* 10,480 ಕೋಟಿ ಬಜೆಟ್ ಮಂಡಿಸಿದ್ದ ಬಿಬಿಎಂಪಿ* 10,858 ಕೋಟಿಗೆ ಹೆಚ್ಚಿಸಿ ಸರ್ಕಾರ ಆದೇಶ* ಬಿಬಿಎಂಪಿ ಬಜೆಟ್ ಗಾತ್ರ 377 ಕೋಟಿ ಹಿಗ್ಗಿಸಿ ಸರ್ಕಾರದಿಂದ ಅನುಮೋದನೆ
ಬೆಂಗಳೂರು(ಮೇ.08): ಬಿಬಿಎಂಪಿಯ 2022-23ನೇ ಸಾಲಿನ ಆಯವ್ಯಕ್ಕೆ ರಾಜ್ಯ ಸರ್ಕಾರ ಶನಿವಾರ ಅನುಮೋದನೆ ನೀಡಿದ್ದು, ಬಜೆಟ್ ಗಾತ್ರವನ್ನು .10,480 ಕೋಟಿಯಿನಿಂದ .10,858 ಕೋಟಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
ಕಳೆದ ಮಾ.31ರ ತಡ ರಾತ್ರಿ ಮಂಡನೆ ಮಾಡಿದ ಬಿಬಿಎಂಪಿ ಬಜೆಟ್‌ಗೆ ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿ ಕೊಳವೆ ಅಳವಡಿಕೆ, ರಸ್ತೆ ಮಾರ್ಗದ ದುರಸ್ತಿ ಕಾಮಗಾರಿ, ರಾಜ್ಯ ಸರ್ಕಾರದ ಕಾಮಗಾರಿ ಪಾಲಿಕೆ ನೀಡಬೇಕಾದ ವಂತಿಕೆ, ಪತ್ರಕರ್ತರ ವೈದ್ಯಕೀಯ ಪರಿಹಾರ ಹಾಗೂ ಐಪಿಡಿ ಸಾಲಪ್ಪ ಸ್ಮರಣಾ ಕಾರ್ಯಕ್ರಮಕ್ಕೆ ಒಟ್ಟು .377.50 ಕೋಟಿ ಹೆಚ್ಚುವರಿ ಮೊತ್ತ ಸೇರಿಸಿ ಪರಿಷ್ಕೃರಿಸಿ ಅನುಮೋದನೆ ನೀಡಿದೆ. ಪರಿಷ್ಕೃತ ಮೊತ್ತವನ್ನು ಬಿಬಿಎಂಪಿ ತನ್ನ ಆದಾಯ ಮೂಲಗಳಿಂದ ಹೊಂದಾಣಿಕೆ ಮಾಡಿಕೊಳ್ಳುವಂತೆ ಇದೇ ವೇಳೆ ನಿರ್ದೇಶಿಸಲಾಗಿದೆ.
ಯಾವುದಕ್ಕೆ ಸೇರ್ಪಡೆ ಎಷ್ಟು?:
ಘನತ್ಯಾಜ್ಯ ನಿರ್ವಹಣೆ ಘಟಕಗಳು ಮತ್ತು ಯಂತ್ರೋಪಕರಣ ದುರಸ್ತಿ ಮತ್ತು ನಿರ್ವಹಣೆಗೆ ಬಜೆಟ್‌ನಲ್ಲಿ .15 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅದನ್ನು .90 ಕೋಟಿಗೆ ಹೆಚ್ಚಿಸಲಾಗಿದೆ. ಕುಡಿಯುವ ನೀರು ಪೂರೈಕೆಗೆ ಕೊಳವೆ ಮಾರ್ಗದಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ ನಿಗದಿ ಮಾಡಿದ್ದ .40 ಕೋಟಿಗಳನ್ನು .65 ಕೋಟಿಗೆ, ಭೂಭರ್ತಿ ಘಟಕ ನಿರ್ವಹಣೆಗೆ ನಿಗದಿ ಮಾಡಿದ್ದ .20 ಕೋಟಿಗಳನ್ನು .95 ಕೋಟಿಗೆ ಹಾಗೂ ಮೇಯರ್ ವಿವೇಚನೆಯಡಿ ಪತ್ರಕರ್ತರ ವೈದ್ಯಕೀಯ ಪರಿಹಾರಕ್ಕೆ ನಿಗದಿ ಮಾಡಿದ್ದ .50 ಲಕ್ಷವನ್ನು .2 ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಇನ್ನು ರಾಜ್ಯ ಸರ್ಕಾರ ಬಜೆಟ್ ಪರಿಷ್ಕರಣೆ ವೇಳೆ ರಾಜ್ಯ ಸರ್ಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗೆ ಪಾಲಿಕೆಯಿಂದ ನೀಡಬೇಕಾಗುವ ವಂತಿಗೆ .200 ಕೋಟಿ ಮತ್ತು ಐಪಿಡಿ ಸಾಲಪ್ಪ ಅವರ ಸಂಸ್ಮರಣಾ ಕಲ್ಯಾಣ ಕಾರ್ಯಕ್ರಮಕ್ಕೆ .1 ಕೋಟಿ ಮೀಸಲಿಡಲಾಗಿದೆ.
ಬಿಬಿಎಂಪಿಯಲ್ಲಿ ಪುನಃ ಬಯೋಮೆಟ್ರಿಕ್ ಜಾರಿ
ಅಧಿಕಾರಿ, ಸಿಬ್ಬಂದಿ ಹಾಜರಾತಿ ದಾಖಲಿಸಲು ಜಾರಿ ತಂದಿದ್ದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಮತ್ತೆ ಆರಂಭಿಸುವುದಾಗಿ ಪಾಲಿಕೆ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 9.30ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯ ಅನೆಕ್ಸ್ 2 ಮತ್ತು 3ರಲ್ಲಿ ಇರುವ ಪ್ರತಿ ಕಚೇರಿಗೂ ಭೇಟಿ ನೀಡಿ ತಪಾಸಣೆ ನಡೆಸಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟಸಿಬ್ಬಂದಿಗೆ ಸೂಚನೆ ನೀಡಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಇನ್ನು ಮುಂದೆ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮೂರು ಕಟ್ಟಡಗಳು ಮತ್ತು ಪೌರ ಸಭಾಂಗಣ ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ಒಂದೊಂದು ಮಹಡಿಯ ಸ್ವಚ್ಛತಾ ಜವಾಬ್ದಾರಿಯನ್ನು ಒಬ್ಬೊಬ್ಬ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗುವುದು. ವಾರದಲ್ಲಿ ಒಂದು ದಿನ ಬಂದು ತಮ್ಮ ಮಹಡಿ ಹಾಗೂ ಶೌಚಗೃಹಗಳ ಸ್ವಚ್ಛತೆಯ ಬಗ್ಗೆ ಪರಿಶೀಲನೆ ಮಾಡುವಂತೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಭೇಟಿಯ ವೇಳೆ ಕೆಲವು ಕಚೇರಿಗಳು ಇನ್ನೂ ಬಾಗಿಲು ತೆರೆದಿರಲಿಲ್ಲ. ಸ್ವಚ್ಛತೆ ಇಲ್ಲದ ಸ್ಥಳ ಹಾಗೂ ಕೊಠಡಿಗಳ ಫೋಟೋಗಳನ್ನು ತೆಗೆದುಕೊಂಡರು. ಕಚೇರಿ ಹಾಜರಿದ್ದ ಅಧಿಕಾರಿ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.
