ಬೆಂಗಳೂರು(ಜು.13): ಕೊರೋನಾ ಸೋಂಕು ಹರಡುವಿಕೆ ತಡೆಯಲು ಈಗಾಗಲೇ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರಗಳ ಲಾಕ್‌ಡೌನ್‌ ಘೋಷಿಸಿದ ಮಾದರಿಯಲ್ಲೇ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿಯೂ ಸಹ ಲಾಕ್‌ಡೌನ್‌ ಜಾರಿ ತರುವ ಸಾಧ್ಯತೆ ದಟ್ಟವಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಈ ಸಭೆಯ ನಂತರ ಲಾಕ್‌ಡೌನ್‌ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.

ತಿರುಪತಿ ಹುಂಡಿಗೆ 20 ಚಿನ್ನದ ಬಿಸ್ಕತ್ ಹಾಕಿದ ಭಕ್ತ

ಪ್ರಮುಖವಾಗಿ ಹೆಚ್ಚು ಸೋಂಕು ಇರುವ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌, ಅಂತರ್‌ ಜಿಲ್ಲೆಗಳ ನಡುವೆ ಸಂಚಾರ ನಿರ್ಬಂಧ ಹಾಗೂ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳ ನಡುವೆ ಸಂಚಾರ ನಿಷೇಧಿಸುವ ಬಗ್ಗೆ ಈ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2 ಹಂತದ ಸಭೆ:

ಬೆಳಗ್ಗೆ 11 ಗಂಟೆಗೆ ನಡೆಯುವ ಮೊದಲ ಸಭೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಂಜೆ ಕಡಿಮೆ ಪ್ರಕರಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ ಇತರ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಸೋಂಕು ಹೆಚ್ಚಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಹೆಚ್ಚು ಸೋಂಕು ಹೊಂದಿರುವ ಕಲಬುರಗಿ, ಮೈಸೂರು, ಮಂಗಳೂರು, ಉಡುಪಿ, ಬೆಳಗಾವಿ, ಬೀದರ್‌, ಧಾರವಾಡ, ರಾಯಚೂರು, ಗದಗ, ಮಂಡ್ಯ ಜಿಲ್ಲೆಗಳ ಸಭೆ ನಡೆಸಲಿದ್ದಾರೆ. ಈ ವೇಳೆ ಬಹುತೇಕ ಈ ಜಿಲ್ಲೆಗಳ ಲಾಕ್‌ಡೌನ್‌ಗೆ ಒಲವು ತೋರುವ ಸಾಧ್ಯತೆ ಇದೆ. ಇನ್ನು ಕಡಿಮೆ ಸೋಂಕಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ವಿಸ್ತರಿಸಬೇಕೆ ಅಥವಾ ಬೇರೆ ನಿಯಂತ್ರಣಾ ಕ್ರಮಗಳಿಂದ ಕೊರೋನಾ ನಿಯಂತ್ರಿಸಬಹುದೇ ಎಂಬ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

 

ವೈಫಲ್ಯದ ಬಗ್ಗೆ ಅಧಿಕಾರಿಗಳಿಗೆ ಸಿಎಂ ತರಾಟೆ

ಬೆಂಗಳೂರು: ಭಾನುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಉಂಟಾಗಿರುವ ವೈಫಲ್ಯಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಬಂಧಪಟ್ಟಇಲಾಖೆಗಳ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಈಗಾಗಲೇ ಆ್ಯಂಬುಲೆನ್ಸ್‌ ಖರೀದಿಗೆ ಸರ್ಕಾರ ಸೂಚನೆ ನೀಡಿದ್ದರೂ ಆಂಬುಲೆನ್ಸ್‌ ಸಮಸ್ಯೆ ಮುಂದುವವರಿದಿದೆ. ಮಾಧ್ಯಮಗಳಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆ ಸಿಗುತ್ತಿಲ್ಲ ಎಂದು ವರದಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆ ಎಲ್ಲಿ ಹೋಯಿತು? ಹಾಸಿಗೆ ಇದ್ದರೂ ನೀಡದವರ ವಿರುದ್ಧ ಕ್ರಮ ಏಕಿಲ್ಲ?’ ಎಂದು ಪ್ರಶ್ನಿಸಿದರು.

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

‘ವೈದ್ಯಕೀಯ ಪರಿಕರಗಳ ಖರೀದಿಯಲ್ಲೂ ದುಪ್ಪಟ್ಟು ಹಣಕ್ಕೆ ಖರೀದಿ ಮಾಡಿರುವುದಾಗಿ ನೀವೇ ವರದಿ ನೀಡಿದ್ದೀರಿ. ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಇದೀಗ ವಿರೋಧಪಕ್ಷಗಳು ಟೀಕಿಸಲು ಇದೊಂದು ಅಸ್ತ್ರವಾಗಿ ಬದಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.