ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ , ನಾನ್ಯಾಕೆ ಮಂತ್ರಿ ಆಗಬಾರದು ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ. 

ಬೆಂಗಳೂರು (ಸೆ.09): ನಾನೂ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಂಪುಟಕ್ಕೆ ನಾನು ಏಕೆ ಸೇರ್ಪಡೆಯಾಗಬಾರದು ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ‘ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಅವರು ಯಾವಾಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ಮಾಹಿತಿ ಇಲ್ಲ. ಆದರೆ, ಸಚಿವ ಸ್ಥಾನಕ್ಕೆ ನಾನೂ ಸಹ ಪ್ರಬಲ ಆಕಾಂಕ್ಷಿ. ನನಗೆ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಡ್ರಗ್ಸ್‌ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಡ್ರಗ್ಸ್‌ ಎಲ್ಲಿಂದ ಬರುತ್ತದೆ? ಯಾರು ಮಾರಾಟ ಮಾಡುತ್ತಾರೆ? ಯಾರು ಸೇವಿಸುತ್ತಾರೆ ಎನ್ನುವುದರ ಸಂಪೂರ್ಣ ಮಾಹಿತಿ ಪೊಲೀಸರಿಗೆ ಮಾತ್ರ ಗೊತ್ತಿರುತ್ತದೆ. ಪೊಲೀಸ್‌ ಇಲಾಖೆ ಮಾತ್ರ ಇದಕ್ಕೆ ಬ್ರೇಕ್‌ ಹಾಕಲು ಸಾಧ್ಯ. ಸರ್ಕಾರ ಡ್ರಗ್ಸ್‌ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ..

ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿಂದೆ ಪಂಜಾಬ್‌ನಲ್ಲಿ ಅಲ್ಲಿನ ಯುವ ಜನತೆಯನ್ನು ಡ್ರಗ್ಸ್‌ ಬಲಿಪಡೆದುಕೊಂಡಿತ್ತು. ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ. ಪೊಲೀಸ್‌ ಇಲಾಖೆ ಮಾಫಿಯಾವನ್ನು ನಿಯಂತ್ರಿಸಲಿದೆ. ಡ್ರಗ್ಸ್‌ ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ, ಯಾವುದೇ ಒತ್ತಡಕ್ಕೆ ಮಣಿಯದೆ ಮಟ್ಟಹಾಕಬೇಕಿದೆ ಎಂದರು.