ಕಾಂಗ್ರೆಸ್ ಸೇರ್ತಾರ ಜೆಡಿಎಸ್ ಮುಖಂಡ ..?
ಜೆಡಿಎಸ್ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ನೀವು ಕಾಂಗ್ರೆಸ್ ಸೇರುತ್ತಿರಂತೆ, ಹೌದಾ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಈ ಬಗ್ಗೆ ಉತ್ತರ ನೀಡಿದ್ದಾರೆ.
ಹರಿಹರ (ಡಿ.04): ಇತ್ತೀಚೆಗೆ ನಮ್ಮ ಜೆಡಿಎಸ್ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ನೀವು ಕಾಂಗ್ರೆಸ್ ಸೇರುತ್ತಿರಂತೆ, ಹೌದಾ ಎಂದು ಪ್ರಶ್ನಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ - ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಸ್ಪಷ್ಟಪಡಿಸಿದರು.
ನಗರದ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಹರಿಹರ ಘಟಕದ ವತಿಯಿಂದ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತ್ತ ಡಿಕೆಸು ಚುರುಕು - ಇತ್ತ ಅನಿತಾ ಬಿರುಸು : ತಣ್ಣಗಿರುವ ಬಿಜೆಪಿಗರು ...
ನಾನು ನಮ್ಮ ತಂದೆಯವರ ಕಾಲದಿಂದಲೂ ಜೆಡಿಎಸ್‌ನಲ್ಲಿ ಇದ್ದು, ಮುಂದೆಯೂ ಇರುತ್ತೇನೆ ಎಂದರು. ಈಗ ಬಂದಿರುವ ಗ್ರಾಪಂ ಹಾಗೂ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ ನಂತರ ಬರುವ ವಿಧಾನಸಭಾ ಚುನಾವಣೆಗೆ ಪೀಠಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಪಕ್ಷದ ಹಿರಿಯರು ಸಂಘಟನಾತ್ಮಕವಾಗಿ ಹಾಗೂ ಬಲು ಎಚ್ಚರಿಕೆಯಿಂದ ಚುನಾವಣೆಗಳನ್ನು ಎದುರಿಸ ಬೇಕಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ ಎಂದು ಹತಾಶರಾಗುವುದು ಬೇಡ. ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಹಾಗೂ ಪಕ್ಷ ನಿಲ್ಲಿಸಿದ ವ್ಯಕ್ತಿಗಳಿಗೆ ಮೋಸ ಮಾಡದೆ ಜೊತೆಯಲ್ಲಿದ್ದು ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಿಸಿದರು.
ರೈತರ ಮೇಲೆ ಆಣೆ ಪ್ರಮಾಣ ಮಾಡಿ, ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಸಾಲ ಮನ್ನಾ ಮಾಡಲಿಲ್ಲ. ಅದೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಮ್ಮ ತಾಲೂಕು ಸೇರಿದಂತೆ ರಾಜ್ಯದಲ್ಲಿ 40 ಲಕ್ಷ ರೈತರ ಸುಮಾರು 53 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಚಿದಾನಂದಪ್ಪ ಅನೇಕ ಮುಖಂಡರು ಪಕ್ಷದ ಬಲವರ್ಧನೆ ಮತ್ತು ಗೆಲುವಿನ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಗ್ರಾಮಾಂತರ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಜಿಪಂ ಸದಸ್ಯೆ ಹೇಮಾವತಿ, ಚನ್ನಬಸವನ ಗೌಡ, ರಾಜಣ್ಣ, ಚಂದ್ರಣ್ಣ, ಶೇಖರಪ್ಪ, ಡಿ.ಎಂ.ಹಾಲಸ್ವಾಮಿ, ಬಸವನ ಗೌಡ, ಎಪಿಎಂಸಿ ನಿರ್ದೇಶಕ ರುದ್ರಪ್ಪ, ಮಾಜಿ ಅಧ್ಯಕ್ಷ ವೀರನಗೌಡ, ಅನಂತ ಶೆಟ್ಟಿ, ಏ.ಕೆ.ನಾಗಪ್ಪ, ಪರಮೇಶ್ವರ ಗೌಡ, ಎಚ್.ಎಸ್.ಅರವಿಂದ್, ಜಿ.ನಂಜಪ್ಪ, ಫೈನಾನ್ಸ್ ಮಂಜುನಾಥ್, ನಗರಸಭೆ ಸದಸ್ಯ ಜಂಬಣ್ಣ, ಪಿ.ಎನ್. ವಿರೂಪಾಕ್ಷ ಅಲ್ಲದೆ ಗ್ರಾಮಾಂತರ ಪ್ರದೇಶದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.