ಬೆಂಗಳೂರು(ಮೇ.01): ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ವೃದ್ಧಿಸಬಲ್ಲ ಹೋಮಿಯೋಪತಿ ಔಷಧವನ್ನು ಶ್ರೀ ಶಂಕರ ರೀಸರ್ಚ್‌ ಸೆಂಟರ್‌ನ ಖ್ಯಾತ ವೈದ್ಯರಾದ ಡಾ.ಕೆ.ಎನ್‌. ಶ್ರೀಧರ್‌ ಸಂಶೋಧನೆ ಮಾಡಿದ್ದಾರೆ. ಸ್ವತಃ ಅಲೋಪತಿ ವೈದ್ಯರಾಗಿರುವ ಯೂರಾಲಜಿ ತಜ್ಞ ಡಾ.ಶ್ರೀಧರ್‌. ಹೀಗಿದ್ದರೂ ಹೋಮಿಯೋಪತಿ ಸಿದ್ಧಾಂತ ಇಟ್ಟುಕೊಂಡು ಸಂಶೋಧಿಸಿರುವ ಔಷಧಿಯು ತೀವ್ರ ಕುತೂಹಲ ಮೂಡಿಸಿದೆ.

ತಾನು ಸಂಶೋಧಿಸಿರುವ ಔಷಧಿಯು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಫಾರ್ಮೂಲಾ ಸೋಂಕಿಗೆ ಚಿಕಿತ್ಸೆಯಾಗಿಯೂ ಕೆಲಸ ಮಾಡಬಹುದು ಎಂದು ಶ್ರೀಧರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಡೀ ವಿಶ್ವ ಕೊರೋನಾ ವಿರುದ್ಧ ಔಷಧಿಗಾಗಿ ಸಂಶೋಧನೆಯಲ್ಲಿ ತೊಡಗಿದೆ. ಇಂತಹ ವೇಳೆಯಲ್ಲಿ ತೆರೆ-ಮರೆಯಲ್ಲೇ ಸಂಶೋಧನಾ ಕಾರ್ಯ ನಡೆಸಿರುವ ಡಾ. ಶ್ರೀಧರ್‌ ಕೊರೋನಾ ವೈರಾಣುವಿನ ಸಿಂಥೆಟಿಕ್‌ ಆರ್‌ಎನ್‌ಎ ಪಡೆದು, ಅದರಿಂದ ಡೈಲ್ಯೂಷನ್‌ ಫಾರ್ಮೂಲಾ ಮೂಲಕ ಔಷಧ ಶೋಧನೆ ಮಾಡಿದ್ದಾರೆ. ಈ ಔಷಧವು ಕೊರೋನಾ ವಿರುದ್ಧ ಪ್ರತಿರೋಧಕ ಶಕ್ತಿ ಸೃಷ್ಟಿಸುತ್ತದೆ. ಅಲ್ಲದೆ, ಕೊರೋನಾ ವೈರಾಣುವನ್ನೂ ಕೊಲ್ಲುತ್ತದೆ. ಇಷ್ಟೂ ಔಷಧಿಯನ್ನು ಎಷ್ಟು ಮಂದಿಗೆ ಅಗತ್ಯವಿದ್ದರೂ ಉಚಿತವಾಗಿ ನೀಡುವುದಾಗಿ ಡಾ.ಶ್ರೀಧರ್‌ ಹೇಳಿದ್ದಾರೆ.

'ಇನ್ನೂ 2-3 ತಿಂಗಳು ಕೊರೋನಾ ವೈರಸ್ ಕಾಟ ತಪ್ಪಿದ್ದಲ್ಲ'

ಐಸಿಎಂಆರ್‌ ಅನುಮತಿ ದೊರೆತಿಲ್ಲ:

ಔಷಧವನ್ನು ಸೋಂಕಿತರ ಮೇಲೆ ಪ್ರಯೋಗಿಸಲು ಅನುಮತಿಗಾಗಿ ಆಯುಷ್‌ ಇಲಾಖೆ, ಐಸಿಎಂಆರ್‌ಗೆ ಪತ್ರ ಬರೆದಿದ್ದೇವೆ. ಆಯುಷ್‌ ಇಲಾಖೆಯ ಎಥಿಕ್‌ ಕಮಿಟಿಯು ಪರಿಶೀಲನೆ ನಡೆಸಿ ಅನುಮತಿ ಕೊಡಬೇಕು. ಈವರೆಗೂ ಅನುಮತಿ ದೊರೆತಿಲ್ಲ. ಹೀಗಿದ್ದರೂ 6 ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತವಾಗಿ ಬಂದು ಔಷಧ ತೆಗೆದುಕೊಂಡಿದ್ದಾರೆ. ಅಲ್ಲದೆ, ನಮಗೆ ಅಗತ್ಯವಿರುವ ನೀರು ಮತ್ತಿತರ ವಸ್ತುಗಳನ್ನು ಉಚಿತವಾಗಿ ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಹೀಗಾಗಿ ಅಗತ್ಯವಿರುವ ಔಷಧವನ್ನು ಉಚಿತವಾಗಿ ನೀಡಲು ಸಿದ್ಧರಿದ್ದೇವೆ ಎನ್ನುತ್ತಾರೆ ವೈದ್ಯ ಶ್ರೀಧರ್‌.

ವೈರಸ್‌ ಸಾಯುತ್ತಿದೆ:

ಇದೇ ಫಾರ್ಮೂಲಾದಲ್ಲಿ ಈ ಹಿಂದೆ ಡೆಂಘೀಗೆ ಔಷಧ ಕಂಡು ಹಿಡಿದು 2.5 ಲಕ್ಷ ಮಂದಿಗೆ ಉಪಯೋಗ ಪಡೆದಿದ್ದಾರೆ. ಕೊರೋನಾ ವೈರಾಣು ವಿರುದ್ಧ ಸಂಶೋಧಿಸಿರುವ ಔಷಧವನ್ನು ಪ್ರಯೋಗಾಲಯದಲ್ಲಿ ಪ್ರಯೋಗಿಸಲಾಯಿತು. ಈ ವೇಳೆ ವೈರಸ್‌ ಔಷಧದಿಂದ ಸಾಯಲ್ಪಟ್ಟಿತ್ತು. ಹೀಗಾಗಿ ಕೊರೋನಾ ವಿರುದ್ಧ ಇದು ಔಷಧವಾಗಬಲ್ಲದು ಎಂಬ ದೃಢ ವಿಶ್ವಾಸವಿದೆ ಎಂದಿದ್ದಾರೆ.

ಕೊರೋನಾ ಔಷಧ ಸಂಶೋಧನೆ ನಡೆಸಿ ಬಿಡುಗಡೆ ಮಾಡಲು ಕನಿಷ್ಠ 7 ತಿಂಗಳ ಕಾಲಾವಕಾಶ ಬೇಕು. ಇಷ್ಟುದಿನ ಲಾಕ್‌ಡೌನ್‌ ಮುಂದುವರೆದರೆ ಲಕ್ಷಾಂತರ ಬದುಕುಗಳು ಬೀದಿಗೆ ಬೀಳುತ್ತವೆ. ಹೀಗಾಗಿ ರೋಗ ನಿರೋಧಕವಾಗಿ ಈ ಔಷಧ ಬಳಕೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಹಳ್ಳಿ-ಹಳ್ಳಿಗೂ ತಲುಪಬೇಕು!

ಒಂದು ಲೋಟ ನೀರಿಗೆ 3-4 ಹನಿ ಔಷಧ ಹಾಕಿ ನೀಡಲಾಗುವುದು. ಇದನ್ನು ಕುಡಿದರೆ ಸಾಕು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ದೇಹದಲ್ಲಿ ಉತ್ಪಾದನೆಯಾಗುತ್ತದೆ. ಲಾಕ್‌ಡೌನ್‌ ಬೇಗ ತೆರವಾಗಬೇಕು ಸಹ ಜೀವನದತ್ತ ಮರಳಬೇಕು ಎಂದರೆ ಹಳ್ಳಿ-ಹಳ್ಳಿಯಲ್ಲಿರುವ ಜನರಿಗೂ ಈ ಔಷಧ ತಲುಪಬೇಕು. ಇಂಜೆಕ್ಷನ್‌, ಮಾತ್ರೆಗಳು ಈ ರೀತಿ ಉತ್ಪಾದಿಸಿ, ತಲುಪಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಡಾ.ಕೆ. ಎನ್‌. ಶ್ರೀಧರ್‌.

ಖ್ಯಾತ ಯೂರಾಲಜಿಸ್ಟ್‌ ತಜ್ಞ!

ಡಾ.ಕೆ. ಎನ್‌. ಶ್ರೀಧರ್‌ ಅವರು ಖ್ಯಾತ ಯೂರಾಲಜಿ ತಜ್ಞರು. ಶ್ರೀ ಶೃಂಗೇರಿ ಶಾರದ ಪೀಠಂ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದ ರಾರ‍ಯಂಗಡೋರ್‌ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಶ್ರೀ ರಿಸಚ್‌ರ್‍ ಫಾರ್‌ ಡಿಶ್ಯು ಇಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರೂ ಹೌದು. ಎಂಬಿಬಿಎಸ್‌, ಎಲ್‌ಆರ್‌ಸಿಪಿ (ಲಂಡನ್‌, ಎಂಆರ್‌ಸಿಎಸ್‌ (ಇಂಗ್ಲೆಂಡ್‌), ಎಫ್‌ಆರ್‌ಸಿಎಸ್‌ (ಐರ್ಲಾಂಡ್‌, ಈಡನ್‌ಬರ್ಗ್‌, ಇಂಗ್ಲೆಂಡ್‌) ಸೇರಿದಂತೆ ಹಲವು ವೈದ್ಯಕೀಯ ಪದವಿ ಪಡೆದಿರುವ ಖ್ಯಾತ ವೈದ್ಯರು.