ದಾವಣಗೆರೆ(ಜು.21): ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ವಿಶ್ವಾಸ ಮತಯಾಚಿಸಲಿದ್ದು, ಅತೃಪ್ತರು ವಾಪಾಸು ಬಂದ್ರೆ ಗೆಲ್ಲುತ್ತೇವೆ. ಇಲ್ಲಾಂದ್ರೆ ಸೋಲುತ್ತೇವೆ ಎಂದು ಕೆಪಿಸಿಸಿ ಹಿರಿಯ ಮುಖಂಡ, ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರೇನೂ ಸಾಮೂಹಿಕವಾಗಿ ಹೋಗಿಲ್ಲ. ಬಿಜೆಪಿಯವರೇ ಕರೆದುಕೊಂಡು ಹೋಗಿದ್ದಾರೆ. ಎಲ್ಲರನ್ನೂ ತೃಪ್ತಿಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

'ಸುಪ್ರೀಂ ತೀರ್ಪು ದೋಸ್ತಿ ಪಕ್ಷಗಳ ಪರ ಬರೋದು ಭ್ರಮೆ'

ಎಲ್ಲಾ 16 ಜನರಿಗೂ ಮಂತ್ರಿಗಿರಿ ನೀಡಲು ಅಸಾಧ್ಯ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ಬರುವುದಿಲ್ಲ. ಸರ್ಕಾರ ಉಳಿದರೆ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದರು. ವಿಪಕ್ಷ ಶಾಸಕರು ಓಡಿ ಹೋಗುತ್ತಾರೆಂದು ಬಿಜೆಪಿ ಕೂಡಿ ಹಾಕಿದೆ. ಮುಂದೆ ಬಿಜೆಪಿ ಸರ್ಕಾರ ರಚನೆಯಾದರೆ ತುಂಬಾ ದಿನವಂತೂ ಉಳಿಯುವುದಿಲ್ಲ. ಕುದುರೆ ವ್ಯಾಪಾರವೂ ಇದೇ ರೀತಿ ಮುಂದುವರಿಯಲಿದೆ. ಈಗ ಬಿಜೆಪಿಯವರು ಮಾಡಿದ್ದಾರೆ. ಮುಂದೆ ಮತ್ತೊಂದು ಪಕ್ಷವು ಮಾಡುತ್ತದಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.