ನಾನೂ ಒಬ್ಬ ಅಸ್ಪೃಶ್ಯ, ಮುಸ್ಲಿಂ ಎನ್ನುವ ಪ್ರಜ್ಞೆ, ಪರಿಹಾರ ಸಲೀಸು: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ದೇಶದಲ್ಲಿ ಅಸ್ಪೃಶ್ಯರು, ಮುಸ್ಲಿಮರ ಸಂಕಟಗಳು ಗೊತ್ತಾಗಬೇಕೆಂದರೆ ನಾನೂ ಒಬ್ಬ ಅಸ್ಪೃಶ್ಯ, ಮುಸ್ಲಿಂ ಎನ್ನುವ ಪ್ರಜ್ಞೆಯನ್ನು ನಮಗೆ ನಾವು ಹಾಕಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಡಿ.04): ದೇಶದಲ್ಲಿ ಅಸ್ಪೃಶ್ಯರು, ಮುಸ್ಲಿಮರ ಸಂಕಟಗಳು ಗೊತ್ತಾಗಬೇಕೆಂದರೆ ನಾನೂ ಒಬ್ಬ ಅಸ್ಪೃಶ್ಯ, ಮುಸ್ಲಿಂ ಎನ್ನುವ ಪ್ರಜ್ಞೆಯನ್ನು ನಮಗೆ ನಾವು ಹಾಕಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ನಯನ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರ ಆತ್ಮವೃತ್ತಾಂತದ ಚೊಚ್ಚಲ ಕೃತಿ ''ಹಾದಿಗಲ್ಲು'' 12ನೇ ಮುದ್ರಣ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ದೇಶದಲ್ಲಿ ಅಸ್ಪೃಶ್ಯರ ಸಂಕಟಗಳು ಗೊತ್ತಾಗಬೇಕು ಎಂದರೆ ನಾನೂ ಒಬ್ಬ ಅಸ್ಪೃಶ್ಯನಾಗಿದ್ದರೆ ಎನ್ನುವ ಪ್ರಜ್ಞೆಯನ್ನು ನಮಗೆ ನಾವು ಹಾಕಿಕೊಳ್ಳಬೇಕು.
ಪ್ರಜ್ಞೆಯಲ್ಲಿ ಉತ್ತರ ಕಂಡುಕೊಳ್ಳಬೇಕು. ಒಬ್ಬ ಮುಸ್ಲಿಮನ ಸಂಕಟ ಗೊತ್ತಾಗಬೇಕೆಂದರೆ ನಾನೂ ಒಬ್ಬ ಮುಸ್ಲಿಮನಾಗಿದ್ದಿದ್ದರೆ ಎಂಬ ಪ್ರಶ್ನೆ ಹಾಕಿಕೊಂಡಾಗ ಸಂಕಟ ಗೊತ್ತಾಗುತ್ತದೆ. ವರ್ತನೆಗಳಿಗೆ ಉತ್ತರ ಸಿಗುತ್ತದೆ. ರಾಜಕಾರಣಿ, ಆಡಳಿತಾಧಿಕಾರಿ ಅಥವಾ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿಗೆ ಈ ಪ್ರಶ್ನೆ ಬಹಳ ಮುಖ್ಯ. ತನ್ನೆದುರು ಬರುವ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಲೀಸಾಗುತ್ತದೆ ಎಂದರು.
Kanakapuraಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಲಿದೆ, ಯಾರು ಜಮೀನು ಮಾರಬೇಡಿ: ಡಿಕೆಶಿ
ಆತ್ಮಕತೆ ಬರೆಯುವ ವ್ಯಕ್ತಿಗೆ ಆತ್ಮರತಿ ಇದ್ದರೆ ಅದು ಕೆಟ್ಟದ್ದು. ಅನ್ಯರನ್ನು ಕುರಿತು ವಿಮರ್ಶೆ ಮಾಡುವುದು ಕೂಡ ಕೆಟ್ಟದ್ದು. ಆತ್ಮರತಿಯೇ ಆತ್ಮಕತೆಯಾದರೆ ಅದು ಬೊಗಳೆ. ಅನ್ಯರ ವಿಮರ್ಶೆಯೇ ಆತ್ಮಕತೆಯಾದರೆ ಅದು ರಗಳೆ. ಆತ್ಮಮರುಕವೇ ಆತ್ಮ ಸಂಕಥನವಾದರೆ ಅದು ಕಹಳೆ. ಆತ್ಮ ಕಥನವೆಂದರೆ ಸ್ವನಿರೀಕ್ಷೆಯಲ್ಲಿ ಲೋಕ ಗ್ರಹಿಕೆ. ಲೋಕ ಗ್ರಹಿಕೆಯಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ಪರಿ. ಇದು ಆತ್ಮಕತೆಗೆ ಬೇಕಾಗಿರುವ ದೃಷ್ಟಿ ಎಂದು ಅವರು ಹೇಳಿದರು.
ಹಾದಿಗಲ್ಲು ಕೃತಿಯಲ್ಲಿ ದಯಾನಂದ ಅವರ ಬಾಲ್ಯಾನುಭವ ಚಿತ್ರಣವಿದೆ. ಅಧಿಕಾರ ಬಂದಾಗ ಎಲ್ಲಿಯೂ ತಾನು ತನ್ನ ಹಿಂದಿನ ಬದುಕಿನ ನೋವು, ಹಸಿವು, ಅವಮಾನಗಳನ್ನು ಮರೆಯದೆ ಸಾಮಾಜಿಕ ಜವಾಬ್ದಾರಿಯ ಸಾಕ್ಷಿಪ್ರಜ್ಞೆಯಾಗಿ ನಿತ್ಯವು ಎಚ್ಚರವಾಗಿದ್ದುಕೊಂಡು ಸಮಸ್ಯೆಗಳಿಗೆ ಮುಖಾಮುಖಿಯಾಗುವ ವಿಚಾರಗಳಿವೆ ಎಂದು ಎಸ್.ಜಿ ಸಿದ್ದರಾಮಯ್ಯ ನುಡಿದರು.
ಆಸ್ತಿಗಳ ಡಿಜೀಟಲೀಕರಣ ಯೋಜನೆ ಕನಕಪುರಕ್ಕೆ ವಿಸ್ತರಣೆ: ಡಿ.ಕೆ.ಶಿವಕುಮಾರ್
ಪುಸ್ತಕದ ಕುರಿತು ಮಾತನಾಡಿದ ಸಾಹಿತ ಡಾ. ರಾಜಶೇಖರ್ ಮಠಪತಿ, ಕತ್ತಿಯಂಚಿನ ಮೇಲೆ ನಡೆದುಕೊಂಡು ಬಂದಿರುವ ದಯಾನಂದ ಅವರು ತಾವು ಪಟ್ಟ ಪಾಡುಗಳು, ಜನಮಾನಸದ ಸಂಕಟಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಂಸ್ಕೃತಿ, ಲೋಕಜ್ಞಾನ, ಆಡಳಿತದ ಕುರಿತು ವಿಷಯಗಳಿವೆ. ಅಲಂಕಾರಿಕ ಪದಗಳಿಲ್ಲದೇ ಓದುಗರಿಗೆ ಸರಳವಾಗಿ ಮನಮುಟ್ಟುತ್ತದೆ ಎಂದು ಹೇಳಿದರು. ಹಾದಿಗಲ್ಲು ಪುಸ್ತಕ ಬಿಡುಗಡೆ ಹಿನ್ನೆಲೆಯಲ್ಲಿ ದಿನವಿಡೀ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.