ಹಾಸನ (ಡಿ.05):  ಪತ್ನಿಯ ಕುಡಿತ, ಅನೈತಿಕ ಸಂಬಂಧ ಹಾಗೂ ಕಳ್ಳತನದ ಚಾಳಿಗಳಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಕೊಲೆ ಮಾಡಿದ್ದ ಪ್ರಕರಣದ ತನಿಖೆ ನಡೆಸಿರುವ ಆಲೂರು ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, 2020 ರ ಅಕ್ಟೋಬರ್‌ 11 ರಂದು ಬೆಳಗಿನ ಸಮಯದಲ್ಲಿ ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಈಶ್ವರಹಳ್ಳಿ ಕೂಡಿಗೆಯ ಸರ್ವೆ ನಂ 178 ರ ಜಮೀನಿನಲ್ಲಿ ಯೂಸುಫ್‌ ಎಂಬುವವರು ತಂದು ಹಾಕಿದ್ದ ಎಂ. ಸ್ಯಾಂಡ್‌ ಮರಳಿನಲ್ಲಿ ಮನುಷ್ಯನ ಕಾಲುಗಳು ಕಂಡುಬಂದಿದ್ದವು. ವಿಷಯ ತಿಳಿದ ಆಲೂರು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಒಂದು ಬಲಗಾಲಿನ ಪಾದ ಮತ್ತು ಕಾಲಿನ ಮೂಳೆಗಳು ಕಂಡುಬಂದಿದ್ದವು. ಪಾದ ನೋಡಿದರೆ ಯಾವುದೋ ಮಹಿಳೆಯ ಪಾದದಂತೆ ಕಂಡುಬರುತ್ತಿತ್ತು. ಹಾಗಾಗಿ ಮಹಿಳೆಯನ್ನು ಎಲ್ಲಿಯೋ ಕೊಲೆ ಮಾಡಿ ಸಾಕ್ಷಾಧಾರಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಶವವನ್ನು ಎಂ ಸ್ಯಾಂಡ್‌ನಲ್ಲಿ ಮುಚ್ಚಿ ಹೋಗಿರುತ್ತಾರೆಂದು ಆಲೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದರು.

ಪ್ರತೀ ರಾತ್ರಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಮತ್ತೊಬ್ಬನೊಂದಿಗೆ ಸರಸ : ಕೊನೆಗೆ ಭೀಕರ ಅಂತ್ಯ ...

ಆರೋಪಿಯ ಪತ್ತೆಗಾಗಿ ಎಎಸ್ಪಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಸಕಲೇಶಪುರ ಉಪ ವಿಭಾಗದ ಡಿವೈಎಸ್‌ಪಿ ಗೋಪಿ ಅವರ ಉಸ್ತುವಾರಿಯಲ್ಲಿ ಆಲೂರು ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್‌ ಅವರ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಕೈಗೊಂಡ ತಂಡ ಶವ ಸಿಕ್ಕ ಸ್ಥಳದಲ್ಲಿದ್ದ ಕೆಲ ಸಾಕ್ಷತ್ರ್ಯಗಳು ಹಾಗೂ ಇತರೆ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದಾಗ ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಚೋಕನಹಳ್ಳಿ ಗ್ರಾಮದ 36 ವರ್ಷದ ಸಿ.ಆರ್‌ ಮಂಜುನಾಥ್‌ ಸಿಕ್ಕಿಬಿದ್ದಿದ್ದಾನೆ.

ಈತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಆಕೆಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಸುಮಿತ್ರಳನ್ನು ಕಳೆದ 13 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಸುಮಿತ್ರಳು ಮದ್ಯಪಾನ ಮಾಡುವುದು ಮತ್ತು ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ, ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಳು. ಇದು ಸರಿಯಲ್ಲ, ಕುಟುಂಬಕ್ಕೆ ಕೆಟ್ಟಹೆಸರು ಬರುತ್ತದೆ. ನಮ್ಮ ಮಾನ ಮರ್ಯದೆ ಹೋಗುತ್ತದೆ, ಮಕ್ಕಳ ಜೀವನ ಹಾಳಾಗುತ್ತದೆ ಎಂದು ಬುದ್ಧಿವಾದ ಹೇಳಿದರೂ ಕೇಳದೆ ತನ್ನ ಚಾಳಿಯನ್ನು ಮುಂದುವರೆಸುತ್ತಿದ್ದರಿಂದ ಬೇಸತ್ತು ಮನೆಯಲ್ಲೇ ಇದ್ದ ರಿಪೀಸ್‌ ಪಟ್ಟಿಯಿಂದ ಸುಮಿತ್ರಳ ತಲೆಗೆ ಹೊಡೆದು ಕೊಲೆ ಮಾಡಿ, ಯೂಸುಫ್‌ ಅವರ ಜಮೀನಿನಲ್ಲಿ ಹಾಕಿದ್ದ ಮರಳಿನಲ್ಲಿ ಶವವನ್ನು ಹೂತಿಟ್ಟು ಕೃತ್ಯವನ್ನು ಮರೆಮಾಚಿದ್ದಾಗಿ ಒಪ್ಪಿಕೊಂಡಿರುವುದಾಗಿ ಎಸ್ಪಿ ಶ್ರೀನಿವಾಸಗೌಡ ತಿಳಿಸಿದರು.

ಪ್ರಕರಣವನ್ನು ಪತ್ತೆಹಚ್ಚಿದ ತಂಡದಲ್ಲಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಟಿ.ಸಿ. ವೆಂಕಟೇಶ, ಆಲೂರು ಪೊಲೀಸ್‌ ಠಾಣೆ ಸಿಬ್ಬಂದಿ ನವೀನ, ಮಧು, ರೇವಣ್ಣ, ಸೋಮಶೇಖರ, ಗುರುಮೂರ್ತಿ, ಪ್ರವೀಣ್‌ ಅವರ ಕಾರ್ಯವನ್ನು ಮೆಚ್ಚಿ ವಿಶೇಷ ಬಹುಮಾನ ಘೋಷಿಸಿದರು.