ಆಸ್ತಿಗಳ ಡಿಜೀಟಲೀಕರಣ ಯೋಜನೆ ಕನಕಪುರಕ್ಕೆ ವಿಸ್ತರಣೆ: ಡಿ.ಕೆ.ಶಿವಕುಮಾರ್
ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೆ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಕನಕಪುರ ಕ್ಷೇತ್ರದ ಜನರಿಗೂ ಆ ಸೌಲಭ್ಯ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ (ಡಿ.03): ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೆ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಕನಕಪುರ ಕ್ಷೇತ್ರದ ಜನರಿಗೂ ಆ ಸೌಲಭ್ಯ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಆಸ್ತಿಗಳ ಡಿಜೀಟಲೀಕರಣದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು, ತೊಂದರೆಗಳನ್ನು ಶೀಘ್ರ ಬಗೆಹರಿಸಿಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್ ನಲ್ಲಿ ದೊರೆಯುತ್ತದೆ.
ಒಂದು ರುಪಾಯಿ ಕೂಡ ಲಂಚ ಕೊಡಬೇಡಿ: ಸಾರ್ವಜನಿಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ
ಈಗಾಗಲೇ ಭೂಮಿ ಯೋಜನೆಯ ಅಡಿ ಪಹಣಿ- ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್ಸೈಟಿನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೆ ಕೆಲಸವನ್ನು ಕನಕಪುರ ಕ್ಷೇತ್ರದಲ್ಲೂ ನಡೆಸಲಾಗುವುದು ಎಂದು ತಿಳಿಸಿದರು.
ನಾವು ಬೆಂಗಳೂರು ಜಿಲ್ಲೆಯವರು: ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ. ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ ಇಲ್ಲೆಲ್ಲಾ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೆ ಅಂದಾಜು ಮಾಡಿ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದರು.
ನಾನು ಏನೇನು ಮಾಡಲು ಸಾಧ್ಯ ಆ ಕೆಲಸವನ್ನು ಮಾಡಿದ್ದೇನೆ. ಇದಕ್ಕೆ ಎಷ್ಟೊಂದು ವಿವಾದ ಮಾಡಿದರು. ಇದೆಲ್ಲಾ ಬೆಂಗಳೂರು ಎಂದ ತಕ್ಷಣ ಏನೇನೋ ವ್ಯಾಖ್ಯಾನ ಪ್ರಾರಂಭವಾಯಿತು. ಇದನ್ನು ವಿರೋಧ ಮಾಡುವವರೆಲ್ಲ ಮಾಡಲಿ, ನಾವು ಬೆಂಗಳೂರು ಜಿಲ್ಲೆಯವರಯ ಸೂಕ್ತ ಕಾಲ ಬರುತ್ತದೆ. ಮುಖ್ಯಮಂತ್ರಿಗಳು ಮತ್ತು ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಮಾಡುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಎಚ್‌ಡಿಕೆ ಟಾಂಗ್
ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ. ಸ್ವಲ್ಪ ತಡವಾಗಬಹುದು. ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ದಯಾನಂದಸಾಗರ ಆಸ್ಪತ್ರೆ, ತಾಯಿ- ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.