ಬೆಂಗಳೂರು(ಫೆ.21): ‘ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿ ಬಗ್ಗೆ ಈ ದೇಶದ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ. ನಾನು ಈ ದೇಶದಲ್ಲೇ ಉಳಿಯುತ್ತೇನೆ. ಆದರೆ, ದಾಖಲೆ ಪತ್ರಗಳನ್ನು ತೋರಿಸಲಾರೆ. ದಾಖಲೆ ಕೇಳಿದರೆ ನನ್ನ ಎದೆಯನ್ನು ತೋರಿಸಿ ಗುಂಡಿಕ್ಕುವಂತೆ ಹೇಳುತ್ತೇನೆ. ಯಾಕೆಂದರೆ, ನನ್ನ ಹೃದಯದಲ್ಲಿ ಭಾರತದ ಮೇಲಿನ ಪ್ರೀತಿ ಅಡಕವಾಗಿದೆ’ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮೈದಾನದಲ್ಲಿ ‘ಹಿಂದೂ ಮುಸ್ಲಿಂ ಸಿಖ್‌ ಇಸಾಯಿ ಫೆಡರೇಷನ್‌’ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

ಪಾಕ್‌ಗೆ ಹೋಗಿ ಭಾರತ್‌ ಮಾತಾ ಕೀ ಜೈ ಎಂದಿದ್ರಂತೆ ಓವೈಸಿ..!

ಏಪ್ರಿಲ್‌ ಮಾಸದಿಂದ ಎನ್‌ಪಿಆರ್‌ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಇದರಲ್ಲಿನ ಸತ್ಯಾಂಶವನ್ನು ಕೇಂದ್ರ ಸರ್ಕಾರ ಜನರಿಗೆ ತಿಳಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಧಿಕಾರದಲ್ಲಿ ಇರುವವರೆಗೂ ಇಂತಹ ಕಾನೂನು ಜಾರಿಯಾಗಲ್ಲ ಎಂದು ಪ್ರಮಾಣ ಮಾಡಲಿ. ನನಗೆ ಇಂಗ್ಲೀಷ್‌ ಪ್ರಧಾನಿ ಮೋದಿಯಷ್ಟುಬರುವುದಿಲ್ಲ. ಮೋದಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಓದಿದ್ದಾರೆ. ನಾನು ಹೆಚ್ಚು ಓದಿಲ್ಲ. ಅವರು ನನ್ನೊಂದಿಗೆ ಈ ಕಾಯ್ದೆಗಳ ಬಗ್ಗೆ ಚರ್ಚೆಗೆ ಬರಬಹುದು ಎಂದು ಸವಾಲು ಹಾಕಿದರು.