ಮಂಡ್ಯ(ಆ.20): ಪಾಂಡವಪುರದಲ್ಲಿ ಸುಮಾರು 700 ಎಕರೆಗೆ ಕೃಷಿ ಪ್ರದೇಶಕ್ಕೆ ನೀರುಣಿಸುವ ತಾಲೂಕಿನ ಮಲ್ಲಿಗೆರೆ ಏತ ನೀರಾವರಿ ಯೋಜನೆಯಿಂದ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಜಿಪಂ ಸದಸ್ಯ ಸಿ.ಅಶೋಕ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕೆಆರ್‌ಎಸ್‌ ಹಿನ್ನೀರಿನ ಮಲ್ಲಿಗೆರೆ ಗ್ರಾಮದಲ್ಲಿರುವ ಕಾವೇರಿ ನೀರಾವರಿ ನಿಗಮದ ಏತನೀರಾವರಿ ಯೋಜನೆಯಿಂದ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಅದಾದ ಬಳಿಕ ಮಳೆಯಾಗದೆ ಕೆಆರ್‌ಎಸ್‌ ನಲ್ಲಿ ನೀರಿನ ಮಟ್ಟಕಡಿಮೆಯಾದ ಹಿನ್ನೆಲೆಯಲ್ಲಿ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಕೆಆರ್‌ಎಸ್‌ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾಗಿದೆ. ಏತನೀರಾವರಿ ಯೋಜನೆಯ ಮೂಲಕ ಚಾಲನೆ ನೀಡಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಲ್ಲಿಗೆರೆ ಏತನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 700 ಎಕರೆಯ ಅಚ್ಚುಕಟ್ಟು ಪ್ರದೇಶವಿದೆ. ಅಚ್ಚುಕಟ್ಟು ವ್ಯಾಪ್ತಿಯ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡು ಬೇಸಾಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

25 ಕೋಟಿ ವೆಚ್ಚದ ಯೋಜನೆ:

ಈಗಾಗಲೇ ಏತನೀರಾವರಿ ಯೋಜನೆಯ ಜೊತೆಗೆ ಚಿನಕುರಳಿ ಹೋಬಳಿಯ ಸುಮಾರು 22 ಕೆರೆಗಳಿಗೆ 25 ಕೋಟಿ ರು. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಶಾಸಕ ಸಿ.ಎಸ್‌.ಪುಟ್ಟರಾಜು ಚಾಲನೆ ನೀಡಿದ್ದಾರೆ. ಯೋಜನೆಯ ಪೂರ್ಣಗೊಂಡ ಬಳಿಕ ತ್ವರಿತವಾಗಿ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ತಮ್ಮ ಕ್ಷೇತ್ರದ ಜನತೆಯಲ್ಲಿ ಹೊಸ ಜಾಗೃತಿ ಹುಟ್ಟು ಹಾಕುತ್ತಿರುವ ಸುಮಲತಾ

ಈ ವೇಳೆ ಮುಖಂಡರಾದ ರಾಮಕೃಷ್ಣೇಗೌಡ, ಬೆಟ್ಟೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ರವಿಕರ, ಎಇಇ ವಾಸುದೇವ್‌ ಉಪಸ್ಥಿತರಿದ್ದರು.