ನಮ್ಮ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಮೀರಿ 5 ನಿಮಿಷ ಕಳೆದ ಪ್ರಯಾಣಿಕನಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಆತನ ಮೆಟ್ರೋ ಕಾರ್ಡ್‌ ಮೂಲಕ ₹50 ದಂಡ ವಸೂಲಿ ಮಾಡಿರುವ ಘಟನೆ ನಡೆದಿದ್ದು, ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು (ಮೇ.13): ನಮ್ಮ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಮೀರಿ 5 ನಿಮಿಷ ಕಳೆದ ಪ್ರಯಾಣಿಕನಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಆತನ ಮೆಟ್ರೋ ಕಾರ್ಡ್‌ ಮೂಲಕ ₹50 ದಂಡ ವಸೂಲಿ ಮಾಡಿರುವ ಘಟನೆ ನಡೆದಿದ್ದು, ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಅರುಣ್ ಜುಗಲಿ ಎಂಬ ಪ್ರಯಾಣಿಕರು 20 ನಿಮಿಷಕ್ಕೂ ಅಧಿಕ ಕಾಲ ಮೆಟ್ರೋ ಸ್ಟೇಷನ್​ನಲ್ಲಿ ತಮ್ಮ ಮೊಬೈಲನ್ನು ಚಾರ್ಜಿಂಗ್‌ಗೆ ಹಾಕಿಕೊಂಡಿದ್ದರು. ಸ್ಟೇಷನ್​ನಿಂದ ಹೊರ ಬಂದಾಗ ಮೆಟ್ರೋ ಕಾರ್ಡ್​ನಿಂದ ₹50 ಹೆಚ್ಚುವರಿಯಾಗಿ ಕಡಿತವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಸ್ಟೇಷನ್‌ನಲ್ಲಿ 20 ನಿಮಿಷಕ್ಕೂ ಅಧಿಕ ಕಾಲ ಕಳೆದಿದ್ದಕ್ಕಾಗಿ ದಂಡ ಹಾಕಲಾಗಿದೆ ಎಂದು ಹೇಳಿದ್ದಾರೆ.

‘ಮಳೆ ಇತ್ತು, ಅದಕ್ಕೆ ಸ್ಟೇಷನ್‌ನಲ್ಲಿ ಇದ್ದೆ’: ಹೊರಗಡೆ ಮಳೆಯಿತ್ತು, ಮೊಬೈಲ್‌ ಚಾರ್ಜ್‌ ಇಲ್ಲದೆ ಸ್ವಿಚ್‌ ಆಫ್‌ ಆಗಿತ್ತು. ನಿರ್ಗಮನ ಭಾಗದಲ್ಲಿ ಯಾವುದೇ ವಿದ್ಯುತ್ ಪ್ಲಗ್‌ಗಳು ಆನ್ ಆಗಿರಲಿಲ್ಲ. ಹೀಗಾಗಿ ಪುನಃ ಕಾನ್‌ಕೋರ್ಸ್‌ಗೆ ತೆರಳಿ ಮಳೆ ನಿಲ್ಲುವವರೆಗೆ ಫೋನ್ ಚಾರ್ಜ್ ಮಾಡಿಕೊಂಡೆ. ಪುನಃ ಬಂದಾಗ ಕಾರ್ಡ್‌ನಿಂದ ಹೆಚ್ಚುವರಿ ಹಣ ಕಟ್‌ ಆಗಿದೆ ಎಂದು ಅರುಣ್‌ ಹೇಳಿದರು. 

15 ಸಾವಿರ ಸಸಿ ನೆಡಲಿದೆ ಮೆಟ್ರೋ: 7 ಕೋಟಿ ವೆಚ್ಚದಲ್ಲಿ ಮರ ಬೆಳೆಸಲು ನಿಗಮ ಯೋಜನೆ

‘ಅವಧಿ ಮೀರಿ ನಿಲ್ದಾಣದಲ್ಲಿ ಪ್ರಯಾಣಿಕರು ಇರಬಾರದು’: ಪ್ರಯಾಣಿಕರು ಅವಧಿ ಮೀರಿ ನಿಲ್ದಾಣದಲ್ಲಿ ಇರಬಾರದು ಎಂಬ ನಿಯಮ ಮೊದಲಿನಿಂದಲೂ ಇದೆ. ಎಲ್ಲರೂ ಇಲ್ಲಿ ಹೆಚ್ಚು ಸಮಯ ಕಳೆದರೆ ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಹೀಗಾಗಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಕಳೆದರೆ ದಂಡ ವಿಧಿಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.