ಬೆಂಗಳೂರು(ಅ.15): ಇಂದಿರಾ ಕ್ಯಾಂಟೀನ್‌ನ ಕೇಂದ್ರಿಕೃತ ಅಡುಗೆ ಕೋಣೆಯಲ್ಲಿ ಇಡ್ಲಿ ತಯಾರಿಸುವ ಪಾತ್ರೆ ಹಾಳಾಗಿರುವ ಹಿನ್ನೆಲೆಯಲ್ಲಿ ಇಡ್ಲಿ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ ಹಾಗೂ ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ತಯಾರಿಸಿ ಪೂರೈಕೆಗೆ ಬಿಬಿಎಂಪಿ 2017ರಲ್ಲಿ ವಿಧಾನಸಭಾ ಕ್ಷೇತ್ರವಾರು ಕೇಂದ್ರೀಕೃತ ಅಡುಗೆ ಕೋಣೆ ನಿರ್ಮಿಸಿತ್ತು. ಕಳೆದ ಮೂರು ವರ್ಷದಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸಿದ್ಧಪಡಿಸಿ ಸರಬರಾಜು ಮಾಡುವ ಗುತ್ತಿಗೆ ದಾರರು ಈ ಕೇಂದ್ರೀಕೃತ ಅಡುಗೆ ಕೋಣೆಗಳನ್ನು ಬಳಕೆ ಮಾಡಿಕೊಂಡು ಉಪಹಾರ ಮತ್ತು ಊಟ ಸರಬರಾಜು ಮಾಡುತ್ತಿದ್ದರು. ಆದರೆ, ಇದೀಗ ಅಡುಗೆ ಮನೆಯಲ್ಲಿ ಇಡ್ಲಿ ತಯಾರಿಸುವ ಸ್ಟೀಮ್‌ ಪಾತ್ರೆಗಳು ಹಾಳಾಗಿದೆ. ಹಾಗಾಗಿ, ಹಲವು ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕೇವಲ ರೈಸ್‌ ಆಧಾರಿತ ಉಪಹಾರ ಪೂರೈಕೆ ಮಾಡಲಾಗುತ್ತಿದೆ.

ಹುಬ್ಬಳ್ಳಿ: ಶುಚಿ-ರುಚಿ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌

20 ಕೋಟಿ ಬಿಲ್‌ ಬಾಕಿ:

ಗುತ್ತಿಗೆದಾರರಿಗೆ ಬಿಬಿಎಂಪಿ 20 ಕೋಟಿ ಬಾಕಿ ಪಾವತಿಸಿಲ್ಲ. ಹೀಗಾಗಿ, ಕೆಲವು ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್‌ಗೆ ಕೇವಲ ಒಂದು ಬಗೆಯ ಉಪಹಾರ ಮತ್ತು ಊಟ ಪೂರೈಕೆ ಮಾಡುತ್ತಿದ್ದಾರೆ. ಇಡ್ಲಿಗೆ ಬೇಕಾದ ಕಚ್ಚಾ ಸಾಮಗ್ರಿ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ, ಇಂದಿರಾ ಕ್ಯಾಂಟೀನ್‌ ಗ್ರಾಹಕರಿಗೆ ಇಡ್ಲಿ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರು ತಿಳಿಸಿದ್ದಾರೆ.

ಗ್ರಾಹಕರ ಸಂಖ್ಯೆ ಗಣನೀಯ ಹೆಚ್ಚಳ

ಲಾಕ್‌ಡೌನ್‌ ಸಂದರ್ಭದಲ್ಲಿ ಉಚಿತವಾಗಿ ಉಪಹಾರ ಪೂರೈಕೆ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಇಂದಿರಾ ಕ್ಯಾಂಟೀನ್‌ ಮುಂದೆ ಮುಗಿಬಿದ್ದು ಆಹಾರ ಸೇವನೆ ಮಾಡಿದರು. ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.