ಮಂಗಳೂರು, (ನ.11): ಕರ್ನಾಟಕದ ಮೊದಲ ಪ್ಲಾಸ್ಟಿಕ್‌ ವಾಸದ ಮನೆ ಮಂಗಳೂರಿನಲ್ಲಿ ಸಿದ್ಧಗೊಂಡಿದೆ. ಪ್ಲಾಸ್ಟಿಕ್‌ ಚಿಂದಿ ಆಯುವ ಮಹಿಳೆಯೊಬ್ಬರಿಗೆ ನಗರದ ಹೊರವಲಯದ ಪಚ್ಚನಾಡಿಯಲ್ಲಿ ಈ ಮನೆಯನ್ನು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್‌ ಉಚಿತವಾಗಿ ನಿರ್ಮಿಸಿ ಹಸ್ತಾಂತರಿಸಿದೆ. 

ಚಿಂದಿ ಆಯುವ ಮಹಿಳೆ ಕಮಲ ಈಗ ಪ್ಲಾಸ್ಟಿಕ್‌ ಮನೆಯ ಮೊದಲ ಒಡತಿ. ಸುಮಾರು 350 ಚದರ ಅಡಿ ವಿಸ್ತೀರ್ಣದ ಆಶ್ರಯ ಮನೆ ಮಾದರಿಯ ಈ ಪ್ಲಾಸ್ಟಿಕ್‌ ಮನೆಗೆ 4.30 ಲಕ್ಷ ರು. ವೆಚ್ಚ ತಗಲಿದೆ. ಹೈದರಾಬಾದ್‌ನ ಬಂಬೂ ಹೌಸ್‌ ಕಂಪನಿ ಜೊತೆಗಿನ ಒಪ್ಪಂದ ಪ್ರಕಾರ ಅಗ್ನಿ, ಗಾಳಿ, ಮಳೆ ನಿರೋಧಕ ಪ್ಲಾಸ್ಟಿಕ್‌ ಮನೆಯನ್ನು ನಿರ್ಮಿಸಲಾಗಿದೆ. 

ಚಳಿಗಾಲದಲ್ಲಿ ಕಾಡುವ ನೋವಿಗೆ ಅಡುಗೆ ಮನೆಯಲ್ಲಿವೆ ಪೈನ್ ಕಿಲ್ಲರ್ಸ್!

ಈ ಮನೆಯ ಬಾಳ್ವಿಕೆ 30 ವರ್ಷ ಎಂದು ಹೇಳಲಾಗಿದ್ದು, ಖಾಸಗಿ ಬ್ರಾಂಡ್‌ ಕಂಪನಿಗಳ ಸಾಮಾಜಿಕ ನಿಧಿಯ ನೆರವು ಈ ಮನೆಗೆ ಲಭಿಸಿದೆ. ಸ್ಥಳೀಯ ನಿವಾಸಿ ಕಮಲ ಎಂಬವರಿಗೆ ಅವರದೇ 9 ಸೆಂಟ್ಸ್‌ ಜಾಗದಲ್ಲಿ 15 ದಿನಗಳ ಸೀಮಿತ ಅವಧಿಯಲ್ಲಿ ಈ ಮನೆ ನಿರ್ಮಾಣವಾಗಿದೆ. 

ಇದಕ್ಕೆ ಸುಮಾರು 1,500 ಕೇಜಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗಿದೆ. ಕಿಚನ್‌, ಹಾಲ್‌, ಒಂದು ಕೋಣೆ, ಸ್ಟೋರ್‌ ರೂಂ ಹಾಗೂ ಬಾತ್‌ರೂಂನ್ನು ಇದು ಒಳಗೊಂಡಿದೆ. ಇದು ಟೆಂಟ್‌ ಮಾದರಿಯ ಮನೆಗಳನ್ನು ಹೋಲುವುದರಿಂದ ಈ ಮನೆಗೆ ಸ್ಥಳೀಯಾಡಳಿತದ ಪರವಾನಿಗೆಯೂ ಬೇಕಾಗಿಲ್ಲ ಎನ್ನುತ್ತಾರೆ ಫೌಂಡೇಷನ್‌ನ ಕಾರ್ಯಕ್ರಮ ನಿರ್ದೇಶಕ ಚಂದನ್‌.

ಬಳಸಿ ಬಿಸಾಡಿದ, ಅದರಲ್ಲೂ ಮಾರುಕಟ್ಟೆಇಲ್ಲದ ಚಾಕಲೇಟ್‌ ರಾರ‍ಯಪರ್‌, ಟೆಟ್ರಾಪ್ಯಾಕ್‌, ತಿಂಡಿತಿನಿಸುಗಳ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರು ಬಳಕೆ ಮಾಡಲಾಗಿದೆ. ಹೈದರಾಬಾದ್‌ ಕಂಪನಿಯು ಗುಜರಾತ್‌ನಲ್ಲಿ ಇಂತಹ ಪ್ಲಾಸ್ಟಿಕ್‌ಗಳನ್ನು ಸಂಸ್ಕರಿಸಿದ್ದು, ಮರು ಬಳಕೆಗೆ ಸಿದ್ಧಪಡಿಸಿದೆ. 

ಅಲ್ಲದೆ ಎಲ್ಲ ರೀತಿಯ ವೈಜ್ಞಾನಿಕ ಮಾನದಂಡಗಳನ್ನು ಪಾಲಿಸಲಾಗಿದೆ. ಆಧಾರಕ್ಕೆ ಕಬ್ಬಿಣ ಹಾಗೂ ತಳಮಟ್ಟಕ್ಕೆ ಮಾತ್ರ ಕಾಂಕ್ರಿಟ್‌ ಬಳಸಲಾಗಿದೆ. ಇದನ್ನು ಹೊರತುಪಡಿಸಿದರೆ ಕೇವಲ ಪ್ಲಾಸ್ಟಿಕ್‌ ಮಾತ್ರ ಬಳಸಲಾಗಿದೆ.

ಬೈಕಂಪಾಡಿಯಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಕೇಂದ್ರವನ್ನು ಸ್ಥಾಪಿಸಿದ್ದು, 40ರಿಂದ 50 ಕೇಜಿ ಪ್ಲಾಸ್ಟಿಕ್‌ ನಿತ್ಯವೂ ಸಂಗ್ರಹವಾಗುವಂತ ನೋಡಿಕೊಳ್ಳಲಾಗುತ್ತಿದೆ. ಅಲ್ಲಿಂದ ಮರುಬಳಕೆಯ ಪ್ಲಾಸ್ಟಿಕ್‌ನ್ನು ವಿದೇಶಗಳಿಗೆ ರಫ್ಟುಮಾಡಲಾಗುತ್ತಿದೆ. ಪ್ಲಾಸ್ಟಿಕ್‌ ಸಂಗ್ರಹಕ್ಕೆ ಸಿಬ್ಬಂದಿ ನೇಮಕ ಮಾಡಿದ್ದು, ಸಿಬ್ಬಂದಿಗೂ ಸುರಕ್ಷಾ ದಿರಿಸುಗಳನ್ನು ನೀಡಲಾಗಿದೆ ಎಂದು ಚಂದನ್‌ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೈದರಾಬಾದ್‌ ಸಂಸ್ಥೆ ಆಂಧ್ರ ಪ್ರದೇಶದಲ್ಲಿ ಇದೇ ಮಾದರಿಯಲ್ಲಿ ಪ್ಲಾಸ್ಟಿಕ್‌ ಮನೆಗಳನ್ನು ನಿರ್ಮಿಸಿದೆ. ಆದರೆ ಕರ್ನಾಟಕದಲ್ಲಿ ಇದೇ ಮೊದಲ ಪ್ಲಾಸ್ಟಿಕ್‌ ಮನೆ. ಸರ್ಕಾರ ಉಚಿತವಾಗಿ ಜಾಗ ನೀಡಿದರೆ, ನಮ್ಮದೇ ವೆಚ್ಚದಲ್ಲಿ ಪ್ಲಾಸ್ಟಿಕ್‌ ಮನೆಗಳನ್ನು 3.50 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲು ಪ್ರಯತ್ನಿಸಲಾಗುವುದು. ಇದೇ ಮಾದರಿಯಲ್ಲಿ ಇನ್ನೂ 10ರಿಂದ 16 ಪ್ಲಾಸ್ಟಿಕ್‌ ಮನೆಗಳನ್ನು ಪಚ್ಚನಾಡಿ ಸುತ್ತಮುತ್ತ ನಿರ್ಮಿಸಿಕೊಡುವ ಉದ್ದೇಶವನ್ನು ಫೌಂಡೇಷನ್‌ ಹೊಂದಿದೆ. ಈ ಪ್ಲಾಸ್ಟಿಕ್‌ ಮನೆಯನ್ನು ಟೆಂಟ್‌ ಮಾದರಿಯಂತೆ ಬೇಕಾದಲ್ಲಿಗೆ ಸುಲಭದಲ್ಲಿ ಸ್ಥಳಾಂತರಿಸಲು ಕೂಡ ಸಾಧ್ಯವಿದೆ ಎನ್ನುತ್ತಾರೆ ಚಂದನ್‌.

ಈ ಜಾಗದಲ್ಲಿ ಮಣ್ಣಿನ ಗೋಡೆಯ ನನ್ನ ಮನೆ ಬಿದ್ದುಹೋಗಿತ್ತು. ಈಗ ಅದೇ ಜಾಗದಲ್ಲಿ ಇವರು ಪ್ಲಾಸ್ಟಿಕ್‌ ಮನೆ ನಿರ್ಮಿಸಿದ್ದಾರೆ. ಈ ಮನೆ ಬಹಳ ಸೊಗಸಾಗಿದ್ದು, ಉತ್ತಮವಾಗಿದೆ. ನಾನು ಇದರಲ್ಲೇ ವಾಸಕ್ಕೆ ಆರಂಭಿಸಿದ್ದೇನೆ.-ಕಮಲ, ಪ್ಲಾಸ್ಟಿಕ್‌ ಮನೆಯ ಫಲಾನುಭವಿ

ನಮ್ಮಲ್ಲಿ ಬಾಟಲ್‌ ಟು ಬಾಟಲ್‌ ಟೆಕ್ನಾಲಜಿ ಇಲ್ಲ. ನಮ್ಮಲ್ಲಿ ಬಳಸಿದ ಪ್ಲಾಸ್ಟಿಕ್‌ ಬಾಟಲ್‌ನ್ನು ಮರು ಬಳಕೆ ಮಾಡದೆ, ತ್ಯಾಜ್ಯವಾಗಿ ಪರಿವರ್ತಿಸುತ್ತೇವೆ. ಆದರೆ ನಾವು ಅಂತಹ ನಿರುಪಯುಕ್ತ ಪ್ಲಾಸ್ಟಿಕ್‌ನ್ನು ಮರು ಬಳಕೆ ಮಾಡುತ್ತೇವೆ.-ಚಂದನ್‌, ಕಾರ್ಯಕ್ರಮ ನಿರ್ದೇಶಕ, ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್