ಹುಬ್ಬಳ್ಳಿ: ಶುಚಿ-ರುಚಿ ಕಳೆದುಕೊಂಡ ಇಂದಿರಾ ಕ್ಯಾಂಟೀನ್
ಸೊರಗಿದ ಇಂದಿರಾ ಕ್ಯಾಂಟೀನ್| ಆರಂಭದಿಂದಲೂ ಒಂದಲ್ಲ ಒಂದು ರೀತಿ ಹುಬ್ಬಳ್ಳಿ-ಧಾರವಾಡ ಮಹಾನಗರದ ಇಂದಿರಾ ಕ್ಯಾಂಟೀನ್ ಸುದ್ದಿಯಲ್ಲೆ ಇದೆ| ಹುಬ್ಬಳ್ಳಿಯಲ್ಲಿ 7, ಧಾರವಾಡದಲ್ಲಿ 2 ಸೇರಿ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳು ಹು- ಧಾದಲ್ಲಿ ಕಾರ್ಯನಿರ್ವಹಣೆ|
ಹುಬ್ಬಳ್ಳಿ(ಸೆ.14): ಕೋವಿಡ್ ಲಾಕ್‌ಡೌನ್ ಬಳಿಕ ತೆರೆದುಕೊಂಡರೂ ಇಂದಿರಾ ಕ್ಯಾಂಟೀನ್ ಸೊರಗಿದೆ. ಅವ್ಯವಸ್ಥೆಯ ಆಗರವೂ ಆಗಿ ಸಾರ್ವಜನಿಕರ ಬೇಸರಕ್ಕೂ ಕಾರಣವಾಗಿದೆ.
ಹೌದು. ಆರಂಭದಿಂದಲೂ ಒಂದಲ್ಲ ಒಂದು ರೀತಿ ಮಹಾನಗರದ ಇಂದಿರಾ ಕ್ಯಾಂಟೀನ್ ಸುದ್ದಿಯಲ್ಲೆ ಇದೆ. ಹುಬ್ಬಳ್ಳಿಯಲ್ಲಿ 7, ಧಾರವಾಡದಲ್ಲಿ 2 ಸೇರಿ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳು ಹು- ಧಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಕೋವಿಡ್ ಸಂಕಷ್ಟಕ್ಕಿಂತ ಮೊದಲಿದ್ದ ಊಟದ ಕ್ವಾಲಿಟಿ ಈಗಿಲ್ಲ, ಅವ್ಯವಸ್ಥೆಗಳು ಕಂಡುಬರುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ನಂಬಿಕೊಂಡಿರುವ ಬಡ ಕಾರ್ಮಿಕರು, ಕಿಮ್ಸ್‌ಗೆ ಬರುವ ರೋಗಿಗಳು, ಇತರರಿಗೆ ಇದು ಸಮಸ್ಯೆ ತಂದಿಟ್ಟಿದೆ. ಕೆಲವೆಡೆ ಶುಚಿತ್ವವನ್ನು ನಿರ್ವಹಿಸುತ್ತಿಲ್ಲ ಎಂಬ ದೂರು ಸಹ ಕೇಳಿಬಂದಿದೆ.
ಕೊರೋನಾ ಕಾರಣದಿಂದ ಆರ್ಥಿಕ ಸಮಸ್ಯೆ ಇರುವ ಕಾರಣ ಇಂದಿರಾ ಕ್ಯಾಂಟೀನ್‌ಗಳ ಸಿಬ್ಬಂದಿ ಕಡಿತ ಮಾಡಲಾಗಿದೆ. ಹೀಗಾಗಿ ಈ ಹಿಂದಿನಷ್ಟುಉತ್ತಮವಾಗಿ ಸವೀರ್‍ಸ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಕಿಮ್ಸ್ ಹಿಂಭಾಗ ಸೇರಿ ಕೆಲ ಕ್ಯಾಂಟೀನ್‌ಗಳಲ್ಲಿ ಊಟವನ್ನು ಪಾರ್ಸೆಲ್ ನೀಡಲಾಗುತ್ತಿದೆ. ಅದೂ ಅಲ್ಲದೆ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಇಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿಯೆ ಪಾರ್ಸೆಲ್ ನೀಡಲಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ: ಕೊರೋನಾತಂಕದ ನಡುವೆಯೇ ಬಾಗಿಲು ತೆರೆಯುತ್ತಿವೆ ಕೈಗಾರಿಕೆಗಳು
ಕಿಮ್ಸ್ ಹಿಂಭಾಗದ ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಇಲ್ಲಿ ಊಟ, ಉಪಾಹಾರ ಮಾಡುವುದು ಸಾಧ್ಯವಾಗುತ್ತಿಲ್ಲ. ಇಲ್ಲಿ ಹೆಚ್ಚಾಗಿ ರೋಗಿಗಳ ಸಂಬಂಧಿಕರೆ ಆಗಮಿಸಿ ಊಟ ಪಡೆಯುತ್ತಾರೆ. ಹೀಗಿರುವಾಗ ಇಲ್ಲೂ ಅಶುಚಿತ್ವ ಇದ್ದರೆ ಮತ್ತಷ್ಟುಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಜನತೆ ಆದಷ್ಟುಶುಚಿತ್ವ ಕಾಪಾಡಲು ಒತ್ತಾಯಿಸಿದ್ದಾರೆ.
ಇನ್ನೊಂದು ಕಡೆ ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದಿರುವ ಮಯೂರ್ ಆದಿತ್ಯ ರೆಸ್ಟೋರೆಂಟ್‌ಗೆ ಸಮರ್ಪಕ ಅನುದಾನ ಬಂದಿಲ್ಲ. ಒಂದು ಅಂದಾಜಿನ ಪ್ರಕಾರ 2.6 ಕೋಟಿ ಬಾಕಿ ಇದೆ. ಇದು ರೆಸ್ಟೋರೆಂಟ್ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ. ಮಹಾನಗರ ಪಾಲಿಕೆ ಶೇ. 70 ರಷ್ಟು, ಕಾರ್ಮಿಕ ಇಲಾಖೆ ಶೇ. 30ರಷ್ಟುಅನುದಾನ ಬಿಡುಗಡೆ ಮಾಡಬೇಕು ಎಂಬ ತೀರ್ಮಾನಕ್ಕೆ ಪಾಲಿಕೆ ಆಕ್ಷೇಪಿಸಿತ್ತು. ಆದರೂ ಹಿಂದೆ ಪಾಲಿಕೆ ಹಣ ನೀಡಿದೆ. ಆದರೆ, ಈಗ ಪ್ರತಿ ತಿಂಗಳ ಅಂತ್ಯಕ್ಕೆ ಬಿಲ್ ಕಳಿಸುತ್ತೇವೆ, ಆದರೆ ಪಾವತಿ ಮಾತ್ರ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಮಯೂರ್ ಆದಿತ್ಯ ಹೋಟೆಲ್‌ನ ಹೇಮಲ್ ದೇಸಾಯಿ.