ಅಕ್ರಮ ಮದ್ಯ ಮಾರಾಟ ಮಟ್ಟ ಹಾಕಬೇಕು : ಗುರುಪರದೇಶಿಕೇಂದ್ರ ಸ್ವಾಮೀಜಿ
ಕುಡಿತದ ಚಟಕ್ಕೆ ಬಿದ್ದು ಸಂಸಾರದಿಂದ, ಸಂಬಂಧಿಕರಿಂದ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗದೆ ಮದ್ಯ ಮುಕ್ತರಾಗಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಗೌರವ ಗಳಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು
ತಿಪಟೂರು : ಕುಡಿತದ ಚಟಕ್ಕೆ ಬಿದ್ದು ಸಂಸಾರದಿಂದ, ಸಂಬಂಧಿಕರಿಂದ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗದೆ ಮದ್ಯ ಮುಕ್ತರಾಗಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಗೌರವ ಗಳಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಹಳೇಪಾಳ್ಯದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೧೭೨೯ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚ ನೀಡಿದರು.
ಇತ್ತೀಚೆಗೆ ಪ್ರತಿ ಹಳ್ಳಿಗಳಲ್ಲು ಅಕ್ರಮ ಮದ್ಯ ಮಾರಾಟ ವಿಪರೀತವಾಗಿ ನಡೆಯುತ್ತಿರುವುದರಿಂದ ಹೆಚ್ಚಿನ ಜನರು ಕುಡಿತದ ದಾಸರಾಗುತ್ತಿದ್ದಾರೆ. ಹಾಗಾಗಿ ಸರ್ಕಾರವೂ ಸಹ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಮಟ್ಟ ಹಾಕುವ ಮೂಲಕ ಯುವಕರು, ಕೂಲಿಕಾರರು ನೆಮ್ಮದಿಯ ಜೀವನ ನಡೆಸುವಂತೆ ಮಾಡಬೇಕು ಎಂದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಒಳಿತಿಗಾಗಿ ಹೆಗ್ಡೆಯವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಹಠಕ್ಕೆ ಸಂಸಾರ ಕಟ್ಟಿಕೊಳ್ಳದೆ ಚಟಕ್ಕೆ ಸಂಸಾರ ಕಟ್ಟಿಕೊಳ್ಳುತ್ತಿದ್ದು ಚಿಕ್ಕ ವಯಸ್ಸಿನಲ್ಲಿಯೇ ಕುಡಿತದ ದಾಸರಾಗಿ ಅವರು ಹಾಳಾಗುವುದಲ್ಲದೆ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದು ಇಂತಹ ದುಶ್ಚಟಗಳನ್ನು ಬಿಡಿಸಲೆಂದೇ ಶಿಬಿರಗಳನ್ನು ನಡೆಸುತ್ತಿದ್ದು ಪ್ರಯೋಜನ ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಶಾಸಕ ಕೆ. ಷಡಕ್ಷರಿ ಮಾತನಾಡಿ, ಮದ್ಯವರ್ಜನ ಶಿಬಿರದಿಂದ ಸಾವಿರಾರು ಕುಟುಂಬಗಳು ಕತ್ತಲೆಯಿಂದ ಬೆಳಕಿನಡೆಗೆ ಬಂದು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಮುಂದೆ ಕುಡಿತ ಬಿಟ್ಟು ಬೇರೆಯವರ ಮನವೊಲಿಸಿ ಅವರ ಕುಡಿತವನ್ನು ಬಿಡಿಸಿದರೆ ಶಿಬಿರಕ್ಕೆ ಸಾರ್ಥಕತೆ ಬರಲಿದೆ. ಗಾಂಧೀಜಿಯವರು ತಿಪಟೂರಿನಲ್ಲಿ ತಂಗಿದ್ದ ಜಾಗವನ್ನು ಗ್ರಂಥಾಲಯವನ್ನಾಗಿ ನಿರ್ಮಾಣ ಮಾಡಲಾಗಿದ್ದು ಅ.೨ರಂದು ಗಾಂಧಿ ಜಯಂತಿ ಅಂಗವಾಗಿ ಉದ್ಘಾಟಿಸಲಾಗುತ್ತಿದೆ ಎಂದರು.
ಪ್ರಾದೇಶಿಕ ನಿರ್ದೇಶಕ ಎಂ. ಶೀನಪ್ಪ, ಮಾಜಿ ಶಾಸಕ ಬಿ.ಸಿ. ನಾಗೇಶ್, ಯೋಜನೆಯ ಜಿಲ್ಲಾ ನಿರ್ದೇಶಕ ದಯಾಶೀಲಾ, ಬೆಂಗಳೂರು ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯನಾಯ್ಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಮಧುಸೂದನ್, ನಗರಸಭೆ ಮಾಜಿ ಸದಸ್ಯ ಯದುನಂದನ್, ತರಕಾರಿ ಗಂಗಾಧರ್, ತಾಲೂಕು ಯೋಜನಾಧಿಕಾರಿಗಳಾದ ಉದಯ್, ಸಂತೋಷ್, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕೆ. ಸಂತೋಷ್, ಗೌರವಾಧ್ಯಕ್ಷ ಪುಟ್ಟರಾಜು, ಹೊನ್ನವಳ್ಳಿ ಕಾಶಿನಾಥ್, ಮೇಲ್ವಿಚಾರಕ ಕೆ.ಸಿ. ಸಂತೋಷ್, ಸಮನ್ವಯಾಧಿಕಾರಿ ಪದ್ಮಾವತಿ, ಡಾ. ಜನಾರ್ಧನ್ ಸೇರಿದಂತೆ ಸೇವಾಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು ಭಾಗವಹಿಸಿದ್ದರು.