ಪಾಂಡವಪುರ [ಸೆ.12]:  ಕೇವಲ ಕೆಆರ್‌ಎಸ್‌ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ನಿಷೇಧ ಹೇರಿರುವ ಜಿಲ್ಲಾಡಳಿತ, ತಾಲೂಕಿನ ವಿವಿಧ ಕಡೆ ಅಕ್ರಮವಾಗಿ ನಡೆಯುವ ಕ್ರಷರ್‌ ಹಾಗೂ ಕಲ್ಲು ಗಣಿಗಾರಿಕೆಗೆ ಯಾವುದೇ ಕಡಿವಾಣ ಹಾಕಿಲ್ಲ.

ಚಿಕ್ಕಬ್ಯಾಡರಹಳ್ಳಿ- ಕನಗನಮರಡಿ ಅರಣ್ಯ ಪ್ರದೇಶ ಸಮೀಪದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಹಾಗೂ ಕ್ರಷರ್‌ನಿಂದ ಕೆ ಆರ್‌ಎಸ್‌ಗೆ ಅಪಾಯ ಎದುರಾಗುವ ಸೂಚನೆ ಇದೆ. ಜತೆಗೆ ಸುತ್ತಮುತ್ತಲಿನ ಪರಿಸರ ಹಾಗೂ ಜನಸಾಮಾನ್ಯರ ಆರೋಗ್ಯದ ಮೇಲೂ ಸಹ ಕೆಟ್ಟಪರಿಣಾಮ ಬೀರುತ್ತಿದ್ದರೂ ಸಹ ಜಿಲ್ಲಾಡಳಿತ, ಗಣಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಜಾಣ ಮೌನಕ್ಕೆ ಶರಣಾಗಿದ್ದಾರೆ.

ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಸ್ಟೋನ್‌ ಕ್ರಷಿಂಗ್‌ ಕೆಆರ್‌ಎಸ್‌ ನಿಂದ 20 ಕಿಮೀ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ಹಾಗೂ ಕ್ರಷಿಂಗ್‌ ನಡೆಸಲು ಗಣಿ ಅಧಿಕಾರಿಗಳು ಅವಕಾಶ ನೀಡುತ್ತಿದ್ದಾರೆ ಎನ್ನುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಕೇವಲ ಬೇಬಿಬೆಟ್ಟದ ಕಾವಲು ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಬಹುತೇಕ ಕಡೆಗೆ ಯಾವುದೇ ಅನುಮತಿ ಇಲ್ಲದೆ ಕಲ್ಲು ಗಣಿಗಾರಿಕೆ, ಕ್ರಷರ್‌ಗಳು ನಡೆಯುತ್ತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ಚಿಕ್ಕಬ್ಯಾಡರಹಳ್ಳಿ- ಕನಗನಮರಡಿ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಸ್ಟೋನ್‌ ಕ್ರಷರ್‌ ನಡೆಸಲಾಗಿದೆ. ಇಲ್ಲಿನ ಗಣಿ ಮಾಲೀಕರು ಕಲ್ಲು ಗಣಿಗಾರಿಕೆಗೆ 2 ಎಕರೆ ಭೂಮಿಯನ್ನು ಲೀಸ್‌ಗೆ ಪಡೆದುಕೊಂಡಿದ್ದಾರೆ. ಆದರೆ, ಸ್ಟೋನ್‌ ಕ್ರಷರ್‌ಗೆ ಫಾರಂ ಬಿ-1 ಪಡೆದಿದ್ದಾರೆ.

ಆದರೆ ಫಾರಂ ‘ಸಿ’ ಪಡೆದಿಲ್ಲ. ಫಾರಂ ‘ಸಿ’ ಪಡೆಯದಿದ್ದರೂ ಸಹ ಕಲ್ಲು ಕ್ರಷಿಂಗ್‌ ನಡೆಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ. ಇಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿರುವುದರಿಂದ ಕಲ್ಲು ಸಿಡಿಸಲು ಮೆಗ್ಗಾರ್‌ ಬ್ಲಾಸ್ಟಿಂಗ್‌ ಮಾಡುತ್ತಿದ್ದಾರೆ. ಇದು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿಸಿದೆ. ಮೆಗ್ಗಾರ್‌ ಬ್ಲಾಸ್ಟಿಂಗ್‌ ಮಾಡುವುದರಿಂದ ಮನೆಗಳು ಬಿರುಕು ಬಿಡುತ್ತಿವೆ, ಕ್ರಷರ್‌ ಧೂಳಿನಿಂದ ಸುತ್ತಮುತ್ತಲಿನ ಪರಿಸರದ ಮೇಲೆ ಸಾಕಷ್ಟುಕೆಟ್ಟಪರಿಣಾಮ ಬೀರುತ್ತಿದೆ ಎಂಬುದು ದೂರು.

ಕ್ರಷರ್‌ ನಿಂದ ಬರುವ ಕಲ್ಲಿನ ಧೂಳು ಕೃಷಿ ಭೂಮಿಯ ಮೇಲೆ ಬೀಳುತ್ತಿರುವುದರಿಂದ ರೈತರ ಬೆಳೆಗಳು ಸರಿಯಾಗಿ ಬರುತ್ತಿಲ್ಲ. ಮನುಷ್ಯರ ಆರೋಗ್ಯದ ಮೇಲು ಸಹ ಕೆಟ್ಟಪರಿಣಾಮ ಬೀರುತ್ತಿದೆ. ಇದೀಗ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟರೆ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಗಿತಗೊಳ್ಳುತ್ತಿದ್ದಂತೆ ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆಗಳು ಹೆಚ್ಚಾಗುತ್ತಿವೆ.

ಈ ಭಾಗದಲ್ಲೂ ಸಹ ಗಣಿಗಾರಿಕೆಗೆ ಅವಕಾಶ ನೀಡಬಾರದು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಬೇರೆಡೆ ನಡೆಯುತ್ತಿರುವ ಗಣಿಗಾರಿಕೆಯ ಬಗ್ಗೆ ಕಿಂಚಿತ್ತು ತಲೆ ಕಡೆಸಿಕೊಳ್ಳುತ್ತಿಲ್ಲ.