'ಸುಪ್ರೀಂ ತೀರ್ಪು ದೋಸ್ತಿ ಪಕ್ಷಗಳ ಪರ ಬರೋದು ಭ್ರಮೆ'
ದೋಸ್ತಿ ಪಕ್ಷಗಳ ಪರ ಸುಪ್ರೀಂ ತೀರ್ಪು ಭ್ರಮೆ: ಬಿಎಸ್‌ವೈ| ಏನೇ ಸರ್ಕಸ್ ಮಾಡಿದ್ರೂ ಸರ್ಕಾರ ಇರಲ್ಲ| ಬಹುಮತವಿದ್ದರೆ ಎಚ್‌ಡಿಕೆ ಸಾಬೀತುಪಡಿಸಲಿ: ಬಿಎಸ್‌ವೈ ಖಡಕ್ ಮಾತು| ವಿಶ್ವನಾಥ್ ಹಣ ಪಡೆದ ವಿಚಾರವನ್ನು ಸಾರಾ ಇಷ್ಟುದಿನ ಮುಚ್ಚಿಟ್ಟಿದ್ದು ಏಕೆ?| 5 ಕೋಟಿಯನ್ನು ಶ್ರೀನಿವಾಸಗೌಡ ಮನೆಯಲ್ಲಿಟ್ಟುಕೊಂಡದ್ದು ಏಕೆ?
ಬೆಂಗಳೂರು[ಜು.21]: ವಿಪ್ ಅಧಿಕಾರದ ಬಗ್ಗೆ ಪ್ರಶ್ನಿಸಿ ಮಿತ್ರಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸಮ್ಮಿಶ್ರ ಸರ್ಕಾರದ ಪರವಾಗಿ ನ್ಯಾಯಾಲಯವು ತೀರ್ಪು ನೀಡಲಿದೆ ಎಂಬುದು ಭ್ರಮೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ರಮಡ ರೆಸಾರ್ಟ್‌ನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ವಿಪ್ ಅಧಿಕಾರದ ಬಗ್ಗೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಅತೃಪ್ತರು ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಾಲಯವು ಈಗಾಗಲೇ ಹೇಳಿದೆ. ಈ ಮೂಲಕ ವಿಪ್‌ನ ಪರಮಾಧಿಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತೆ ಮಾಡಿದೆ. ಸೋಮವಾರ ಸಮ್ಮಿಶ್ರ ಸರ್ಕಾರದ ಪರವಾಗಿ ನ್ಯಾಯಾಲಯ ತೀರ್ಪು ನೀಡಲಿದೆ ಎಂಬುದು ಕೇವಲ ಭ್ರಮೆಯಷ್ಟೆಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಸರ್ಕಾರಕ್ಕೆ ಬಹುಮತವಿದ್ದರೆ ಅದನ್ನು ಸಾಬೀತು ಪಡಿಸಲಿ. ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು. ವಿಶ್ವಾಸಮತ ಯಾಚನೆ ಮಾಡಲು ಮೈತ್ರಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸೋಮವಾರ ಬಹುಮತ ಸಾಬೀತುಪಡಿಸಬೇಕು. ಇಲ್ಲವೇ ರಾಜೀನಾಮೆ ನೀಡಿ ಅಧಿಕಾರದಿಂದ ಕುಮಾರಸ್ವಾಮಿ ನಿರ್ಗಮಿಸಬೇಕು ಎಂದು ಆಗ್ರಹಿಸಿದರು.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದರ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ಎರಡು ಬಾರಿ ಮುಖ್ಯಮಂತ್ರಿಗಳಿಗೆ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಿದ್ದರು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಪಾಲರ ಆದೇಶಕ್ಕೂ ಸೊಪ್ಪು ಹಾಕದೆ ಕಾರ್ಯಾಂಗಕ್ಕೆ ಅವಮಾನ ಮಾಡುತ್ತಿದ್ದಾರೆ. ಬಹುಮತ ಇದ್ದಿದ್ದರೆ ವಿಶ್ವಾಸ ಮತಯಾಚನೆಯನ್ನು ಒಂದೇ ದಿನ ಮಾಡಿ ಮುಗಿಸಬಹುದಿತ್ತು. ಏನೇ ಸರ್ಕಸ್ ನಡೆಸಿದರೂ ಸರ್ಕಾರ ಉಳಿಯುವುದಿಲ್ಲ. ಮುಖಭಂಗ ಅನುಭವಿಸುವ ಬದಲು ಗೌರವಯುತವಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಅವರು ಚುನಾವಣೆಗೆ ಸ್ಪರ್ಧಿಸಿ 28 ಕೋಟಿ ರು. ಸಾಲ ಮಾಡಿಕೊಂಡಿದ್ದು, ಇದನ್ನು ತೀರಿಸಲು ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂಬ ಸಚಿವ ಸಾ.ರಾ.ಮಹೇಶ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈ ವಿಚಾರವನ್ನು ಇಷ್ಟುದಿನದವರೆಗೆ ಏಕೆ ಮುಚ್ಚಿಟ್ಟಿದ್ದೀರಿ? ಸಾ.ರಾ. ಮಹೇಶ್ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರ ಆರೋಪಗಳಿಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುವುದಿಲ್ಲ. ಇಷ್ಟುದಿನಗಳವರೆಗೆ ಸುಮ್ಮನಿದ್ದು, ವಿಶ್ವಾಸ ಮತಯಾಚನೆ ವೇಳೆಯಲ್ಲಿ ಬಹಿರಂಗಪಡಿಸಿದ್ದು ಸರಿಯೇ? ಎಂದು ಹೇಳಿದರು.
ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಆದರೆ, ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದಾರೆ. ಅವರ ಕುಟುಂಬ ಸದಸ್ಯರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಆರೋಗ್ಯ ವಿಚಾರಿಸಲು ಸಭಾಧ್ಯಕ್ಷರು ತಂಡ ರಚಿಸಿ ಕಳುಹಿಸಿಕೊಟ್ಟಿದ್ದಾರೆ. ಆದರೆ, ಅವರ ಫೋಟೋ ಹಿಡಿದುಕೊಂಡು ಸದನದಲ್ಲಿ ದಾಂಧಲೆ ಮಾಡಿದ್ದಾರೆ. ಹೀಗಾಗಿ ಶಿವಕುಮಾರ್ ಅವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಶ್ರೀನಿವಾಸಗೌಡ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ತಮ್ಮ ಮನೆಗೆ ಬಂದು 5 ಕೋಟಿ ರು. ಇಟ್ಟು ಹೋಗಲಾಗಿತ್ತು. ಅದನ್ನು ವಾಪಸ್ ಕಳುಹಿಸಿಕೊಟ್ಟೆಎಂದಿದ್ದಾರೆ. ಆದರೆ, ಹಣವನ್ನು 2 ತಿಂಗಳು ಮನೆಯಲ್ಲಿಟ್ಟುಕೊಂಡಿದ್ದು ಅಪರಾಧವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.