ಮಂಡ್ಯ(ಆ.20): ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ಕೆ.ಆರ್‌.ಪೇಟೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ಘಟಕಗಳ ವಿರುದ್ಧ ಸೋಮವಾರ ದಾಳಿ ಮಾಡಿದ್ದಾರೆ.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿಯಲ್ಲಿ ಲೈಸೆನ್ಸ್‌ ಇಲ್ಲದೆ ಅಕ್ರಮವಾಗಿ ಜೈ ಮಾರುತಿ ಹೆಸರಿನಲ್ಲಿ ಕಲ್ಲು ಗಣಿಗಾರಿಕೆಯ ಮಾಡುತ್ತಿದ್ದ ಘಟಕದ ಮೇಲೆ ತಹಸೀಲ್ದಾರ್‌ ಎಂ.ಶಿವಮೂರ್ತಿ ನೇತೃತ್ವದ ತಂಡ  ದಾಳಿ ನಡೆಸಿ ಅಕ್ರಮ ಗಣಿಗಾರಿಕೆಗೆ ಬೀಗ ಮುದ್ರೆ ಹಾಕಿ ಮಾಲಿಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿತು.

6ವರ್ಷಗಳಿಂದ ತೆರಿಗೆ ವಂಚನೆ:

ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಈ ತಂಡ ಜೈಮಾರುತಿ ಕಲ್ಲು ಗಣಿಗಾರಿಕೆಯ ಮಾಲಿಕ ಮಂಜುನಾಥ್‌ 2014ರಿಂದ ಈವರೆಗೆ ಪರವಾನಿಗೆ ಪಡೆದುಕೊಳ್ಳದೆ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಮಂಡ್ಯ: 700 ಎಕರೆ ಕೃಷಿಭೂಮಿಗೆ ನೀರು

ಪರಿಸರಕ್ಕೆ ಹಾನಿಯಾಗುವಂತೆ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸೋಮೇನಹಳ್ಳಿಯ ಜೈಮಾರುತಿ ಸ್ಟೋನ್‌ ಕ್ರಷರ್‌ ಮೇಲೆ ದಾಳಿ ನಡೆಸುವ ಸುಳಿವು ಅರಿತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ದಂಧೆಕೋರರು ಸ್ಥಳದಿಂದಲೇ ಪರಾರಿಯಾಗಿದ್ದರು. ಆದರೂ ಅಧಿಕಾರಿಗಳ ತಂಡ ಕ್ರಷರ್‌ ಬಳಿ ನಿಲ್ಲಿಸಿದ್ದ 2 ಜೆಸಿಬಿ ಮತ್ತು 2 ಟಿಪ್ಪರ್‌ ಲಾರಿಗಳನ್ನು ವಶಪಡಿಸಿಕೊಂಡು ಕ್ರಷರ್‌ಗೆ ಬೀಗ ಜಡಿದು ಮಾಲಿಕರ ವಿರುದ್ಧ ಕ್ರಿಮಿನಲ… ಪ್ರಕರಣ ದಾಖಲಿಸಿದ್ದಾರೆ.

ಶಿವಪುರದ ಗಣಿ ಮೇಲೂ ದಾಳಿ:

ಶೀಳನೆರೆ ಹೋಬಳಿ ಶಿವಪುರದ ಬಳಿ ಗಣಿಗಾರಿಕೆ ನಡೆಸುತ್ತಿದ್ದ ಟಿ.ಜೆ ಸ್ಟೋನ್‌ ಕ್ರಷರ್‌ ಮೇಲೂ ದಾಳಿ ಮಾಡಿದ ಅಧಿಕಾರಿಗಳ ತಂಡ, ಈ ಕ್ರಷರ್‌ ಅಧಿಕೃತ ಪರವಾನಗಿ ಪಡೆದಿದ್ದರೂ ಕೂಡ ಅನಧೀಕೃತವಾಗಿ ಎಂಸ್ಯಾಂಡ್‌, ಜಲ್ಲಿ, ಸೈಜುಗಲ್ಲುಗಳನ್ನು ಹೊರ ಸಾಗಾಣಿಕೆ ಮಾಡಿರುವ ಲೋಡ್‌ಗಳ ಬಗ್ಗೆ ಸೂಕ್ತ ದಾಖಲೆ ಸಲ್ಲಿಸದ ಕಾರಣ ಅಲ್ಲಿಯವರೆಗೆ ಕ್ರಷರ್‌ ಬಂದ್‌ ಮಾಡಿ ದಾಖಲೆ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳುವಂತೆ ಮಾಲಿಕರಿಗೆ ಅಧಿಕಾರಿಗಳು ಸಲಹೆ ನೀಡಿದರು. ಪರಿಸರ ಉಳಿಸುವ ನಿಟ್ಟಿನಲ್ಲಿ ಕ್ರಷರ್‌ ಸುತ್ತಲೂ ಗಿಡ-ಮರಗಳನ್ನು ಬೆಳೆಸಿರುವ ಬಗ್ಗೆ ತಂಡ ತೃಪ್ತಿ ವ್ಯಕ್ತಪಡಿಸಿತು.

ಕ್ರಷರ್‌ಗೆ ಭೇಟಿ ನೀಡಿದ ವೇಳೆ ವಿವಿಧ ಇಲಾಖೆಗಳಿಂದ ಪಡೆದಿರುವ ಅಧಿಕೃತ ಪರವಾನಗಿ ಪತ್ರಗಳನ್ನು ಕ್ರಷರ್‌ ಮಾಲಿಕ ಎಚ್‌.ಟಿ.ಲೋಕೇಶ್‌ ನೀಡಿದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅಧಿಕೃತ ಪರವಾನಗಿ ಪಡೆದುಕೊಂಡಿರುವಂತೆ ಎಂಸ್ಯಾಂಡ್‌, ಜಲ್ಲಿ, ಸೈಜುಗಲ್ಲುಗಳನ್ನು ಹೊರ ಸಾಗಿಸುವಾಗ ಅಗತ್ಯ ಬಿಲ್‌ ಇತರೆ ದಾಖಲೆ ಪತ್ರಗಳನ್ನು ನೀಡುವ ಮೂಲಕ ಕ್ರಷರ್‌ ನಡೆಸುವಂತೆ ಸಲಹೆ ನೀಡಿದರು.

ಲೆಕ್ಕಪತ್ರಗಳಲ್ಲಿ ವಂಚನೆ:

ಟಿ.ಜೆ ಸ್ಟೋನ್‌ ಕ್ರಷರ್‌ ಮಾಲಿಕ ನಿತ್ಯ 75ರಿಂದ 80ಲೋಡ್‌ನಷ್ಟುಜಲ್ಲಿ, ಎಂಸ್ಯಾಂಡ್‌ ಉತ್ಪನ್ನಗಳನ್ನು ಹೊರ ಸಾಗಣೆ ನಡೆಸಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಪೂರ್ಣ ಪ್ರಮಾಣದಲ್ಲಿ ಲೆಕ್ಕಪತ್ರ ತೋರಿಸಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಷರನ್ನು ಸೀಜ್‌ ಮಾಡಲಾಗಿದೆ ಎಂದು ತಹಸೀಲ್ದಾರ್‌ ಶಿವಮೂರ್ತಿ ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾ ಟಾಸ್ಕೊಫೋರ್ಸ್‌ ಸಮಿತಿ ಆದೇಶ ನೀಡುವವರೆಗೆ ಕ್ರಷರ್‌ ಸ್ಥಗಿತಗೊಳಿಸಬೇಕು. ಅಲ್ಲಿಯವರೆಗೆ ಯಾವುದೆ ರೀತಿಯ ಚಟುವಟಿಕೆಗಳನ್ನು ಮಾಡದಂತೆ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಮುತ್ತಪ್ಪ ಮಾಲಿಕರಿಗೆ ಸೂಚಿಸಿದರು.

ಈ ದಾಳಿಯ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಅಧಿಕಾರಿ ಮುತ್ತಪ್ಪ, ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿ ಸವಿತಾ, ಅರಣ್ಯ ಇಲಾಖೆ ಅಧಿಕಾರಿ ಮಧುಸೂದನ್‌, ಎಸ್‌ಐ ಎಚ್‌.ಎಸ್‌.ವೆಂಕಟೇಶ್‌, ರಾಜಸ್ವ ನಿರೀಕ್ಷಕ ಚಂದ್ರಶೇಖರ್‌, ಉಪತಹಶೀಲ್ದಾರ್‌ ಚಂದ್ರಶೇಖರಗೌಡ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾಜರ್ಜುನ್‌, ಸಂತೇಬಾಚಹಳ್ಳಿ ಉಪತಹಸೀಲ್ದಾರ್‌ ರಾಮಚಂದ್ರು ಮತ್ತಿತರರು ಇದ್ದರು.