Asianet Suvarna News Asianet Suvarna News

ಕಾಡಾನೆ ಹಾವಳಿ ಹೆಚ್ಚಳ : ಬಂಡೀಪುರಕ್ಕೆ ಎಲಿಫೆಂಟ್‌ ಟಾಸ್ಕ್‌ ಫೋರ್ಸ್!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಭಾಗಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಆನೆ ಕಾರ್ಯಪಡೆ (ಎಲೆಫೆಂಟ್‌ ಟಾಸ್ಕ್‌ ಫೋರ್ಸ್) ರಚಿಸಿ ಆದೇಶಿಸಿದೆ.

Increase in forest menace: Elephant task force to Bandipur snr
Author
First Published Aug 5, 2024, 11:49 AM IST | Last Updated Aug 5, 2024, 11:49 AM IST

 ರಂಗೂಪುರ ಶಿವಕುಮಾರ್

 ಗುಂಡ್ಲುಪೇಟೆ :  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಭಾಗಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಆನೆ ಕಾರ್ಯಪಡೆ (ಎಲೆಫೆಂಟ್‌ ಟಾಸ್ಕ್‌ ಫೋರ್ಸ್) ರಚಿಸಿ ಆದೇಶಿಸಿದೆ.

ಆನೆ ಕಾರ್ಯಪಡೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಶು ವೈದ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ ತಲಾ ಒಂದು ಹುದ್ದೆ ಹಾಗೂ ೪ ಉಪ ವಲಯ ಅರಣ್ಯಾಧಿಕಾರಿ, ೮ ಅರಣ್ಯ ರಕ್ಷಕರ ಜೊತೆಗೆ ೩೨ ಮಂದಿ ಹೊರ ಗುತ್ತಿಗೆ ಸಿಬ್ಬಂದಿ ಇರಲಿದ್ದಾರೆ.

ಬಂಡೀಪುರದಲ್ಲಿ ವಿಭಿನ್ನ ಕಣ್ಣುಗಳ ಚಿರತೆ ಪತ್ತೆ!

ಆನೆ ಕಾರ್ಯಪಡೆ ಕೇಂದ್ರ ಸ್ಥಾನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರಲಿದ್ದು, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರ ನಿರ್ದೇಶನದಡಿ ಕಾರ್ಯ ನಿರ್ವಹಿಸಲಿದೆ.

ಆನೆ ಕಾರ್ಯಪಡೆ ತಂಡ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನ ವಸತಿ ಪ್ರದೇಶಗಳಲ್ಲಿ ಕೃಷಿ ಪ್ರದೇಶಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಿದೆ. ಕಾಡಾನೆ ಹಾವಳಿ ಕಂಡು ಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ ಅರಣ್ಯ ಪ್ರದೇಶದೊಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಪ್ರಚುರ ಪಡೆಸುವುದು. ಪ್ರತಿ ಆನೆ ಕಾರ್ಯಪಡೆ ಕೇಂದ್ರ ಸ್ಥಾನದಲ್ಲಿ ಕಂಟ್ರೋಲ್‌ ರೂಂ (ನಿಯಂತ್ರಣ ಕೊಠಡಿ) ಕಾರ್ಯ ನಿರ್ವಹಿಸಲಿದೆ.

6 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಸಾವು: ದೇಶದಲ್ಲೇ ಮೂರನೇ ಸ್ಥಾನ

ಆನೆ ಕಾರ್ಯಪಡೆಗಳ ಬಳಿ ಆನೆ ಹಾವಳಿ ತಡೆಗಟ್ಟುವ ಕಾರ್ಯಕ್ಕೆ ಬೇಕಾಗುವ ವಾಕಿ-ಟಾಕಿ, ಬಂದೂಕು, ಪಟಾಕಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸಲು ಉಪಯೋಗಿತ ಸಲಕರಣೆಗಳು ಹಾಗೂ ಇನ್ನಿತರೇ ಅವಶ್ಯಕ ಸಲಕರಣೆ ಮತ್ತು ಸೌಲಭ್ಯಗಳು ಇರಲಿವೆ. ಆನೆ ಕಾರ್ಯಪಡೆಯು ಆನೆ ಹಾವಳಿ ಪ್ರದೇಶಗಳಿಗೆ ತುರ್ತಾಗಿ ತಲುಪಲು ಅನುಕೂಲವಾಗುವಂತೆ ೩ ಜೀಪು ಬರಲಿದ್ದು, ೩ ಜೀಪುಗಳೊಂದಿಗೆ ೨ ಕ್ಯಾಂಟರ್‌ ವಾಹನಗಳನ್ನು ಬಾಡಿಗೆಗೆ ತಗೆದುಕೊಳ್ಳಬಹುದು.

ಆನೆ ಕಾರ್ಯಪಡೆ ಸಿಬ್ಬಂದಿಗೆ ೮೧೫ ರು. ಮಜೂರಿ

ಆನೆ ಕಾರ್ಯಪಡೆಯಲ್ಲಿ ೩೨ ಮಂದಿ ಹೊರ ಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ಆದೇಶವಿದ್ದು, ನೇಮಕಗೊಂಡ ಸಿಬ್ಬಂದಿಗೆ ಪ್ರತಿ ದಿನಕ್ಕೆ ೮೧೫ ರು. ಮಜೂರಿ (ಶಾಸನಬದ್ಧ ತೆರಿಗೆ ಸೇರಿದಂತೆ ಪ್ರತಿ ದಿನಕ್ಕೆ/ಒಬ್ಬರಿಗೆ ೮೧೫ ರು.) ಸಿಗಲಿದೆ. ಅಲ್ಲದೆ ಪ್ರತಿ ದಿನವು ದಿನಕ್ಕೆ ೧೦೦ ರು. ರೇಷನ್‌ ವರ್ಷದ ತನಕ ಸಿಗಲಿದೆ.

ಬಜೆಟ್‌ನಲ್ಲಿ ಘೋಷಣೆ ಆಗಿತ್ತು!

೨೦೨೪-೨೫ ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಆನೆ ಕಾರ್ಯಪಡೆ ಘೋಷಿಸಿತ್ತು. ಆನೆ ಕಾರ್ಯಪಡೆಗೆ ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲಪಡಿಸಲು ೧೦ ಕೋಟಿ ಬಜೆಟ್‌ನಲ್ಲಿ ಹಣ ನೀಡಿತ್ತು.

ಎಲಿಫೆಂಟ್‌ ಟಾಸ್ಕ್‌ ಪೋರ್ಸ್‌ಗೆ ಇಂದು ಶಾಸಕ ಗಣೇಶ್‌ ಚಾಲನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಆರಂಭವಾಗಲಿರುವ ಆನೆ ಕಾರ್ಯಪಡೆಗೆ (ಎಲೆಫೆಂಟ್‌ ಟಾಸ್ಕ್‌ ಫೋರ್ಸ್) ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಆ.೫ ರಂದು ಚಾಲನೆ ನೀಡಲಿದ್ದಾರೆ.

ಬಾಕ್ಸ್..

೫ ರಂದು ವಿಶ್ವ ಹುಲಿ - ಆನೆ ದಿನಾಚರಣೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕ್ಯಾಂಪಸ್‌ನಲ್ಲಿ ಆ.೫ ರಂದು ವಿಶ್ವ ಹುಲಿ ಹಾಗೂ ಆನೆ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನ, ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುವುದು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕ ಪ್ರಭಾಕರನ್‌ ತಿಳಿಸಿದ್ದಾರೆ.

ಫೋಟೋ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದ್ವಾರ.

Latest Videos
Follow Us:
Download App:
  • android
  • ios