Asianet Suvarna News

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ILS ಅಳವಡಿಕೆ ಪೂರ್ಣ

ಹವಾಮಾನ ವೈಪರಿತ್ಯದಿಂದ ಎದುರಾಗುವ ಲ್ಯಾಂಡಿಂಗ್‌ ಸಮಸ್ಯೆ ಬಹುತೇಕ ನಿವಾರಣೆ| ನವೆಂಬರ್‌, ಚಳಿಗಾಲದ ಅಂತ್ಯದಿಂದ ಕಾರ್ಯಾರಂಭ| ಐಎಲ್‌ಎಸ್‌ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್‌ ಆಧರಿತ ತಂತ್ರಜ್ಞಾನ|ವಿಮಾನ ಜಾರಿ ಆ್ಯಂಟಿನಾಕ್ಕೆ ತಾಕಿದರೂ ಲಘುವಾಗಿರುವ ಇವುಗಳು ಬೀಳುತ್ತವೆ ವಿನಃ ವಿಮಾನಕ್ಕೆ ಹಾನಿ ಆಗಲಾರದು| 

ILS Installed Completed in Hubballi Airport
Author
Bengaluru, First Published Sep 4, 2020, 11:08 AM IST
  • Facebook
  • Twitter
  • Whatsapp

ಮಯೂರ ಹೆಗಡೆ

ಹುಬ್ಬಳ್ಳಿ(ಸೆ.04): ಇಲ್ಲಿನ ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌(ಇನ್ಸ್‌ಟ್ರೂಮೆಂಟಲ್‌ ಲ್ಯಾಂಡಿಂಗ್‌ ಸಿಸ್ಟಮ್‌) ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಬಹುತೇಕ ನವೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ.

ಕಳೆದ ಜನವರಿಯಲ್ಲಿಯೇ ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ ಅಳವಡಿಕೆ ಕಾರ್ಯ, ಆ್ಯಂಟೆನಾ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳು ಆರಂಭವಾಗಿದ್ದವು. ನಿರೀಕ್ಷೆಯಂತೆ ಮಾಚ್‌ರ್‍ ಅಂತ್ಯದಲ್ಲಿಯೆ ಇದರ ಕಾರ್ಯಾರಂಭ ಆಗಬೇಕಿತ್ತು. ಆದರೆ, ಕೊರೋನಾ ಹಿನ್ನೆಲೆ ಲಾಕ್‌ಡೌನ್‌ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಐಎಎಲ್‌ಎಸ್‌ನ ತಾಂತ್ರಿಕ ಸಾಮಗ್ರಿಯ ಶೆಡ್‌, ಟವರ್‌ ಅಳವಡಿಕೆ ಕಾಮಗಾರಿ ಮುಕ್ತಾಯವಾಗಿದೆ.

ಇದರ ಪ್ರತ್ಯಕ್ಷಿಕಾ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ಎಎಐನಿಂದ ಅನುಮತಿ ಸೇರಿದಂತೆ ಇತರ ಪ್ರಕ್ರಿಯೆ ಬಾಕಿ ಇದೆ. ಇದಕ್ಕೆ ಒಂದೆರಡು ತಿಂಗಳು ಕಾಲಾವಕಾಶ ಬೇಕಿದೆ. ಇದಾದ ಬಳಿಕ ವಿಮಾನ ಇಳಿಯುವಿಕೆಗೆ ಹಿಂದಿಗಿಂತ ಎಟಿಸಿಯಿಂದ ನಿಖರ ಸಿಗ್ನಲ್‌ ರವಾನೆಯಾಗಲಿದೆ. ಈ ಮೂಲಕ ಹವಾಮಾನ ವೈಪರಿತ್ಯದಿಂದ ಉಂಟಾಗುವ ಹೆಚ್ಚಿನ ಮಟ್ಟದ ತೊಡಕು ನಿವಾರಣೆ ಆಗಿ ವಿಮಾನ ಲ್ಯಾಂಡಿಂಗ್‌ಗೆ ಅನುಕೂಲ ಆಗಲಿದೆ.

ಪ್ರಗತಿಯತ್ತ ದಾಪುಗಾಲು: ಹುಬ್ಬಳ್ಳಿ ಏರ್ಪೋರ್ಟ್‌ಗೆ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಲೋ ಕ್ಲೌಡ್‌, ವಿಪರೀತ ಮಳೆ ರೀತಿಯಲ್ಲಿ ಹವಾಮಾನ ವೈಪರಿತ್ಯ ಎದುರಾದರೆ ರನ್‌ವೇ ಗೋಚರ ಆಗುವವರೆಗೆ ವಿಮಾನ ಆಕಾಶದಲ್ಲಿ ಸುತ್ತಬೇಕಾದುತ್ತದೆ. ಅಥವಾ ಸಮೀಪದ ನಿಲ್ದಾಣದಲ್ಲಿ ವಿಮಾನ ಇಳಿಸಬೇಕಾಗುತ್ತದೆ. ಐಎಲ್‌ಎಸ್‌ನಿಂದ ಇಂತಹ ಸಮಸ್ಯೆಗಳು ಕೊಂಚ ಮಟ್ಟಿಗೆ ನಿವಾರಣೆ ಆಗಲಿದೆ. ವೈಪರಿತ್ಯದ ನಡುವೆ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈ ಕುರಿತಂತೆ ಮಾತನಾಡಿದ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ, ತಾಂತ್ರಿಕ ಪರಿಕರಗಳ ಅಳವಡಿಕೆ ಪೂರ್ಣವಾಗಿದೆ. ನವೆಂಬರ್‌ ಅಥವಾ ಚಳಿಗಾಲದ ಅಂತ್ಯದಿಂದ ಇದು ಕಾರ್ಯ ಆರಂಭಿಸಲಿದೆ. ಹವಾಮಾನ ವೈಪರಿತ್ಯದಿಂದ ರನ್‌ವೇ ಗೋಚರವಾಗದೆ ಲ್ಯಾಂಡಿಂಗ್‌ ಉಂಟಾಗುವ ಸಮಸ್ಯೆ ಇದರಿಂದ ನಿವಾರಣೆ ಆಗಲಿದೆ ಎಂದರು.

ನಿಲ್ದಾಣದಲ್ಲಿ ಆಗಾಗ ಸಮಸ್ಯೆ

ಪ್ರಮುಖವಾಗಿ 2015ರ ಮಾ. 9ರಂದು 74 ಪ್ರಯಾಣಿರನ್ನು ಹೊತ್ತು ಬೆಂಗಳೂರಿಂದ ಆಗಮಿಸಿದ್ದ ಸ್ಪೈಸ್‌ ಜೆಟ್‌ ಹವಾಮಾನ ವೈಪರಿತ್ಯ ಕಾರಣಕ್ಕಾಗಿಯೆ ಲ್ಯಾಂಡಿಂಗ್‌ ವೇಳೆ ತೊಡಕುಂಟಾಗಿ ರನ್‌ವೇಯಿಂದ ಸ್ಕಿಡ್‌ ಆಗಿತ್ತು. ಅದೃಷ್ಟವಶಾತ್‌ ದುರಂತವೊಂದು ತಪ್ಪಿತ್ತು. ಕಳೆದ ಆ. 16ರಂದು ಬೆಂಗಳೂರಿನಿಂದ 49 ಪ್ರಯಾಣಿಕರಿದ್ದ ಇಂಡಿಗೊ ವಿಮಾನಕ್ಕೆ ಹವಾಮಾನ ವೈಪರಿತ್ಯ ಕಾರಣದಿಂದ ಲ್ಯಾಂಡಿಂಗ್‌ ಆಗಲು ಎಟಿಸಿಯಿಂದ ಅನುಮತಿ ಸಿಕ್ಕಿರಲಿಲ್ಲ. ಬರೋಬ್ಬರಿ 1ಗಂಟೆ ಆಗಸದಲ್ಲಿಯೆ 9 ಸುತ್ತು ಹೊಡೆದು ಬಳಿಕ ಲ್ಯಾಂಡ್‌ ಆಗಿತ್ತು. ಕಳೆದ ವರ್ಷವೂ ಅಂದರೆ 2019ರ ಅ. 19ರಂದು ಗೋವಾದಿಂದ ಬಂದಿದ್ದ ಇಂಡಿಗೋ ವಿಮಾನ ಹವಾಮಾನ ವೈಪರಿತ್ಯದಿಂದ ಸರಿಯಾಗಿ ಸಿಗ್ನಲ್‌ ದೊರಕದೆ ಅರ್ಧಗಂಟೆ ಹೆಚ್ಚು ಮೇಲೆಯೆ ಸುತ್ತಾಡಿತ್ತು.

ಐಎಲ್‌ಎಸ್‌ ಕಾರ್ಯ

ಐಎಲ್‌ಎಸ್‌ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್‌ ಆಧರಿತ ತಂತ್ರಜ್ಞಾನ. ರನವೇ ಸನಿಹ ಶೆಡ್‌ ಒಂದು ಭಾಗವಾಗಿದ್ದು, ಇದು ಹವಾಮಾನ ವೈಪರಿತ್ಯದ ನಡುವೆಯೂ ವಿಮಾನ ರನ್‌ವೇನಲ್ಲಿ ಲ್ಯಾಂಡ್‌ ಆಗುವಂತೆ ತರಂಗ ಸಂದೇಶ ನೀಡುತ್ತದೆ. ಇನ್ನೊಂದು, ರನ್‌ವೇಯ ಪಕ್ಕದಲ್ಲಿಯೆ ಸ್ಥಾಪಿಸಲಾದ ತರಂಗ ಸ್ತಂಭ(ಆ್ಯಂಟೆನಾ ) ವಿಮಾನವನ್ನು ರನ್‌ವೇಯ ಮಧ್ಯಭಾಗಕ್ಕೆ ವಿಮಾನ ಹೋಗುವಂತೆ ಲೈಟಿಂಗ್‌, ತರಂಗ ಸಂದೇಶ ರವಾನಿಸುತ್ತ ಸಹಕರಿಸುತ್ತದೆ. ಆಗಸದಿಂದ ರನ್‌ವೇ ಕಾಣದೆ ಇದ್ದರೂ ತರಂಗಗಳ ಸಂದೇಶದ ಸಹಕಾರದಿಂದ ವಿಮಾನಗಳನ್ನು ಲ್ಯಾಂಡ್‌ ಮಾಡಬಹುದು. ಒಂದು ವೇಳೆ ವಿಮಾನ ಜಾರಿ ಆ್ಯಂಟಿನಾಕ್ಕೆ ತಾಕಿದರೂ ಲಘುವಾಗಿರುವ ಇವುಗಳು ಬೀಳುತ್ತವೆ ವಿನಃ ವಿಮಾನಕ್ಕೆ ಹಾನಿ ಆಗಲಾರದು.

ಐಎಲ್‌ಎಸ್‌ ಪರಿಕರಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಕಾರ್ಯಾರಂಭ ವಿಳಂಬಕ್ಕೆ ಲಾಕ್‌ಡೌನ್‌ ಕಾರಣ. ಅಕ್ಟೋಬರ್‌, ನವೆಂಬರ್‌ನಿಂದ ಇದು ಕಾರ್ಯ ನಿರ್ವಹಿಸಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಟಾಕೂರ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios