ದಾರೆ. ಕಳೆದ 2022-23ರಲ್ಲಿ 3.19 ಕೋಟಿ ಜನರು ಕೆಐಎ ಮೂಲಕ ಪ್ರಯಾಣಿಸಿದ್ದು, 2023-24ರಲ್ಲಿ 56 ಲಕ್ಷ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ.
2023-24ನೇ ಸಾಲಿನಲ್ಲಿ 3.28 ಕೋಟಿ ಜನರು ಕೆಐಎ ಮೂಲಕ ದೇಶದ ವಿವಿಧ ನಗರಗಳಿಗೆ ವಿಮಾನಯಾನ ಮಾಡಿದ್ದರೆ, 46.70 ಲಕ್ಷ ಜನರು ಅಂತಾರಾಷ್ಟ್ರೀಯ ಪ್ರಯಾಣಿಕರು ಕೆಐಎ ಬಳಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶೀಯ ವಲಯದಲ್ಲಿ ಶೇ. 17 ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿ ಶೇ. 23ರಷ್ಟು ಬೆಳವಣಿಗೆಯಾಗಿದ್ದು, ಒಟ್ಟಾರೆ ಶೇ. 18ರಷ್ಟು ವಿಮಾನಯಾನ ಸೇವೆಯಲ್ಲಿ ಬೆಳವಣಿಗೆಯಾಗಿದೆ. ಕೆಐಎ ಮೂಲಕ 2023-24ರಲ್ಲಿ 80 ದೇಶೀಯ ಮತ್ತು 28 ಅಂತಾರಾಷ್ಟ್ರೀಯ ಮಾರ್ಗಗಳು ಸೇರಿದಂತೆ ಒಟ್ಟು 108 ಸ್ಥಳಗಳಿಗೆ ವಿಮಾನಯಾನ ಸೇವೆ ನೀಡಲಾಗಿದೆ.
ಗುಲಾಬಿ ನಮ್ಮ ಮೆಟ್ರೋ ಮಾರ್ಗ ಸುರಂಗ 95% ರೆಡಿ: ಬಿಎಂಆರ್‌ಸಿಎಲ್
ಒಟ್ಟು 2.45 ಲಕ್ಷ ಏರ್ ಟ್ರಾಫಿಕ್ ಚಲನೆ (ಎಟಿಎಂ) ಕಂಡು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ದೇಶೀಯ ಎಟಿಎಂನಲ್ಲಿ ಶೇ. 10ರಷ್ಟು ಹಾಗೂ ಅಂತಾರಾಷ್ಟ್ರೀಯ ಎಟಿಎಂನಲ್ಲಿ ಶೇ. 13ರಷ್ಟು ಬೆಳವಣಿಗೆಯಾಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮತ್ತು ಪುಣೆ ನಗರಗಳಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬೈ, ಸಿಂಗಾಪುರ್, ದೋಹಾ, ಬ್ಯಾಂಕಾಕ್ ಮತ್ತು ಅಬುಧಾಬಿಗಳಿಗೆ ಪ್ರಯಾಣಿಕರು ಕೆಐಎ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ.