15 ಸಾವಿರ ಸಸಿ ನೆಡಲಿದೆ ಮೆಟ್ರೋ: 7 ಕೋಟಿ ವೆಚ್ಚದಲ್ಲಿ ಮರ ಬೆಳೆಸಲು ನಿಗಮ ಯೋಜನೆ
ನಮ್ಮ ಮೆಟ್ರೋದ 2ನೇ ಹಂತದ ಯೋಜನೆಗಾಗಿ ಕಡಿಯಲಾದ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 76.9 ಕೋಟಿ ವೆಚ್ಚದಲ್ಲಿ 15 ಸಾವಿರ ಸಸಿ ನೆಡಲಿದೆ.
ಬೆಂಗಳೂರು (ಮೇ.08): ನಮ್ಮ ಮೆಟ್ರೋದ 2ನೇ ಹಂತದ ಯೋಜನೆಗಾಗಿ ಕಡಿಯಲಾದ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 76.9 ಕೋಟಿ ವೆಚ್ಚದಲ್ಲಿ 15 ಸಾವಿರ ಸಸಿ ನೆಡಲಿದೆ. ಒಟ್ಟು ಮೂರು ವಿಭಾಗಗಳಲ್ಲಿ ತಲಾ 2.03 ಕೋಟಿ ಮೊತ್ತದಲ್ಲಿ 5 ಸಾವಿರದಂತೆ 15 ಸಾವಿರ ಸಸಿಗಳನ್ನು ಶೀಘ್ರ ನೆಡಲಾಗುವುದು. ಪ್ರಥಮ ಹಂತದಲ್ಲಿ ದಾಬಸ್ ಪೇಟೆ 4ನೇ ಹಂತದ ಕೈಗಾರಿಕಾ ಪ್ರದೇಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುತ್ತಮುತ್ತಲ ಸರ್ಕಾರಿ ಜಾಗಗಳಲ್ಲಿ 5 ಸಾವಿರ ಸಸಿ ನೆಡುತ್ತಿದೆ.
2ನೇ ಹಂತದಲ್ಲಿ ದೊಡ್ಡಬಳ್ಳಾಪುರ 3ನೇ ಹಂತದ ಕೆಐಎಡಿಬಿಯ 2, 12 ಮತ್ತು 13ನೇ ಉದ್ಯಾನ ಮತ್ತು ಬಫರ್ ವಲಯ ಹಾಗೂ ಸುತ್ತಮುತ್ತಲಿನ ಇತರೆ ಸರ್ಕಾರಿ ಜಾಗದಲ್ಲಿ ಸಸಿ ನೆಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ನಮ್ಮ ಮೆಟ್ರೊ ಯೋಜನೆಗಳಿಗಾಗಿ 2021 - 2023 ಅವಧಿಯಲ್ಲಿ 3,626 ಮರಗಳನ್ನು ಕತ್ತರಿಸಲಾಗಿದೆ. 2021ರಿಂದ 2022 ರವರೆಗೆ 856 ಮರಗಳನ್ನು ನಗರದ ವಿವಿಧ ಭಾಗ ಮತ್ತು ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಹಂತ -2 ಮತ್ತು ಹಂತ 2 'ಎ' ಯೋಜನೆಗಳಿಗಾಗಿ 2,461 ಮರಗಳನ್ನು ಕಡಿಯಲಾಗಿದೆ.
ಅದೇ ರೀತಿ, 2022ರಿಂದ ಜನವರಿ 2023 ರವರೆಗೆ, ಹಂತ 2 'ಎ' ಮತ್ತು 2 'ಬಿ' ಗಾಗಿ 107 ಮರ ಸ್ಥಳಾಂತರಿಸಲಾಗಿದೆ ಮತ್ತು 1,165 ಮರಗಳನ್ನು ಕಡಿಯಲಾಗಿದೆ. 1,193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕರೆದ ಟೆಂಡರ್‌ನಲ್ಲಿ ಕೆಲ ಪರಿಸರ ಕಾರ್ಯದ ಸಂಸ್ಥೆಗಳು ಪಾಲ್ಗೊಂಡಿದ್ದು, ಮೌಲ್ಯಮಾಪನ ಹಂತ ನಡೆಯುತ್ತಿದೆ. ಮಳೆಗಾಲದ ವೇಳೆಗೆ ಸಸಿ ನೆಡಲಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
16 ಇಂಟರ್‌ಚೇಂಜ್ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಿದ್ಧತೆ: ಬಿಎಂಆರ್‌ಸಿಎಲ್
ಮುಂಗಾರು ಮಳೆ, ರೆಂಬೆಗೆ ಕೊಡಲಿ: ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‌ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಟರ್ಮಿನಲ್‌ನಲ್ಲಿವರೆಗಿನ ನೇರಳ ಮಾರ್ಗದಲ್ಲಿ 370 ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗೆ 380 ಸೇರಿ ಒಟ್ಟೂ 750 ಮರಗಳ ಕೊಂಬೆಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ರೆಂಬೆಗಳು ಬಿದ್ದು ಮೆಟ್ರೋ ಮಾರ್ಗಕ್ಕೆ ಹಾನಿ ತಪ್ಪಿಸಲು, ಸಿಗ್ನಲಿಂಗ್ ಸಮಸ್ಯೆ ನಿವಾರಣೆ ಮುಂಜಾಗ್ರತೆ ಕ್ರಮವಾಗಿ ರೆಂಬೆ ಕಡಿಯಲು ಮುಂದಾಗಲಾಗಿದೆ.