Asianet Suvarna News Asianet Suvarna News

ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ : ಸಂಸದ ಪ್ರತಾಪ್ ವಿರುದ್ಧ ಕಿಡಿ.

ಮೈಸೂರಿನಲ್ಲಿ ನಿರ್ಮಿಸಿರುವ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ (ತಂಗುದಾಣ) ಒಡೆದು ಹಾಕೋದಾದ್ರೆ, ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ಹೇಳಿದರು.

If they break it so much let them break it Tanvir sait snr
Author
First Published Nov 15, 2022, 5:30 AM IST

 ಮೈಸೂರು (ನ.15):  ಮೈಸೂರಿನಲ್ಲಿ ನಿರ್ಮಿಸಿರುವ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ (ತಂಗುದಾಣ) ಒಡೆದು ಹಾಕೋದಾದ್ರೆ, ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ಗುಂಬಜ್‌ ಮಾದರಿಯ ಬಸ್‌ (Bus)  ನಿಲ್ದಾಣ ಧ್ವಂಸ ಮಾಡುವೆ ಎಂಬ ಸಂಸದ ಪ್ರತಾಪ್‌ ಸಿಂಹ (Prathap simha)  ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣುವುದು. ಗೋಪುರಗಳು ಮಸೀದಿ ಮಾದರಿಯಲ್ಲಿ ಇದೇ ಹೇಳುವಂತಹ ಪ್ರತಾಪ್‌ ಸಿಂಹ ಪ್ರಜ್ಞೆ ಯಾವ ರೀತಿ ಇದೇ ಎಂಬುದನ್ನ ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು? ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದ್ರೆ ನಾವ್‌ ಏನ್‌ ಮಾಡೊದು?, ಆ ಶೆಲ್ಟರ್‌ ಯಾರು ವಿನ್ಯಾಸ ಮಾಡಿದ್ರು ಎಂಬುದು ನನಗೆ ಗೊತ್ತಿಲ್ಲ. ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ ಎಂದರು.

ಶಾಲೆಗಳಲ್ಲಿ ಕೇಸರಿ ಬಣ್ಣ ಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿನಾಕಾರಣ ನಾವು ಸೃಷ್ಟಿಮಾಡುವುದಲ್ಲ. ಅದನ್ನ ರಕ್ಷಣೆ ಮಾಡಬೇಕೇ ಹೊರತು ಹಾಳು ಮಾಡಬಾರದು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.

ಟಿಪ್ಪು ಜಯಂತಿ ನಾವು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಆ ದಿನಾಂಕದಂದು ನಾವು ಮಾಡುತ್ತಾ ಬಂದಿದ್ದೇವೆ. ಟಿಪ್ಪು ಜಯಂತಿ ಒಂದು ದಿನ ಮಾಡುತ್ತೇವೆ. ಅವರು ಈ ರೀತಿ ಮಾಡುವುದರಿಂದ ವರ್ಷ ಪೂರ್ತಿ ಆಚರಣೆ ಮಾಡುತ್ತಾರೆ ಎಂದರು.

ಕೃತಿ ವಿರುದ್ಧ ಪಿಐಎಲ್‌:

ಟಿಪ್ಪು ನಿಜ ಕನಸುಗಳು ನಾಟಕ ಕೃತಿ ನನ್ನ ಕೈ ಸೇರಿದೆ. ವಕೀಲ ರಂಗನಾಥ್‌ ಅವರ ಮೂಲಕ ಮೊಕದ್ದಮೆ ದಾಖಲಿಸುತ್ತೇನೆ. ಪಿಎಎಲ್‌ ಹಾಕುತ್ತೇವೆ. ಎಲ್ಲಿ? ಯಾವಾಗ ? ಎಂಬುದನ್ನು ವಕೀಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಗುಂಬಜ್‌ ಮೇಲೆ ಕಳಸ...

ನಗರದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬಸ್‌ ತಂಗುದಾಣಗಳನ್ನು ನಿರ್ಮಿಸುವಾಗ ಗುಂಬಜ್‌ ರೀತಿ ಮಾಡಿರುವುದನ್ನು ತೆರವು ಮಾಡುತ್ತೇವೆ ಎಂದು ಸಂಸದ ಪ್ರತಾಪ್‌ ಸಿಂಹ ಬೆದರಿಕೆ ಹಾಕುತ್ತಿದ್ದಂತೆಯೇ ಗುತ್ತಿಗೆದಾರರು ಎಚ್ಚೆತ್ತುಕೊಂಡಿದ್ದಾರೆ. ರಾತ್ರೋರಾತ್ರಿ ಗುಂಬಜ್‌ ಮೇಲೆ ಕಳಸ ಮಾದರಿಯನ್ನು ಹಾಕಲಾಗುತ್ತಿದೆ.

ಕೇಸರಿ ಬಣ್ಣ ಬದಲು ಮೂಲಸೌಕರ‍್ಯ ಒದಗಿಸಿ:ಪ್ರಿಯಾಂಕ್‌

 ಬೆಂಗಳೂರು :  ‘ವಿವೇಕ’ ಯೋಜನೆಯಡಿ ನಿರ್ಮಾಣವಾಗುವ ಶಾಲಾ ಕೊಠಡಿಗಳಿಗೆ ‘ಅರುಣೋದಯ’ ಬಣ್ಣ ಬಳಿಯುವ ಪ್ರಸ್ತಾವನೆಗೆ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದು, ‘ರಾಜ್ಯ ಸರ್ಕಾರ ಮಕ್ಕಳ ಭವಿಷ್ಯವನ್ನೇ ನಿರ್ನಾಮ ಮಾಡಲು ಹೊರಟಿದೆ. ಇದು ವಿವೇಕ ಯೋಜನೆಯಲ್ಲ ಅವಿವೇಕದ ಪರಮಾವಧಿ’ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ‘ನಮಗೆ ಬಣ್ಣದ ಸಮಸ್ಯೆಯಲ್ಲ, ವಿದ್ಯಾರ್ಥಿಗಳ ಭವಿಷ್ಯದ ಚಿಂತೆಯಾಗಿದೆ. ಶಿಕ್ಷಣದ ಗುಣಮಟ್ಟಕುಸಿದಿರುವ ಬಗ್ಗೆ ಕೇಂದ್ರವೇ ವರದಿ ನೀಡಿದೆ. ಹೀಗಿದ್ದರೂ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಬಣ್ಣದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

‘ಶಿಕ್ಷಣ ಹಾಗೂ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ನಿರ್ನಾಮ ಮಾಡುವುದೇ ಅವರ ಆದ್ಯತೆ ಎಂಬಂತಾಗಿದೆ. ನಮ್ಮಂತಹ ದೇಶಭಕ್ತರು ಯಾರೂ ಇಲ್ಲ ಎನ್ನುತ್ತೀರಲ್ಲ. ಕೇಸರಿ ಬಣ್ಣದ ಬದಲು ತ್ರಿವರ್ಣ ಬಣ್ಣ ಮಾಡಿ’ ಎಂದು ಒತ್ತಾಯಿಸಿದರು.

ನಾಚಿಕೆಯಾಗಬೇಕು:

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ಕೇಸರಿ ಬಣ್ಣ ಬಳಿಯುತ್ತೇವೆ ಎನ್ನುವ ಇವರಿಗೆ ನಾಚಿಕೆಯಾಗಬೇಕು. ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಶಿಕ್ಷಕರ ಸಮಸ್ಯೆಯಿದೆ, ಬಿಸಿಯೂಟ ಸಮಸ್ಯೆಯಿದೆ. ಇವುಗಳನ್ನು ಬಗೆಹರಿಸುವುದು ಬಿಟ್ಟು ಬಣ್ಣ ಬಳಿಯುತ್ತೇವೆ ಎನ್ನುತ್ತಾರೆ. ನಮಗೆ ಕೇಸರಿ ಕಂಡರೆ ಭಯವಿಲ್ಲ ಗೌರವವಿದೆ. ಆದರೆ ಮಕ್ಕಳ ಮನಸ್ಸಿನಲ್ಲಿ ಶಿಕ್ಷಣದ ಹೊರತಾಗಿ ಅನ್ಯ ವಿಚಾರವನ್ನು ತುಂಬುವುದಕ್ಕೆ ಹಾಗೂ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

Follow Us:
Download App:
  • android
  • ios