Asianet Suvarna News Asianet Suvarna News

'ಇನ್ನೂ 2-3 ತಿಂಗಳು ಕೊರೋನಾ ವೈರಸ್ ಕಾಟ ತಪ್ಪಿದ್ದಲ್ಲ'

ಕೇಂದ್ರ ಸರ್ಕಾರದ ಮಾರ್ಗಸೂಚಿ ನೋಡಿ ಮೇ 4ರ ನಂತರ ಅನುಮತಿ ಸಾಧ್ಯತೆ|ಅಗತ್ಯ ಸಿದ್ಧತೆಗೆ ಉದ್ಯಮಿಗಳಿಗೆ ಸಲಹೆ| ಹಂತ ಹಂತವಾಗಿ ಉದ್ದಿಮೆಗಳ ಪ್ರಾರಂಭಕ್ಕೆ ಕ್ರಮ| ಕಾರ್ಖಾನೆಗಳ ಮಾಲೀಕರು, ಕಾರ್ಮಿಕರ ವೇತನವನ್ನು ತಪ್ಪದೆ ಪಾವತಿಸಬೇಕು|

CM B S Yediyurappa Talks Coronavirus
Author
Bengaluru, First Published May 1, 2020, 8:06 AM IST | Last Updated May 18, 2020, 6:43 PM IST

ಬೆಂಗಳೂರು(ಮೇ.01): ರಾಜ್ಯದಲ್ಲಿ ಮುಂದಿನ 2-3 ತಿಂಗಳ ಕಾಲ ಕೊರೋನಾ ಸೋಂಕು ಮುಂದುವರೆದರೂ ಅಚ್ಚರಿ ಇಲ್ಲ. ಹೀಗಾಗಿ ಕೊರೋನಾ ನಿಯಂತ್ರಣದ ಜೊತೆಗೆ ರಾಜ್ಯದ ಆರ್ಥಿಕ ಚಟುವಟಿಕೆಗೂ ಆದ್ಯತೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಭೀತಿ ಇನ್ನೂ ಕನಿಷ್ಠ 2-3 ತಿಂಗಳ ಕಾಲ ಮುಂದುವರೆಯಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ಸರ್ಕಾರ ದಿಟ್ಟಕ್ರಮ ಕೈಗೊಂಡಿದೆ. ಆದರೂ ಮುಂದಿನ 2-3 ತಿಂಗಳು ಕೊರೋನಾ ಸೋಂಕು ಭೀತಿ ಮುಂದುವರಿದರೆ ಆಶ್ಚರ್ಯ ಇಲ್ಲ. ಹೀಗಾಗಿ ಕೊರೋನಾ ನಿಯಂತ್ರಣ ಮತ್ತು ರಾಜ್ಯ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಕೆಲಸಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೇ 3ರ ನಂತರ ಹಂತ-ಹಂತವಾಗಿ ಕೈಗಾರಿಕೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊರೋನಾ ಆತಂಕ: ವಿದೇಶದಲ್ಲಿ ಸಿಲುಕಿದವರ ಕರೆತರಲು ಸರ್ಕಾರ ಸಿದ್ಧತೆ

ಹಸಿರು ವಲಯದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಕೆಂಪು ವಲಯ ಹಾಗೂ ಇನ್ನುಳಿದ ವಲಯದಲ್ಲಿಯೂ ಮೇ 3ರ ನಂತರ ಕೈಗಾರಿಕೆಗಳ ಆರಂಭಕ್ಕೆ ಅನುವು ಮಾಡಿಕೊಡಲಾಗುವುದು.
ಬೆಂಗಳೂರಲ್ಲಿ 2-3 ದಿನಗಳಿಂದ ಸೋಂಕು ಪತ್ತೆ ಕಡಿಮೆಯಾಗಿದೆ. ಇನ್ನು 3-4 ದಿನ ಪರಿಸ್ಥಿತಿಯನ್ನು ಗಮನಿಸಿ ಬೆಂಗಳೂರಿನ ಸುತ್ತಮುತ್ತ ಕೈಗಾರಿಕೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಮೇ 3ರ ನಂತರ ಯಾವ ರೀತಿಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತಿಳಿಸಲಿದ್ದಾರೆ. ನಂತರ ರಾಜ್ಯದ ಪರಿಸ್ಥಿತಿಗನುಗುಣವಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಕೈಗಾರಿಕೆ ಪುನಾರಂಭಿಸಲು ಬಿಎಸ್‌ವೈ ಒಲವು

ಕೇಂದ್ರ ಸರ್ಕಾರವು ಮೇ 4ರ ನಂತರ ಕೈಗಾರಿಕೆ ಪುನರಾರಂಭ ಕುರಿತ ಮಾರ್ಗಸೂಚಿ ನೀಡಲಿದ್ದು, ಮತ್ತಷ್ಟು ಸಡಿಲಿಕೆ ನಿರೀಕ್ಷಿಸಲಾಗಿದೆ. ಹೀಗಾಗಿ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಉದ್ಯಮಿಗಳು ನೀಡಿದರು.

ರಾಜ್ಯದಲ್ಲಿ ಈಗಾಗಲೇ ಹಸಿರು ವಲಯಗಳಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಮೇ 4ರ ನಂತರ ಕೇಂದ್ರ ಸರ್ಕಾರದಿಂದ ಬರುವ ಮಾರ್ಗಸೂಚಿಯಲ್ಲಿ ಮತ್ತಷ್ಟುಸಡಿಲಿಕೆ ನಿರೀಕ್ಷಿಸಲಾಗುತ್ತಿದೆ. ರಾಜ್ಯವು ಕೇಂದ್ರದ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಉದ್ಯಮಿಗಳ ಸಮಸ್ಯೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ. ಬೇಡಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಾದಷ್ಟುಸ್ಪಂದಿಸಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಕಾರ್ಖಾನೆ ಮಾಲೀಕರು, ಕೆಲಸಗಾರರ ದುಡಿಮೆಯ ಅವಧಿ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದಲ್ಲಿ ಕಾರ್ಮಿಕ ಇಲಾಖೆ ಅನುಮತಿ ನೀಡುವುದು ಎಂದು ಹೇಳಿದರು.

ವೇತನ ನೀಡಿ:

ಕಳೆದ ಒಂದು ತಿಂಗಳ ಅವಧಿಯಲ್ಲಿ ಕೈಗಾರಿಕೋದ್ಯಮಿಗಳೂ ಸಂಕಷ್ಟಕ್ಕೆ ಒಳಗಾಗಿರುವುದು ಸರ್ಕಾರಕ್ಕೆ ಅರಿವಿದೆ. ಆದರೆ ಕಾರ್ಖಾನೆಗಳ ಮಾಲೀಕರು, ಕಾರ್ಮಿಕರ ವೇತನವನ್ನು ತಪ್ಪದೆ ಪಾವತಿಸಬೇಕು. ಅಲ್ಲದೆ, ಕಾರ್ಖಾನೆಗಳಲ್ಲಿ ಕಾರ್ಮಿಕರು, ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಬೇಕು ಹಾಗೂ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ಎಫ್‌ಕೆಸಿಸಿಐ, ಸಣ್ಣ ಕೈಗಾರಿಕೆಗಳ ಸಂಘ, ಫಿಕ್ಕಿ, ಸಿಐಐ, ಅಸೋಚಾಂ, ಬಿಸಿಐಸಿ, ಮಹಿಳಾ ಉದ್ಯಮಿಗಳ ಒಕ್ಕೂಟ ಮತ್ತಿತರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios