Asianet Suvarna News Asianet Suvarna News

Uttarakannada: ಗೋವಾದಿಂದ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಮದ್ಯ ಸಾಗಾಟ, ಆರೋಪಿಗಳು ಅಂದರ್

ಗೋವಾ ರಾಜ್ಯದಿಂದ ಅಕ್ರಮ‌ ಸಾರಾಯಿ ಕರ್ನಾಟಕಕ್ಕೆ ಭಾರೀ ಪ್ರಮಾಣದಲ್ಲಿ ಪೂರೈಕೆಯಾಗುತ್ತಿವೆ. ಇದೇ ರೀತಿ ಕದ್ದು ಮುಚ್ಚಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 1.17ಕೋಟಿ ರೂ. ಮಿಕ್ಕಿ ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದಾರೆ.

Illegal  Liquor transported from goa  seized in karwar gow
Author
First Published Dec 29, 2022, 10:29 PM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಡಿ.29): ಹೊಸ ವರ್ಷಾಚರಣೆಗೆ ಅಲ್ಲಲ್ಲಿ ಭರ್ಜರಿ ತಯಾರಿಗಳು ನಡೆಯುತ್ತಿವೆ.‌ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಂತೂ ಎಣ್ಣೆ ಪಾರ್ಟಿಗಳು ಜೋರಾಗೇ ನಡೆಯಲಿವೆ. ಈ ಹಿನ್ನೆಲೆ ಪಕ್ಕದ ಗೋವಾ ರಾಜ್ಯದಿಂದ ಅಕ್ರಮ‌ ಸಾರಾಯಿ ಕರ್ನಾಟಕಕ್ಕೆ ಭಾರೀ ಪ್ರಮಾಣದಲ್ಲಿ ಪೂರೈಕೆಯಾಗುತ್ತಿವೆ. ಇದೇ ರೀತಿ ಕದ್ದು ಮುಚ್ಚಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 1.17ಕೋಟಿ ರೂ. ಮಿಕ್ಕಿ ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಆರೋಪಿಗಳ‌ನ್ನು ಜೈಲಿಗಟ್ಟಿದ್ದಾರೆ.  

ಒಂದೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮತ್ತೊಂದೆಡೆ ಹತ್ತಿರ ಬರುತ್ತಿರುವ ಚುನಾವಣೆಯ ಕಾರಣದಿಂದ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಗೋವಾ ಮದ್ಯ ಆಮದು ಮಾಡಲಾಗುತ್ತಿದೆ. ಇದರಿಂದಾಗಿಯೇ ಹಲವು ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಂತೂ ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿಗಳು ಜೋರಾಗೇ ನಡೆಯಲಿವೆ. ಇದೇ ರೀತಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ಅಕ್ರಮ ಸಾಗಾಟವಾಗುತ್ತಿದ್ದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1.17 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಗೋವಾ ಮದ್ಯವನ್ನು ಕಾರವಾರದ ಅಬಕಾರಿ ಸಿಬ್ಬಂದಿಯು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಬೆಳಗಿನ ಜಾವ ಗೋವಾ ಕಡೆಯಿಂದ ಬರುತ್ತಿದ್ದ ಈಚರ್ ಲಾರಿಯ ಮೇಲೆ ದಾಳಿ ನಡೆಸಿದ್ದು, ತಪಾಸಣೆ ನಡೆಸಿದ ವೇಳೆ ವಾಹನದಲ್ಲಿ ಪರವಾನಿಗೆ ಇರುವ 400 ಬಾಕ್ಸ್‌ಗಳಲ್ಲಿದ್ದ 4800 ಬಾಟಲ್ ವಿಸ್ಕಿ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ 9 ಬಾಕ್ಸ್‌ಗಳಲ್ಲಿದ್ದ 108 ಬ್ರಾಂಡಿ ಬಾಟಲ್ ಸೇರಿ ಒಟ್ಟು 3681 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ 1.17 ಕೋಟಿ ರೂ. ಗಳಾಗಿದ್ದು, ಇದನ್ನು ಹೊರತುಪಡಿಸಿ 19.5 ಲಕ್ಷ ರೂ. ಮೌಲ್ಯದ ವಾಹನವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.‌ ಪ್ರಕರಣದ ಆರೋಪಿ ವಾಹನ ಚಾಲಕ ಬೆಂಗಳೂರು ಮೂಲದ ನರಸಿಂಹರಾಜು ಎಲ್. ಡಿ.ಯನ್ನು ಬಂಧಿಸಲಾಗಿದೆ.  
 
ಇನ್ನೊಂದು ಪ್ರಕರಣದಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳ‌ನ್ನು ಕೂಡಾ ಬಂಧಿಸಿ, ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.‌ ಕುಮಟಾ ತಾಲೂಕಿನ ಕೃಷ್ಣಾ ಕೆ. ನಾಯ್ಕ, ಗಣೇಶ ಎಲ್. ಮೇಸ್ತ್ರಿ ಹಾಗೂ ಕೀರ್ತಿ ಜಿ. ನಾಯ್ಕ ಬಂಧಿತ ಆರೋಪಿಗಳಾಗಿದ್ದು, ಅವರು ತಮ್ಮ ಮಹಿಂದ್ರಾ ಕಾರಿನಲ್ಲಿ ಸಾಗಿಸಲೆತ್ನಿಸುತ್ತಿದ್ದ 8630 ರೂ. ಮೌಲ್ಯದ 30.25 ಲೀಟರ್‌ನಷ್ಟು ವಿವಿಧ ಬ್ರಾಂಡ್‌ನ ವಿಸ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಮದ್ಯ ಸಾಗಾಟಕ್ಕೆ ಬಳಸಿದ ಸುಮಾರು 12 ಲಕ್ಷ ರೂ.‌ಮೌಲ್ಯದ ಕಾರನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.

ಹೊಸ ವರ್ಷಚಾರಣೆ ಪ್ರಯುಕ್ತ ನಮ್ಮ ಮೆಟ್ರೋ ಅವಧಿ ವಿಸ್ತರಣೆ, ಮುಂಜಾವು 2 ಗಂಟೆಯವರೆಗೆ ಸೇವೆ ಲಭ್ಯ

ಹೊಸ ವರ್ಷಾಚರಣೆ ಸಂಭ್ರಮ ಹಾಗೂ ಚುನಾವಣೆಯ ಹಿನ್ನೆಲೆ‌ ಮೊದಲೇ ಸ್ಟಾಕ್ ಇಡುವ ಉದ್ದೇಶದಿಂದ ತುಂಬಾ ಕಡಿಮೆ‌ ಬೆಲೆಗೆ ದೊರೆಯುವ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ‌‌. ಇದರಿಂದ ಸಮಾಜದ ಶಾಂತಿ ಕದಡುವುದಲ್ಲದೇ, ಅಪಘಾತಗಳಿಗೂ ಕಾರಣವಾಗುತ್ತದೆ. ಆದರೆ, ಅಧಿಕಾರಿಗಳು ಎಚ್ಚೆತ್ತುಕೊಂಡು ಭಾರೀ ಪ್ರಮಾಣದ ಮದ್ಯ ಸಾಗಾಟವನ್ನು ವಶಪಡಿಸಿಕೊಂಡಿರುವುದು ಶ್ಲಾಘನೀಯ ಎನ್ನುತ್ತಾರೆ ಜನರು.

ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ

ಒಟ್ಟಿನಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಸಾಗಾಟಗಳಾಗುತ್ತಿವೆ. ಇದಕ್ಕಾಗಿಯೇ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿರುವ ಅಧಿಕಾರಿಗಳು ಮಾಹಿತಿ ಪಡೆದು ಹಲವೆಡೆ ದಾಳಿ ನಡೆಸಿ ಅಕ್ರಮ ಮದ್ಯಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟುತ್ತಿದ್ದಾರೆ. ಆದರೆ, ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅಕ್ರಮ ಮದ್ಯ ಸಾಗಾಟದಂತಹ ಪ್ರಕರಣಗಳಿಗೆ ಪೂರ್ಣ ವಿರಾಮ ಹಾಕಬೇಕಾಗಿದೆ.

Follow Us:
Download App:
  • android
  • ios