ಸಾಲ ಕಟ್ಟದಿದ್ದರೆ ಆಸ್ತಿ ಜಪ್ತಿ: ರೈತ ಮಹಿಳೆಗೆ ಐಸಿಐಸಿಐ ನೋಟಿಸ್!
ಖಾಸಗಿ ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಆಗ್ರಹಿಸಿ ರೈತರಿಗೆ ನೋಟಿಸ್ ಜಾರಿಗೊಳಿಸಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, ಇದೀಗ ಐಸಿಐಸಿಐ ಬ್ಯಾಂಕ್ ರೈತ ಮಹಿಳೆಯೊಬ್ಬರಿಗೆ ನೋಟಿಸ್ ಜಾರಿಗೊಳಿಸಿದೆ.
ರಾಯಚೂರು[ನ.11]: ಸಾಲ ಮರುಪಾವತಿಗೆ ಆಗ್ರಹಿಸಿ ಖಾಸಗಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಜಾರಿಗೊಳಿಸಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, ಇದೀಗ ಐಸಿಐಸಿಐ ಬ್ಯಾಂಕ್ ರೈತ ಮಹಿಳೆಯೊಬ್ಬರಿಗೆ ನೋಟಿಸ್ ಜಾರಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದ ನರಸಮ್ಮ ಎಂಬುವರು, ಐಸಿಐಸಿಐ ಬ್ಯಾಂಕ್‌ನ ರಾಯಚೂರು ಶಾಖೆಯಿಂದ 2015ರ ಅ.31ರಂದು 5.50 ಲಕ್ಷ ರು. ಕೃಷಿ ಸಾಲ ಪಡೆದಿದ್ದರು. ಮಳೆ ಕೊರತೆಯಿಂದ ಸೂಕ್ತ ಇಳುವರಿ ಬಾರದ ಕಾರಣ ಬ್ಯಾಂಕಿನ ಸಾಲ ತೀರಿಸಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 2018ರ ಮೇ 31ರಂದು ಬ್ಯಾಂಕ್ ವಕೀಲರ ಮುಖಾಂತರ ‘ನೀವು ಮಾಡಿರುವ ಸಾಲವು ಬಡ್ಡಿ ಸಮೇತ 5,92,765 ರು. ಆಗಿದ್ದು, ಕೂಡಲೇ ಮರುಪಾವತಿಸಬೇಕು’ ಎಂದು ನೋಟಿಸ್ (ಡಿಮಾಂಡ್ ನೋಟಿಸ್) ಜಾರಿ ಮಾಡಿದೆ. ಇದಕ್ಕೆ ನರಸಮ್ಮ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಬಡ್ಡಿ ಸೇರಿ ಸಾಲದ ಮೊತ್ತ 6,00,512 ರು. ಆಗಿದ್ದು ಕೂಡಲೇ ಪಾವತಿಸಬೇಕು. ಇಲ್ಲವಾದರೆ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮತ್ತೆ ಅ.28ರಂದು ಬ್ಯಾಂಕ್ ವಕೀಲರ ಮೂಲಕ ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಸ್ವತಃ ಮುಖ್ಯಮಂತ್ರಿಗಳೇ ಸೂಚಿಸಿದ್ದರೂ ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಆಗ್ರಹಿಸಿ ನೋಟಿಸ್ ನೀಡುತ್ತಿರುವ ಕ್ರಮವನ್ನು ರೈತರು ಖಂಡಿಸಿದ್ದು, ಜಾರಿ ಮಾಡಿರುವ ನೋಟಿಸ್ ಅನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.