ಕೋರ್ಟ್‌ಗೆ ಸಿಬಿಐ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ| ಬೇಗ್ ಕಂಪನಿ ಸಿಬ್ಬಂದಿಗೆ ಐಎಂಎ ಹಣದಿಂದ ಸಂಬಳ| ಪ್ರಕರಣದ ತನಿಖೆ ಮತ್ತಷ್ಟು ಚುರುಕು| ಮತ್ತಷ್ಟು ಜನರ ವಿರುದ್ಧ ಸಾಕ್ಷ್ಯ ಸಂಗ್ರಹ|
ಬೆಂಗಳೂರು(ಏ.28): ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದು, ಚುನಾವಣೆಗೆ, ತಮ್ಮ ಸಂಸ್ಥೆಯ ಸಿಬ್ಬಂದಿಯ ವೇತನಕ್ಕೆ ಮತ್ತು ಕ್ಷೇತ್ರದಲ್ಲಿ ಪ್ರಚಾರ ಪಡೆದುಕೊಳ್ಳಲು ಐಎಂಎ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಈಗಾಗಲೇ, ರೋಷನ್ ಬೇಗ್, ಐಎಂಎ ಮುಖ್ಯಸ್ಥ ಮಹ್ಮದ್ ಮನ್ಸೂರ್ ಖಾನ್ ಸೇರಿದಂತೆ ಇತರರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ಹೆಚ್ಚುವರಿ ಆರೋಪ ಪಟ್ಟಿಸಲ್ಲಿಕೆ ಮಾಡಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಮಾಡಿರುವ ಮತ್ತಷ್ಟುಅಕ್ರಮದ ಬಗ್ಗೆ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಐಎಂಎ ಸಂಸ್ಥೆಯಿಂದ ರೋಷನ್ ಬೇಗ್ ಕೋಟ್ಯಂತರ ರು. ಪಡೆದುಕೊಂಡಿದ್ದು, ತಮ್ಮ ಚುನಾವಣಾ ವೆಚ್ಚಕ್ಕಾಗಿ ಅದನ್ನು ಬಳಸಿಕೊಂಡಿದ್ದಾರೆ. ಬೇಗ್ ಈ ಮೊದಲು ನಡೆಸುತ್ತಿದ್ದ ಸಂಸ್ಥೆಯ ನೌಕರರ ವೇತನಕ್ಕೂ ಐಎಂಎ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ, ಪ್ರತಿನಿತ್ಯ ವೆಚ್ಚ ಮಾಡಲು ಇದೇ ಹಣವನ್ನು ಬಳಸಲಾಗಿದೆ. ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಅಕ್ರಮ ಹಣದಲ್ಲಿಯೇ ವಿವಿಧ ಕಾರ್ಯಕ್ರಮ, ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ತಿಳಿಸಲಾಗಿದೆ.
ರೋಷನ್ ಬೇಗ್ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್ ಅಸಮಾಧಾನ
ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಸುಮಾರು ಒಂದು ಲಕ್ಷ ಠೇವಣಿದಾರರಿಂದ ಅಂದಾಜು ನಾಲ್ಕು ಸಾವಿರ ಕೋಟಿ ರು. ಸಂಗ್ರಹಿಸಲಾಗಿದೆ. ಇದರಲ್ಲಿ ಕೋಟ್ಯಂತರ ರು.ಗಳನ್ನು ಮಾಜಿ ಸಚಿವರು ತಮ್ಮ ಅಕ್ರಮ ಚಟುವಟಿಕೆಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಬಿಐ ತಿಳಿಸಿದೆ.
ಐಎಂಎ ಅಕ್ರಮ ಸಂಬಂಧ ಸಿಬಿಐ ಈವರೆಗೆ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಸಂಸ್ಥೆಯ ಸಿಇಒ ಮಹ್ಮದ್ ಮನ್ಸೂರ್ ಖಾನ್, ನಿರ್ದೇಶಕರು ಸೇರಿದಂತೆ 33 ಆರೋಪಿಗಳ ವಿರುದ್ಧ ಮೂರು ಆರೋಪ ಪಟ್ಟಿಮತ್ತು ಮೂರು ಹೆಚ್ಚುವರಿ ದೋಷಾರೋಪ ಪಟ್ಟಿಸಲ್ಲಿಕೆ ಮಾಡಲಾಗಿದೆ. ಕಂಪನಿಯ ನಿರ್ದೇಶಕರು, ಮುಖ್ಯಸ್ಥರು ಅಕ್ರಮ ಮಾರ್ಗದಲ್ಲಿ ಖಾಸಗಿ ವ್ಯಕ್ತಿಗಳ, ಕಂದಾಯ, ಪೊಲೀಸ್ ಅಧಿಕಾರಿಗಳ ನೆರವು ಪಡೆದು ಅನಧಿಕೃತವಾಗಿ ಸಂಸ್ಥೆಯನ್ನು ನಡೆಸಿ ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಕೋಟ್ಯಂತರ ರು. ವಂಚಿಸಿದ್ದಾರೆ. ಸಾರ್ವಜನಿಕರಿಂದ ಪಡೆದ ಕೋಟ್ಯಂತರ ರು.ಗಳನ್ನು ಸ್ಥಿರಾಸ್ತಿ ಮೇಲೆ ಹೂಡಿಕೆ ಮಾಡಿದ್ದಾರೆ. ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಡಲು ಬಳಕೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಮತ್ತಷ್ಟು ಜನರ ವಿರುದ್ಧ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಮಾಜಿ ಸಚಿವರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಸಿಬಿಐ ತಿಳಿಸಿದೆ.
