ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು- ಸಂತೋಷ್ ಲಾಡ್
ಸಂವಿಧಾನ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಮೈಸೂರು : ಸಂವಿಧಾನ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂವಿಧಾನವನ್ನು ಉಳಿಸಬೇಕಾದ ಜವಾಬ್ದಾರಿ ನಮೆಲ್ಲರ ಮೇಲಿದೆ ಎಂದರು.
ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಮತ್ತು ಹಲವು ಹಕ್ಕುಗಳನ್ನು ಕೊಡುವ ಹಿಂದೂ ಕೋಡ್ ಬಿಲ್ ಬಗ್ಗೆ ಹೆಚ್ಚು ಮಾತನಾಡಬೇಕಿದೆ. ಎಲ್ಲಾ ವರ್ಗಗಳ ಮಹಿಳೆಯರು ಜವಾಹರ್ ಲಾಲ್ ನೆಹರು, ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ಮಹಿಳೆಯರಿಗೆ ಅಲ್ಪಸ್ವಲ್ಪ ಭೂಮಿ ದೊರೆತಿದ್ದರೇ ಅದಕ್ಕೆ ಡಾ. ಅಂಬೇಡ್ಕರ್ ಕಾರಣ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲರೂ ಸಂಘಟಿತರಾಗಬೇಕು. ಹೆಚ್ಚಿನ ಸೀಟು ಗೆಲ್ಲಿಸಲು ಶ್ರಮಿಸಬೇಕು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ಷಿಕ 56 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು ಬಡ ಜನರಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದು ಇತರೆ ರಾಜ್ಯಗಳಿಗೆ ಮಾದರಿಯಾಗಿವೆ. ಗುಜರಾತ್ ಸರ್ಕಾರ ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂ. ಸಾಲ ನೀಡಲು ಮುಂದಾಗಿದೆ. ಅದಕ್ಕೆ ಸಿದ್ದರಾಮಯ್ಯ ಪ್ರೇರಣೆಯಾಗಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಗಳಾದ ನಾರಾಯಣ, ಅನಂತು, ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಶೌಕತ್ ಪಾಷ, ನಾಗೇಶ್, ಈಶ್ವರ್ ಚಕ್ಕಡಿ, ಗಿರೀಶ್, ಕೆ. ಮಹೇಶ್, ಲೋಕೇಶ್, ವೆಂಕಟೇಶ್ ಮೊದಲಾದವರು ಇದ್ದರು.
ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ ಮುಖಂಡರಿಗಿಲ್ಲ
ತುರುವೇಕೆರೆ : ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರ ರಾಜೀನಾಮೆಯನ್ನು ಕೇಳುವ ನೈತಿಕ ಹಕ್ಕು ಕಾಂಗ್ರೆಸ್‌ನ ಬಹುಪಾಲು ದಲಿತ ಮುಖಂಡರಿಗೆ ಇಲ್ಲ ಎಂದು ಜೆಡಿಎಸ್ ದಲಿತ ಮುಖಂಡರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್‌ನ ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ, ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಆಡಳಿತ ಮಾಡಿದ 15 ವರ್ಷಗಳ ಅವಧಿಯಲ್ಲಿ ಈಗ ಕಾಂಗ್ರೆಸ್‌ನ ದಲಿತ ಮುಖಂಡರು ಎಂದು ಕರೆಸಿಕೊಳ್ಳುತ್ತಿರುವ ಹಲವಾರು ಮಂದಿ ಸಾಕಷ್ಟು ಅನುಕೂಲಗಳನ್ನು ಪಡೆದವರೇ ಆಗಿದ್ದಾರೆ. ಬಹುತೇಕ ಮುಖಂಡರು ಶಾಸಕರಿಂದ ಅವರ ಅವಧಿಯಲ್ಲಿ ಬೋರ್‌ವೆಲ್‌ಗಳು ಮನೆ, ಜಮೀನು ಸೇರಿದಂತೆ ಸರ್ಕಾರದಿಂದ ದೊರೆತ ಬಹುಪಾಲು ಸವಲತ್ತುಗಳನ್ನು ಪಡೆದಿದ್ದಾರೆ. ಆದರೂ ಸಹ ಶಾಸಕರಿಂದ ತಾಲೂಕಿಗೆ ಏನೇನೂ ಆಗಿಲ್ಲ. ಅವರು ದಲಿತರ ವಿರೋಧಿ ನಿಲುವು ತಳೆದಿದ್ದಾರೆಂದು ಹೇಳಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಹೊಟ್ಟೆ ತುಂಬ ಉಂಡು ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಬೀಚನಹಳ್ಳಿ ರಾಮಣ್ಣನವರು ದಲಿತರ ಹೆಸರಿನಲ್ಲಿ ಎಲ್ಲಾ ಸೌಲಭ್ಯಗಳನ್ನು ತಾವೇ ಪಡೆದು, ಬಡ ದಲಿತರನ್ನು ತಬ್ಬಲಿ ಮಾಡಿರುವ ಪುಣ್ಯಾತ್ಮರು ಅವರು ಎಂದು ಲೇವಡಿ ಮಾಡಿದರು.
ಈಗ ಕಾಂಗ್ರೆಸ್ ದಲಿತ ಮುಖಂಡರೆಂದು ಹೇಳಿಕೊಳ್ಳುತ್ತಿರುವ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ಗುರುದತ್, ತಿಮ್ಮೇಶ್ ಸೇರಿದಂತೆ ಹಲವಾರು ಮಂದಿ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಂದ ಎಷ್ಟೆಷ್ಟು ಸವಲತ್ತುಗಳನ್ನು ಪಡೆದಿದ್ದಾರೆಂಬುದರ ಪಟ್ಟಿ ಬಿಡುಗಡೆ ಮಾಡಿದರೆ ಅವರ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು.
ಓಲೈಕೆ: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯಾಗಿರುವ ಬೆಮಲ್ ಕಾಂತರಾಜ್ ರವರ ಓಲೈಕೆಗಾಗೇ ಕೆಲವು ದಲಿತ ಮುಖಂಡರು ಶಾಸಕರ ವಿರುದ್ಧ ಹೇಳಿಕೆ ನೀಡಿ ಶಹಬ್ಬಾಶ್ ಪಡೆಯಲು ಹವಣಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅವರಿಂದ ಏನಾದರೂ ಲಾಭ ಮಾಡಿಕೊಳ್ಳಬೇಕೆಂಬ ದುರಾಲೋಚನೆ ಇದೆ ಎಂದು ಜೆಡಿಎಸ್ ನ ದಲಿತ ಮುಖಂಡ ಮುನಿಯೂರು ರಂಗಸ್ವಾಮಿ ಆಪಾದಿಸಿದರು.
ಬೆಮಲ್ ಕಾಂತರಾಜ್ ರವರು ಜೆಡಿಎಸ್‌ನಿಂದಲೇ ವಿಧಾನಪರಿಷತ್ ಸದಸ್ಯರಾಗಿದ್ದವರು. ಆಗ ಅವರು ಈ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಏನು ಸೇವೆ ಮಾಡಿದ್ದಾರೆ, ಎಷ್ಟೆಷ್ಟು ಅನುದಾನವನ್ನು ತಂದಿದ್ದಾರೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಬೆಮಲ್ ಕಾಂತರಾಜ್ ರವರ ಕುರಿತು ಹಲವಾರು ಮಾಧ್ಯಮಗಳಲ್ಲಿ ಅವರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪುಂಖಾನುಪುಂಖವಾಗಿ ಸುದ್ದಿ ಬರುತ್ತಿದೆ. ಇದನ್ನು ಮರೆ ಮಾಚಲು ಕಾಂಗ್ರೆಸ್‌ನ ದಲಿತ ಮುಖಂಡರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುನಿಯೂರು ರಂಗಸ್ವಾಮಿ ಆರೋಪಿಸಿದರು.
ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣ ತೋವಿನಕೆರೆ ರಂಗಸ್ವಾಮಿ, ಬಡವಣೆ ಶಿವರಾಜ್, ಕೃಷ್ಣ ಮಾದಿಗ, ಪುಟ್ಟರಾಜ್, ತಮ್ಮಯ್ಯ, ಬೀಚನಹಳ್ಳೀ ಮಹಾದೇವ್ ಇದ್ದರು.