2013-14 ರಲ್ಲಿ ಮಂಜೂರಾಗಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ಕೈಗೆತ್ತಿಕೊಳ್ಳುವಂತೆ ಪದೇ ಪದೇ ವಿನಂತಿಸಿದರೂ ನಿರ್ಲಕ್ಷಿಸಲಾಗುತ್ತಿದೆ. ಇದೇ ಯೋಜನೆ ಜೊತೆಗೇ ಮಂಜೂರಾಗಿದ್ದ ಜಮ್ಮು ಕಾಶ್ಮೀರ, ಸಿಲ್ಚಾರ್‌ ವಿಭಾಗೀಯ ಯೋಜನೆಗಳು ಕೈಗೊಂಡಿದ್ದು ನೋಡಿದರೆ ಕೇಂದ್ರ ಸರ್ಕಾರ ಕಲಬುರಗಿ ಬೇಕೆಂದೇ ಕಡೆಗಣಿಸುತ್ತಿರೋದು ಸ್ಪಷ್ಟವಾದಂತಾಗಿದೆ.

ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.02): ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ 8 ನೇ ಬಜೆಟ್‌ನಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಂದಿನಂತೆ ಖಾಲಿ ಚೊಂಬು ಕೊಡುಗೆ ನೀಡಿದ್ದಾರೆ.
ಕರ್ನಾಟಕದವರೇ ಆದ ರೈಲ್ವೆ ಸಚಿವರು ಮತ್ತು ಹಣಕಾಸು ಸಚಿವರು ಹಿಂದುಳಿದ ಕಲ್ಯಾಣ ನಾಡಿನ 7 ಜಿಲ್ಲೆಗಳ ವ್ಯಾಪ್ತಿಯ ರೇಲ್ವೆ ಮೂಲ ಸವಲತ್ತು, ಉದ್ದಿಮೆ ಲೋಕ ಕಟ್ಟುವಂತಹ ಅವಕಾಶಗಳಿರುವ ದೀರ್ಘಕಾಲದ ಬೇಡಿಕೆಗಳನ್ನು ಕಡೆಗಣಿಸುವ ಮೂಲಕ ಅಲಕ್ಷಿಸಿದ್ದಾರೆ.

2013-14 ರಲ್ಲಿ ಮಂಜೂರಾಗಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ಕೈಗೆತ್ತಿಕೊಳ್ಳುವಂತೆ ಪದೇ ಪದೇ ವಿನಂತಿಸಿದರೂ ನಿರ್ಲಕ್ಷಿಸಲಾಗುತ್ತಿದೆ. ಇದೇ ಯೋಜನೆ ಜೊತೆಗೇ ಮಂಜೂರಾಗಿದ್ದ ಜಮ್ಮು ಕಾಶ್ಮೀರ, ಸಿಲ್ಚಾರ್‌ 2024ರ ಲೋಕಸಭೆ ಚುನಾವಣೆ ಕಾಲದಲ್ಲಿ ಘೋಷಣೆಯಾಗಿ ಅಡಿಗಲ್ಲಿಡಲ್ಪಟ್ಟಂತಹ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಯೋಜನೆಯೂ ನೆಲ ಬಿಟ್ಟು ಮೇಲೆದ್ದಿಲ್ಲ. ಚುನಾವಣೆಯಾಗಿ ವರ್ಷ ಕಳೆದರೂ ಯಾವುದೇ ಸ್ಪಂದನೆ ಇದಕ್ಕಿಲ್ಲದಂತಾಗಿದೆ.

Budget 2025: ಕೇಂದ್ರದ ಇಂತಹ 10 ಬಜೆಟ್ ನೋಡಿದ್ದೇವೆ, ಪ್ರಿಯಾಂಕ್‌ ಖರ್ಗೆ

ಕಲ್ಯಾಣ ಕರ್ನಾಟಕದ ಕೈಗಾರಿಕೆ, ಉದ್ದಿಮೆ ಲೋಕದ ಬೆಳವಣಿಗೆಗೆ ನಿರ್ಣಾಯಕ ವಾಗಿದ್ದಂತಹ ಎನ್ನೈಸಿಡಿಪಿ ಯೋಜನೆಯ ಬೇಡಿಕೆ ಬಗ್ಗೆ ವಿತ್ತ ಸಚಿವರು ಕ್ಯಾರೆ ಎಂದಿಲ್ಲ. ಈ ಹಿಂದುಳಿದ ಪ್ರದೇಶವನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ತರುವುದರಿಂದ ಈ ಭಾಗದಲ್ಲಿ ಅಭಿವೃದ್ಧಿ ಹಸಿರು ಚಿಗುರಿಸಲು ಇದ್ದಂತಹ ವಿಫುಲ ಅವಕಾಶಗಳು ಕೇಂದ್ರದ ಅವಗಣನೆಯಿಂದಾಗಿ ಕಮರಿ ಹೋದಂತಾಗಿದವೆ.

ಕಲಬುರಗಿ ವಿಮಾನ ನಿಲ್ದಾಣವನ್ನ ಪುನಃ ಉಡಾನ್‌ ಯೋಜನೆಯಡಿ ಸೇರ್ಪಡೆ ಮಾಡಬೇಕೆಂಬ ಇಲ್ಲಿನವರ ಆಗ್ರಹಕ್ಕೆ ನಿರ್ಮಲಾ ಜಾಣ ಕಿವುಡುತನ ತೋರಿದ್ದಾರೆ. ಉಡಾನ್ ಯೋಜನೆಯನ್ನು 120 ಹೊಸ ಮಾರ್ಗಗಳಿಗೆ ವಿಸ್ತರಿಸುವ ಮಾತನ್ನು ಆಡದ್ದಾರಾದರೂ ಕಲಬುರಗಿ ವಿಮಾನ ನಿಲ್ದಾಣ ಮತ್ತು ಉಡಾನ್ ಯೋಜನೆಯಡಿ ತರುವ ಬಗ್ಗೆ ಸ್ಪಷ್ಟ ನಿಲುವಿಲ್ಲ.

ಈಗಾಗಲೇ ಕಲಬರಗಿ ವಿಮಾನ ಸೇವೆಗಳಿಂದ ವಂಚಿತವಾಗಿದ್ದು ಬೆಂಗಳೂರು ವಿಮಾನ ಸೇವೆಯೂ ಅನಿಶ್ಚಿತತೆ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಲಭ್ಯವಾಗಿದ್ದ ವೈಮಾನಕ ಸೇವೆಯೂ ಕೈತಪ್ಪಿರೋದು ಈ ಭಾಗದ ಪ್ರಗತಿಯನ್ನೇ ಪ್ರಶ್ನಾರ್ಥಕವಾಗಿಸಿದೆ.

ಮಂಜೂರಾದರೂ ಮೂಲೆಗುಂಪಾಗಿರುವ ಹಲವು ಯೋಜನೆಗಳಿಗೆ ಚಾಲನೆ ನೀಡುವ ಮಾತುಗಳಾದರೂ ಕೇಳಿಬಂದಿದ್ದರೆ ಪ್ರಾದೇಶಿಕ ಅಸಮತೋಲನ ಪರಿಹರಿಸಬಹುದಿತ್ತು. ವಿಶೇಷವಾಗಿ ಆರ್ಟಿಕಲ್ 371(ಜೆ) ನ ನಿಬಂಧನೆಗಳ ಅಡಿಯಲ್ಲಿ ಈ ಕೆಲಸ ಮಾಡಲು ಅವಕಾಶಗಳಿದ್ದರೂ ಸ್ಪಂದನೆ ಇಲ್ಲದಂತಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ರೂ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮರೀಚಿಕೆ...!

ಕಲ್ಯಾಣ ಭಾಗದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಇಲ್ಲಿನ ಕೆಕೆಆರ್‌ಡಿಬಿಗೆ ಕೇಂದ್ರ ಸರ್ಕಾರ 2025- 26 ರಿಂದ 2029- 30ರ ವರೆಗಿನ 5 ವರ್ಷ ಅವಧಿಗೆ ವಾರ್ಷಿಕ 5 ಸಾವಿರ ಕೋಟಿ ರುಪಾಯಿ ಅಭಿವೃದ್ಧಿ ಅನುದಾನ ನೀಡಲಿ ಎಂಬ ಆಗ್ರಹಕ್ಕೂ ಸ್ಪಂದನೆ ಸಿಕ್ಕಿಲ್ಲ.

ಈ ಬಗ್ಗೆ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಧರ್ಮಸಿಂಗ್‌ ದೇಶದ ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದರೂ ಕೇಂದ್ರದ ಸ್ಪಂದನೆ ಸಿಕ್ಕಿಲ್ಲವೆಂದು ಜನ ಆಡಿಕೊಳ್ಳುತ್ತಿದ್ದಾರೆ.
ಇನ್ನು ಕಲ್ಯಾಣ ನಾಡಿನ ರೇಲ್ವೆ ಯೋಜನೆಗಳಿಗೂ ವಿತ್ತ ಸಚಿವರು ಕೃಪೆ ತೋರಿಲ್ಲವೆಂಬ ಕೊರಗು ಕಲ್ಯಾಣದ ಜನರನ್ನು ಕಾಡುತ್ತಿದೆ. ಎಂದಿನಂತೆ 5 ವಲಯಗಳಲ್ಲಿ ಹಂಚಿ ಹೋಗಿರುವ ಕಲ್ಯಾಣದ 7 ಜಿಲ್ಲೆಗಳ ರೈಲು ಸವಲತ್ತುಗಳು ಇನ್ನೂ ಕ್ಷೀಣವಾಗಲಿವೆ ಎಂದು ಕಳವಳದಲ್ಲಿದ್ದಾರೆ.