ಮಂಡ್ಯ (ಡಿ.04):  ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯತಮನ ಜೊತೆಗೂಡಿ ಹತ್ಯೆಗೈದಿರುವ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹನಕೆರೆ ಗ್ರಾಮದ ಪ್ರದೀಪ್‌ ಕೊಲೆಯಾದ ವ್ಯಕ್ತಿ. ಪತ್ನಿ ಶಿಲ್ಪ ಹಾಗೂ ಈಕೆಯ ಪ್ರಿಯತಮ ಮಧುನಾಯಕ್‌ ಕೊಲೆ ಮಾಡಿದ ಆರೋಪಿಗಳು. ಇವರಿಬ್ಬರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಏನಾಯ್ತು?

ಅಕ್ಕ-ಪಕ್ಕದ ಮನೆಯ ನಿವಾಸಿಗಳಾಗಿದ್ದ ಶಿಲ್ಪ ಹಾಗೂ ಪ್ರದೀಪ್‌ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 13 ವರ್ಷದ ಗಂಡುಮಗನಿದ್ದಾನೆ. ಮದುವೆಯಾಗಿ 12 ವರ್ಷಗಳ ಕಾಲ ಇಬ್ಬರೂ ಅನ್ಯೋನ್ಯ ದಾಂಪತ್ಯ ನಡೆಸಿದ್ದರು.

ಚಿಕ್ಕಮಗಳೂರು; 40ರ ಆಂಟಿ ಮೇಲೆ‌ 28 ವರ್ಷದ ಯುವಕನಿಗೆ ಪ್ರೀತಿ, ಒಪ್ಪಿಲ್ಲ ಎಂದು ಬೆಂಕಿ ಇಟ್ಟ! ...

ಮೂರು ವರ್ಷಗಳ ಹಿಂದೆ ಮಧುನಾಯಕ್‌ ಎಂಬಾತನ ಪರಿಚಯವಾಗಿದೆ. ಈತ ಮೂಲತಃ ಕೆ.ಆರ್‌.ನಗರ ಮೂಲದವನಾಗಿದ್ದು, ಸ್ವ- ಸಹಾಯ ಸಂಘಗಳಿಗೆ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದನು. ಇವನು ಮಂಡ್ಯದಲ್ಲೇ ನೆಲೆಸಿದ್ದನು ಎಂದು ಮೂಲಗಳು ತಿಳಿಸಿವೆ.

ಅನೈತಿಕ ಸಂಬಂಧ:  ಮಧುನಾಯಕ್‌ ಪರಿಚಯವಾದ ನಂತರದಲ್ಲಿ ಶಿಲ್ಪಳೊಂದಿಗೆ ಸ್ನೇಹ ಗಾಢವಾಗಿ ಬೆಳೆಯಿತು. ಇಬ್ಬರೂ ಜೊತೆಯಲ್ಲಿ ಸುತ್ತಾಡುವುದು, ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುವುದು, ಇಬ್ಬರೂ ಜೊತೆಯಾಗಿ ಸೆಲ್ಫೀ ಫೋಟೋ ತೆಗೆಸಿಕೊಳ್ಳುವುದು ನಡೆದಿತ್ತು. ಪ್ರದೀಪ್‌ ಮನೆಯಲ್ಲಿಲ್ಲದ ಸಮಯದಲ್ಲಿ ಮಧುನಾಯಕ್‌ ಬರುವುದು ಸಾಮಾನ್ಯವಾಗಿತ್ತಲ್ಲದೇ, ಇಬ್ಬರ ನಡುವೆ ಅನೈತಿಕ ಸಂಬಂಧವೂ ಬೆಳೆದಿತ್ತು ಎಂದು ಪ್ರದೀಪ್‌ ಕುಟುಂಬದವರು ತಿಳಿಸಿದ್ದಾರೆ.

ಬುದ್ಧಿ ಹೇಳಿದರೂ ಕೇಳಲಿಲ್ಲ:

ಈ ವಿಷಯ ಪ್ರದೀಪ್‌ಗೆ ಗೊತ್ತಾಗಿ ಹಲವು ಬಾರಿ ಹೆಂಡತಿಗೆ ಬುದ್ಧಿವಾದ ಹೇಳಿದ್ದರು. ಮಧುನಾಯಕ್‌ ಸಹವಾಸ ತೊರೆಯುವಂತೆ ಒತ್ತಡ ಹಾಕಿದ್ದರು. ಪತಿಯ ಮಾತನ್ನು ಲೆಕ್ಕಿಸದೆ ಶಿಲ್ಪ ಪ್ರಿಯತಮನೊಂದಿಗೆ ಓಡಾಡುತ್ತಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಅನೇಕ ಬಾರಿ ಜಗಳಗಳು ನಡೆದು ಮನಸ್ತಾಪಕ್ಕೂ ಕಾರಣವಾಗಿತ್ತು.

ಶಿಲ್ಪ ಸಂಗ ಬಿಡಲಿಲ್ಲ:  ವಿವಾಹವಾಗದ ಮಧುನಾಯಕ್‌ ಪ್ರೇಯಸಿ ಶಿಲ್ಪಳನ್ನು ತೊರೆಯಲು ಸಿದ್ಧನಿರಲಿಲ್ಲ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ಪ್ರದೀಪ್‌ ಅಡ್ಡಿಯಾಗುತ್ತಿದ್ದರಿಂದ ಇಬ್ಬರೂ ಬೇಸತ್ತಿದ್ದರು. ಈ ನಡುವೆ ಕಳೆದ 6 ತಿಂಗಳಿಂದ ಪತಿಗೆ ಗೊತ್ತಾಗದಂತೆ ನಿದ್ರೆ ಮಾತ್ರೆ ನೀಡಿ ರಾತ್ರಿ ವೇಳೆ ಇಬ್ಬರೂ ಅಕ್ರಮವಾಗಿ ಜೊತೆಗೂಡುತ್ತಿದ್ದರೆಂಬುದು ತನಿಖೆ ಸಮಯದಲ್ಲಿ ಗೊತ್ತಾಗಿದೆ.

ಕೊಲೆಗೆ ಸ್ಕೆಚ್‌:  ಅಂತಿಮವಾಗಿ ನ.17ರಂದು ಮಧುನಾಯಕ್‌ ಹಾಗೂ ಶಿಲ್ಪ ಜೊತೆಗೂಡಿ ಪ್ರದೀಪ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಅದರಂತೆ ರಾತ್ರಿ ಪ್ರದೀಪ್‌ಗೆ ಗೊತ್ತಾಗದಂತೆ ನಿದ್ರೆ ಬೆರೆಸಿ ಕೊಟ್ಟು ಮಲಗಿಸಿದರು. ಗಾಢನಿದ್ರೆಗೆ ಜಾರಿದ ಬಳಿಕ ಮಧುನಾಯಕ್‌ ಮತ್ತು ಶಿಲ್ಪ ಸೇರಿಕೊಂಡು ಪ್ರದೀಪ್‌ನನ್ನು ಉಸಿರುಗಟ್ಟಿಸಿ ಸಾಯಿಸಿದರು.

ಕುಟುಂಬದವರೆದುರು ನಾಟಕ:  ಬೆಳಗ್ಗೆ ತನಗೇನೂ ಗೊತ್ತಿಲ್ಲದಂತೆ ಶಿಲ್ಪ ಕುಟುಂಬದವರೆದುರು ನಾಟಕವಾಡಿದಳು. ಮೃತ ಪ್ರದೀಪ್‌ಗೆ ಅಂತ್ಯಕ್ರಿಯೆ ಸಮಯದಲ್ಲಿ ದೇಹದ ಮೇಲೆ ಗಾಯಗಳಾಗಿದ್ದನ್ನು ಕುಟುಂಬದವರು ಗಮನಿಸಿದ್ದರು. ಅವರಿಗೆ ಶಿಲ್ಪಳ ಮೇಲೆ ಅನುಮಾನಗಳಿದ್ದವು. ಅಂತ್ಯಕ್ರಿಯೆ ಮುಗಿದ ನಂತರದ ದಿನಗಳಲ್ಲಿ ಶಿಲ್ಪಳಾ ನಡವಳಿಕೆಯಲ್ಲಿ ಬದಲಾವಣೆಗಳಾಗುತ್ತಿರುವುದನ್ನು ಗಮನಿಸಿದ್ದ ಕುಟುಂಬದವರು ಶಿಲ್ಪ ಹಾಗೂ ಮಧುನಾಯಕ್‌ ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದರು.

ಜೈಲುಪಾಲು:  ಅದರಂತೆ ಶಿಲ್ಪಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಇಬ್ಬರೂ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಧೀಶರ ಎದುರು ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.