ಕಾಫಿನಾಡಲ್ಲಿ ವಿದೇಶಿ ದುಬಾರಿ ಕಾರುಗಳ ದರ್ಬಾರ್, ಫೆರಾರಿ ಸೇರಿ 30ಕ್ಕೂ ಹೆಚ್ಚು ಕಾರು!
ಕಾಫಿನಾಡಲ್ಲಿ ವಿದೇಶಿ ದುಬಾರಿ ಕಾರುಗಳ ಝೇಂಕಾರ| ಲ್ಯಾಂಬರ್‌ಗಿನ್, ಫೇರಾರಿ, ಆಡಿ, ಜಾಗ್ವರ್, ಬುಕಾಟಿ ಮತ್ತಿತರ ಕಾರುಗಳ ದರ್ಶನ| ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ ನೊಂದಣಿ ಕಾರುಗಳು| ಹಾಸನ ಮಾರ್ಗವಾಗಿ ನಗರಕ್ಕೆ ಪ್ರವೇಶ| ದುಬಾರಿ ಕಾರುಗಳ ಫೋಟೋ, ಸೆಲ್ಫಿಗಳ ತೆಗೆದು ಖುಷಿಪಟ್ಟಹಸಿರುನಾಡಿನ ಜನರು
ಚಿಕ್ಕಮಗಳೂರು[ಫೆ.18]: ಕೋಟ್ಯಂತರ ರು. ಮೌಲ್ಯದ ವಿದೇಶಿ ಕಾರುಗಳು ಕಾಫಿಯ ನಾಡಿನಲ್ಲಿ ಭಾನುವಾರ ಕಾಣಿಸಿಕೊಂಡವು.
ಲ್ಯಾಂಬರ್‌ಗಿನ್, ಫೇರಾರಿ, ಆಡಿ, ಜಾಗ್ವರ್, ಬುಕಾಟಿ ಸೇರಿದಂತೆ ವಿದೇಶದ ವಿವಿಧ ಕಂಪನಿಗಳ ಕಾರುಗಳು ಭಾನುವಾರ ಚಿಕ್ಕಮಗಳೂರಿಗೆ ಬಂದು, ಸೋಮವಾರ ಬೆಳಗ್ಗೆ ನಿರ್ಗಮಿಸಿದವು.
ಭಾನುವಾರ ಮಧ್ಯಾಹ್ನ ವಿವಿಧ ಕಂಪನಿಗಳ ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ ನೋಂದಣಿಯ ಬಣ್ಣಬಣ್ಣದ ಕಾರುಗಳು ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ಆಗಮಿಸಿದವು. ಒಂದರ ಹಿಂದೆ ಇನ್ನೊಂದು ಬರುತ್ತಿರುವುದನ್ನು ರಸ್ತೆಯಲ್ಲಿ ನಿಂತು ಜನರು ಕುತೂಹಲದಿಂದ ವೀಕ್ಷಿಸಿದರು. ತಮ್ಮ ಮೊಬೈಲ್‌ಗಳಲ್ಲಿ ಚೆಂದದ ಕಾರುಗಳ ಪೋಟೋಗಳು, ವಿಡಿಯೋಗಳನ್ನು ತೆಗೆದು ಖುಷಿಪಟ್ಟರು.
ಸುಮಾರು 30ಕ್ಕೂ ಹೆಚ್ಚು ಕಾರುಗಳು ಚಿಕ್ಕಮಗಳೂರು ನಗರದ ಹೃದಯ ಭಾಗದಿಂದ ಭಾನುವಾರ ಹೋಗುವಾಗ ಅವುಗಳ ಜತೆಗೆ ಪೊಲೀಸ್ ವಾಹನಗಳು ಇದ್ದಿರುವುದನ್ನು ನೋಡಿದ ಸಾರ್ವಜನಿಕರು ಗಣ್ಯವ್ಯಕ್ತಿಗಳ ಮಕ್ಕಳು ಆ ಕಾರುಗಳನ್ನು ಚಾಲನೆ ಮಾಡಿಕೊಂಡು ಬಂದಿರಬಹುದೆಂದು ಅಂದುಕೊಂಡರು. ಆದರೆ, ಪೊಲೀಸರು ಇದನ್ನು ತಳ್ಳಿ ಹಾಕಿದ್ದಾರೆ.
ಈ ಎಲ್ಲ ಕಾರುಗಳು ದತ್ತಪೀಠ ಮಾರ್ಗದ ಚಂದ್ರಪ್ರಕಾಶ್ ಅವರಿಗೆ ಸೇರಿರುವ ಜಾವರಿನ್ ರೆಸಾರ್ಟ್ ಆವರಣಕ್ಕೆ ತಲುಪಿದವು. ಸೋಮವಾರ ಬೆಳಗ್ಗೆ ಕಾರುಗಳು ಬೆಂಗಳೂರಿಗೆ ತೆರಳುವಾಗ ರಸ್ತೆಯ ಇಕ್ಕಲಗಳಲ್ಲಿ ನಿಂತು ವಿದೇಶಿ ಕಂಪನಿಗಳ ಕೋಟ್ಯಂತರ ರು. ಮೌಲ್ಯದ ಕಾರುಗಳ ಕಾರುಬಾರನ್ನು ನೋಡಿ ಜನರು ಖುಷಿಪಟ್ಟರು.