'ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ :ಮಾದರಿ ತಾಲೂಕನ್ನಾಗಿಸುವೆ'
ಜನತೆ ನನ್ನನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿಯೇ ಶಿರಾ ತಾಲೂಕನ್ನು ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ (ಅ.04): ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಅಲ್ಪಾವಧಿಯಲ್ಲೇಯೇ ಶಕ್ತಿ ಮೀರಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲೂ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿಯೇ ಶಿರಾ ತಾಲೂಕನ್ನು ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ತಾಲೂಕಿನ ಕರಿದಾಸರಹಳ್ಳಿ ಚಿರತಹಳ್ಳಿ ಗೇಟ್ ಬಳಿ ಅಮರಾಪುರ ಗಡಿಯಿಂದ ಬರಗೂರು ಕ್ರಾಸ್‌ವರೆಗೆ ಸುಮಾರು 23 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಶಾಸಕನಾದಾಗಿನಿಂದಲೂ ವಿಧಾನ ಸೌಧದಲ್ಲಿ ನಡೆಯುವ ಸಭೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಸಹ ಕ್ಷೇತ್ರದಲ್ಲಿ ಸುತ್ತಿ ಎಲ್ಲಾ ಗ್ರಾಮಗಳಲ್ಲೂ ಜನಗಳನ್ನು ಸಂಪರ್ಕ ಮಾಡಿದ್ದೇನೆ. ನನಗೆ ಮತ್ತೊಮ್ಮೆ ಅವಕಾಶ ಕೊಡಿ ಈ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಪರಿಹಾರ ಪೋರ್ಟಲ್ ಪ್ರಾರಂಭ: ಶಿರಾ (Shira) ತಾಲೂಕಿನಲ್ಲಿ ದೇವರ ಕೃಪೆಯಿಂದ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿವೆ. ಇದರ ಜೊತೆಗೆ ಕೆಲವು ರೈತರ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರ (Farmers) ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಪರಿಹಾರದ ಹಣ ಪಾವತಿಯಾಗಲಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಳೆ ನಷ್ಟದ ಬಗ್ಗೆ ದಾಖಲು ಮಾಡಲು ಬೆಳೆ ನಷ್ಟಪೋರ್ಟಲ್ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಪರಿಹಾರ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಮತ್ತೊಮ್ಮೆ ಅವಕಾಶ ಕೊಡಲಿದ್ದಾರೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು.
ಕುಂಚಿಟಿಗ ಸಮುದಾಯ ಶೀಘ್ರ ಓಬಿಸಿ (OBC) ಸೇರ್ಪಡೆ: ಕುಂಚಿಟಿಗ ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ವಿಚಾರವಾಗಿ ನಾನು ಎಲ್ಲಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸಂಪುಟದಲ್ಲಿ ಕಡತವು ಅನುಮೋದನೆಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಗೊಂಡ ನಂತರ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಂಗಸ್ವಾಮಿ, ನಗರ ಅಧ್ಯಕ್ಷ ವಿಜಯರಾಜ್, ಜಿಪಂ ಮಾಜಿ ಸದಸ್ಯ ಪ್ರಕಾಶ್ ಗೌಡ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ಭದ್ರಾ ಮೇಲ್ದಂಡೆ ಶೇ.70ರಷ್ಟುಕಾಮಗಾರಿ ಪೂರ್ಣ
ಶಿರಾ ತಾಲೂಕಿನ ಮದಲೂರು ಸೇರಿದಂತೆ ಸುಮಾರು 65ಕ್ಕೂ ಹೆಚ್ಚು ಕೆರೆಗಳಿಗೆ (Lake) ನೀರು ಹರಿಸುವ ಅಪ್ಪರ್ ಭದ್ರ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಸುಮಾರು ಶೇ.70ರಷ್ಟುಪೈಪ್‌ಲೈನ್ ಕಾಮಗಾರಿ ಕೆಲಸ ಮುಕ್ತಾಯವಾಗಿದೆ. ಇದರ ಜೊತೆಗೆ ಅಪ್ಪರ್ ಭದ್ರ ಎರಡನೇ ಹಂತದ ಕಾಮಗಾರಿಗೂ ಸಹ ಕ್ರಿಯಾ ಯೋಜನೆ ಸಿದ್ಧಗೊಂಡಿದೆ. ಅದೂ ಸಹ ಶೀಘ್ರವಾಗಿ ಕೆಲಸ ಪ್ರಾರಂಭವಾಗಲಿದೆ. ಅಪ್ಪರ್ ಭದ್ರ ಎರಡನೇ ಹಂತದ ಕಾಮಗಾರಿಯಲ್ಲಿ ತಾಲೂಕಿನ ಯಾವ ಕೆರೆಗಳು ಕೈಬಿಡಲಾಗಿತ್ತು. ಆ ಎಲ್ಲಾ ಕೆರೆಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
- ನ್ನನ್ನು ಗೆಲ್ಲಿಸಿದರೆ ಶಿರಾ ಮಾದರಿ ತಾಲೂಕನ್ನಾಗಿಸುವೆ
- ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ
- 23 ಕೋಟಿ ರು.ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜೇಶ್ ಗೌಡ
- ಶಿರಾ ತಾಲೂಕಿನ ಮದಲೂರು ಸೇರಿದಂತೆ ಸುಮಾರು 65ಕ್ಕೂ ಹೆಚ್ಚು ಕೆರೆಗಳಿಗೆ (Lake) ನೀರು ಹರಿಸುವ ಅಪ್ಪರ್ ಭದ್ರ ಕಾಮಗಾರಿಗೆ ವೇಗ
- ಕಾಮಗಾರಿಯಲ್ಲಿ ತಾಲೂಕಿನ ಯಾವ ಕೆರೆಗಳು ಕೈಬಿಡಲಾಗಿತ್ತು. ಆ ಎಲ್ಲಾ ಕೆರೆಗಳನ್ನು ಸೇರ್ಪಡೆಗೊಳಿಸಲಾಗುವುದು