ಜಾರಕಿಹೊಳಿ ಕೇಸ್ ಕೈಬಿಟ್ಟ ಕಲ್ಲಹಳ್ಳಿ ಎಚ್‌ಡಿಕೆ ವಿರುದ್ಧ ತಿರುಗಿದರು
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಹೋರಾಟ ನಡೆಸುತ್ತಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ತಮ್ಮ ಕೇಸ್ ವಾಪಸ್ ಪಡೆದಿದ್ದು ಎಚ್‌ಡಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ರಾಮನಗರ (ಮಾ.08): ಮಾಜಿ ಸಚಿವರ ಸಿ.ಡಿ. ಪ್ರಕರಣದಲ್ಲಿ ನನ್ನ ಧ್ವನಿ ಅಡಗಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ 5 ಕೋಟಿ ರು. ಡೀಲ್ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಸಿ.ಡಿ. ಡೀಲ್‌ನ ಸತ್ಯಾಂಶ ಗೊತ್ತಿದ್ದರೆ ಏಕೆ ಬಹಿರಂಗಪಡಿಸುತ್ತಿಲ್ಲ. ಆಧಾರ ರಹಿತ ಆರೋಪ ಮಾಡುವ ಮೂಲಕ ನನ್ನ ಹೋರಾಟಕ್ಕೆ ಹಿನ್ನಡೆ ಉಂಟು ಮಾಡಿದ್ದಾರೆ. ಈ ಸಂಬಂಧ ಕಾನೂನು ತಜ್ಞರ ಜತೆ ಚರ್ಚಿಸಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು.
ಕೋಟಿ ಕೋಟಿ ಡೀಲ್... ದೂರು ವಾಪಸ್ ಪಡೆದ ಗುಟ್ಟು ಹೇಳಿದ ದಿನೇಶ್; ವಿಡಿಯೋ
‘ನಾನು ದೂರು ವಾಪಸ್ ಪಡೆದಾಕ್ಷಣ ತನಿಖೆಗೆ ಅಡ್ಡಿಯಾಗುವುದಿಲ್ಲ. ದೂರಿಗೆ ಪೂರಕವಾಗಿ ಏನೆಲ್ಲ ಮಾಹಿತಿ ಅಗತ್ಯವಿದೆಯೋ ಅದನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ಹೋರಾಟ ನಡೆಸುವವರಿಗೂ ನೈತಿಕತೆ ಇರಬೇಕು.
ಆರೋಪ ಹೊತ್ತುಕೊಂಡು ಹೋರಾಟ ನಡೆಸುವುದರಲ್ಲಿ ಅರ್ಥವಿಲ್ಲ. ಸಂತ್ರಸ್ತ ಮಹಿಳೆ ಕುಟುಂಬಕ್ಕೆ ನ್ಯಾಯ ಒದಗಿಸಲು ನನ್ನ ಕೈಲಾದ ಸಹಾಯ ಮಾಡಿದ್ದೇನೆ. ವೈಯಕ್ತಿಕ ಮಾನಹಾನಿ ಸಹಿಸಲು ಸಾಧ್ಯವಾಗುತ್ತಿಲ್ಲ. ಕುಮಾರಸ್ವಾಮಿ ಅವರು ಮಾಡಿರುವ ಡೀಲ್ ಆರೋಪದಿಂದ ಮುಕ್ತನಾಗಿ ಬಂದು ಹೋರಾಟ ಮುಂದುವರೆಸುತ್ತೇನೆ’ ಎಂದು ದಿನೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.