ಬಂಟ್ವಾಳ (ನ.15):   ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಅಕ್ರಮ ರೆಡ್ ಬಾಕ್ಸೈಟ್ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. 

ದಾಖಲೆ ಸಹಿತವಾಗಿ ಮಾಜಿ ಸಚಿವ ರಮಾನಾಥ್ ರೈ ಬಿಜೆಪಿ ಶಾಸಕರ ರಾಜೇಶ್ ವಿರುದ್ಧ ಆರೋಪ ಮಾಡಿದ್ದಾರೆ. ಪತ್ನಿ ಉಷಾ.ಆರ್.ನಾಯ್ಕ್ ಹೆಸರಿನಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಸುತ್ತಿದ್ದಾರೆ.  ಕಲ್ಲು ಕೋರೆಗೆ ಅಧಿಕೃತ ಲೈಸೆನ್ಸ್ ಪಡೆದು ಭಾರೀ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಪತ್ನಿ ಉಷಾ.ಆರ್.ನಾಯ್ಕ್ ಹೆಸರಿನಲ್ಲಿ ತೆಂಕ ಎಡಪದವು ಗ್ರಾಮದಲ್ಲಿ ಕಲ್ಲು ಕೋರೆಗೆ ಲೈಸೆನ್ಸ್ ಪಡೆದುಕೊಂಡು ಆ ಲೈಸೆನ್ಸ್ ಮೂಲಕ ಮುಡಿಪು ಗ್ರಾಮದ ಗುಡ್ಡದಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಸುತ್ತಿದ್ದಾರೆ.  ಆಂಧ್ರ ಪ್ರದೇಶ, ತಮಿಳುನಾಡಿನ ಸಿಮೆಂಟ್ ಫ್ಯಾಕ್ಟರಿಗಳಿಗೆ ರೆಡ್ ಬಾಕ್ಸೈಟ್ ಪೂರೈಕೆ ಮಾಡುತ್ತಿದ್ದು ಬಂಟ್ವಾಳದ ಕೈರಂಗಳ ಗ್ರಾ.ಪಂ ಪಿಡಿಓ ಕೂಡ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯದಲ್ಲಿ ಮೊದಲ ಪ್ಲಾಸ್ಟಿಕ್‌ ಮನೆ ನಿರ್ಮಾಣ: ಚಿಂದಿ ಆಯುವ ಮಹಿಳೆಗೆ ಹಸ್ತಾಂತರ ... 

ಶಾಸಕರ ಪತ್ನಿ ಹೆಸರಲ್ಲಿ 24 ಸಾವಿರ ಟನ್, ಪಿಡಿಓ ಹೆಸರಲ್ಲಿ 14 ಸಾವಿರ ಟನ್ ಪೂರೈಕೆ ಮಾಡಿದ್ದು, ಸರ್ಕಾರಕ್ಕೆ ವಂಚಿಸಿ ಭಾರೀ ಪ್ರಮಾಣದ ರೆಡ್ ಬಾಕ್ಸೈಟ್ ಪೂರೈಕೆ ಮಾಡಿದ್ದಾರೆ.

ಮುಡಿಪು ಭಾಗದ ಕೈರಂಗಳ, ಬಾಳೆಪುಣಿ ಗ್ರಾಮದಿಂದ ಪೂರೈಕೆ ಮಾಡುತ್ತಿದ್ದು, ನಿವೇಶನಕ್ಕಾಗಿ ಜಾಗ ಸಮತಟ್ಟು ಮಾಡುವ ಹೆಸರಲ್ಲಿ 6.76 ಎಕರೆ ಜಾಗದಲ್ಲಿ ದಂಧೆ ನಡೆಸಿದ್ದಾರೆ.  ಸದ್ಯ ದ.ಕ ಡಿಸಿ ಸೂಚನೆ ಹಿನ್ನೆಲೆ ಎಸಿ ದಾಳಿ ಬಳಿಕ ದಂಧೆ ಸ್ಥಗಿತವಾಗಿದೆ ಎಂದು  ರಮಾನಾಥ್ ರೈ ದಾಖಲೆ ಬಿಡುಗಡೆ ಮಾಡಿದ್ದಾರೆ. 
 
ರಾಜೇಶ್ ನಾಯ್ಕ್ ಸ್ಪಷ್ಟನೆ : ಬಂಟ್ವಾಳ ಬಿಜೆಪಿ ಶಾಸಕರ ವಿರುದ್ಧ ಅಕ್ರಮ ರೆಡ್ ಬಾಕ್ಸೈಟ್ ದಂಧೆ ಆರೋಪ ಹಿನ್ನೆಲೆ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ರಮಾನಾಥ್ ರೈ ಅವರು ಮುಡಿಪು ಗ್ರಾಮದ ಬಾಕ್ಸೈಟ್ ವ್ಯವಹಾರದ ಬಗ್ಗೆ ಆರೋಪಿಸಿದ್ದಾರೆ. ನನ್ನ ‌ಮತ್ತು ನನ್ನ ಪತ್ನಿಯ ಹೆಸರಲ್ಲಿ ಅದಕ್ಕೆ ಪರ್ಮಿಟ್ ಇದೆ ಅಂದಿದ್ದಾರೆ.  ನನ್ನ ಪರ್ಮಿಟ್ ಇರೋದು ತೆಂಕ ಎಡಪದವು ಗ್ರಾಮದಲ್ಲಿ.  ಆ ಜಾಗದಲ್ಲಿ ಹಲವು ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದೇನೆ . ಆದರೆ ಅದು ಬಾಕ್ಸೈಟ್ ಅಲ್ಲ, ಲ್ಯಾಟರೈಟ್ ಗಣಿಗಾರಿಕೆ.  ನನಗೆ ತಿಳಿದ ಮಟ್ಟಿಗೆ ಬಾಕ್ಸೈಟ್ ಖನಿಜ ದ.ಕ‌ ಜಿಲ್ಲೆಯಲ್ಲಿ ‌ಲಭ್ಯವಿಲ್ಲ ಎಂದಿದ್ದಾರೆ.

ಅದು ಪ್ರಮುಖ ಖನಿಜವಾದ ಕಾರಣ ಕೇಂದ್ರದ ಅನುಮತಿ ಅಗತ್ಯ. ಅವರು ಕೊಟ್ಟ ದಾಖಲೆಗಳಲ್ಲೂ ನನ್ನ ವಸ್ತುಗಳು ಎಡಪದವಿನಿಂದ ಹೋದ ಬಗ್ಗೆ ಸ್ಪಷ್ಟವಾಗಿದೆ.  ಹೀಗಾಗಿ ವಕೀಲರ ಜೊತೆ ಚರ್ಚಿಸಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.