ಕಂದಾಯ ಇಲಾಖೆಯ ಸಮನ್ವಯದೊಂದಿಗೆ ಸರ್ವೇ ನಡೆಸಿ ಪ್ರತಿ ಶನಿವಾರ ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ ಹೇಳಿದ್ದಾರೆ.

ಬೆಂಗಳೂರು (ಮೇ.10): ಕಂದಾಯ ಇಲಾಖೆಯ ಸಮನ್ವಯದೊಂದಿಗೆ ಸರ್ವೇ ನಡೆಸಿ ಪ್ರತಿ ಶನಿವಾರ ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ (Tushar Girinath) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಬೆಂಗಳೂರಿನ ಅಕ್ರಮ ಕಟ್ಟಡಗಳ ಬಗ್ಗೆ ಕಂದಾಯ ಇಲಾಖೆ ಜಿಲ್ಲಾಧಿಕಾರಿ ಸಮನ್ವಯ ಸಾಧಿಸಿ, ಸರ್ವೇಯರ್‌ ಮೂಲಕ ಮಾರ್ಕಿಂಗ್‌ ಮಾಡಿಸಿ ಪ್ರತಿ ಶನಿವಾರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಕಟ್ಟಡಗಳು ಬಹಳ ವರ್ಷಗಳ ಹಿಂದೆ ನಿರ್ಮಾಣವಾಗಿದೆ. 

ಮತ್ತಷ್ಟು ಕಟ್ಟಡಗಳು ರಾಜಕಾಲುವೆಗೆ ಹೊಂದಿಕೊಂಡಿದ್ದು, ಅವುಗಳ ತೆರವಿಗೂ ಮೊದಲು ಮಾಲಿಕರಿಗೆ ನೋಟಿಸ್‌ ನೀಡಲಾಗುವುದು. ಅಕ್ರಮವಾಗಿ ನಿರ್ಮಿಸಲಾದ ದೊಡ್ಡ ಮತ್ತು ಬೃಹತ್‌ ಕಟ್ಟಡಗಳನ್ನು ತೆರವು ಮಾಡುವ ಬಗ್ಗೆ ಮುಖ್ಯ ಎಂಜಿನಿಯರ್‌ಗಳ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳನ್ನು ತೆರವು ಮಾಡುವ ಬಗ್ಗೆ ಹಿಂದೆ ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ ಪುನಃ ಪರಿಶೀಲನೆ ನಡೆಸಿ ಮಳೆಗಾಲದಲ್ಲಿ ತೊಂದರೆ ಆಗದಂತೆ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

BBMP ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ

ಅಪಾಯಕಾರಿ ಮರ ಪಟ್ಟಿ ವೆಬ್‌ಸೈಟ್‌ನಲ್ಲಿ ಪ್ರಕಟ: ಅಪಾಯಕಾರಿ ಮರಗಳನ್ನು ಗುರುತಿಸಲು ಅರಣ್ಯ ವಿಭಾಗಕ್ಕೆ ಸೂಚಿಸಲಾಗಿದೆ. 100 ಅಪಾಯಕಾರಿ ಮರಗಳನ್ನು ಗುರುತಿಸಿದ್ದಾರೆ. ಆದರೆ, ಇತ್ತೀಚೆಗೆ ಬೊಮ್ಮನಹಳ್ಳಿ ವಲಯದಲ್ಲಿಯೇ 25ಕ್ಕೂ ಅಧಿಕ ಮರಗಳು ಬಿದ್ದಿದ್ದರಿಂದ ಮರು ಸಮೀಕ್ಷೆ ಮಾಡುವಂತೆ ತಿಳಿಸಲಾಗಿದೆ. ಸಮೀಕ್ಷೆ ಪಟ್ಟಿಮತ್ತು ವಿವರವನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಸೂಚಿಸಲಾಗಿದೆ. ಇದನ್ನು ಜನರು ವೀಕ್ಷಣೆ ಮಾಡಬಹುದು ಎಂದರು. ಮತ್ತೊಂದೆಡೆ ಪಾಲಿಕೆ ಆಸ್ತಿಗಳು ಹಾಗೂ ಗುತ್ತಿಗೆ ಆಧಾರದ ಮೇಲೆ ನೀಡಲಾದ ಆಸ್ತಿ ವಿವರವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳನ್ನು ಅಭಿವೃದ್ಧಿ ಮಾಡಲು 4 ವರ್ಷಗಳ ಹಿಂದೆಯೇ ಟೆಂಡರ್‌ ನೀಡಲಾಗಿದೆ. ಆದರೆ, ವಿವಿಧ ಕಾರಣಗಳಿಂದಾಗಿ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ. ಬಾಕಿ ಇರುವ ಎಲ್ಲ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು 2022ರ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ

ಸಿಟಿ ರೌಂಡ್ಸ್‌: ಬಿಬಿಎಂಪಿಯಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಯಲಹಂಕದ 1.8 ಕಿ.ಮೀ. ಉದ್ದದ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌, ಜಯಮಹಲ್‌ ಹಾಗೂ ಸ್ಯಾಂಕಿ ಬಂಡ್‌ ರಸ್ತೆಯ ಅಗಲೀಕರಣ, ಸಂಪಿಗೆ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಮತ್ತು ಕೋರಮಂಗಲ ರಾಜಕಾಲುವೆ (ಕೆ-100) ಜಲಮಾರ್ಗ ಯೋಜನೆಯ ಕಾಮಗಾರಿಯನ್ನು ಭಾನುವಾರ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಬಜೆಟ್‌ ಗಾತ್ರ 377 ಕೋಟಿ ಹಿಗ್ಗಿಸಿ ಸರ್ಕಾರದಿಂದ ಅನುಮೋದನೆ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲಹಂಕ ಪೊಲೀಸ್‌ ಸ್ಟೇಷನ್‌ ಜಂಕ್ಷನ್‌ನಿಂದ ಯಲಹಂಕ ನ್ಯೂಟೌನ್‌ನ ಜಲಮಂಡಳಿಯ ಜಂಕ್ಷನ್‌ ವರೆಗೆ 1.8 ಕಿ.ಮೀ. ಉದ್ದದ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರನ್ನು .175 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಎಂ.ಎಸ್‌.ಪಾಳ್ಯ ಜಂಕ್ಷನ್‌ನಲ್ಲಿ ನಗರೋತ್ಥಾನ ಯೋಜನೆ ಅನುದಾನದಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಗೆ ಟೆಂಡರ್‌ ಅಂತಿಮಗೊಂಡಿದ್ದು, ಸರ್ಕಾರದ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.