ಮೈಸೂರು (ಮಾ.23):  ಶಾಸಕ ಜಿ.ಟಿ. ದೇವೇಗೌಡಗೆ ಜೆಡಿಎಸ್‌ ಅನಿವಾರ್ಯ, ಅಂತೆಯೇ ಜೆಡಿಎಸ್‌ಗೆ ಜಿ.ಟಿ. ದೇವೇಗೌಡ ಅನಿವಾರ್ಯ ಎಂದು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರು ಈಗಾಗಲೇ ಬಿಜೆಪಿಗೆ ಹೋಗಿ ಬಂದಿದ್ದಾರೆ. ಸಿದ್ದರಾಮಯ್ಯ ಇರುವವರೆಗೆ ಕಾಂಗ್ರೆಸ್‌ನಲ್ಲಿ ಅವಕಾಶವಿಲ್ಲ. 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದರೆ ನಗುತ್ತಿದ್ದರು. ಆದರೆ ಕುಮಾರಸ್ವಾಮಿ ಅವರನ್ನೇ ಹುಡುಕಿಕೊಂಡು ಬರುವ ಪರಿಸ್ಥಿತಿ ಬಂತು. ಈಗಲೂ ಅಷ್ಟೇ 2023ಕ್ಕೆ ಮತ್ತೆ ಕುಮಾರಸ್ವಾಮಿ ಕಾಲು ಹಿಡಿಯುವ ಪರಿಸ್ಥಿತಿ ಬರುತ್ತದೆ ಎಂದು ಭವಿಷ್ಯ ನುಡಿದರು.

ನಾಗಮಂಗಲ ಕ್ಷೇತ್ರದಿಂದ ಈಗಲೇ JDSಗೆ ಇಬ್ಬರು ಆಕಾಂಕ್ಷಿಗಳು? ..

ನಾಗಮಂಗಲದಲ್ಲಿ ಈ ಬಾರಿ ನಾನೇ ರಂಗ ಕುಣಿಯೋದು. ಶಾಸಕ ಸುರೇಶ್‌ಗೌಡಗೆ ಶಾಶ್ವತವಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಜೆಡಿಎಸ್‌ನಿಂದ ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ. ಸುರೇಶ್‌ಗೌಡರನ್ನು ವಿಧಾನ ಪರಿಷತ್‌ ಅಥವಾ ಸಂಸತ್‌ಗೆ ಕಳುಹಿಸಲಿ, ನಮ್ಮದೇನು ಅಭ್ಯಂತರವಿಲ್ಲ. ಕೊರೋನಾ ಬಂದು ಸಿಡಿ ಪ್ರಕರಣ ಮುಚ್ಚಿಕೊಂಡಿದೆ. ಬಿಜೆಪಿ ನಾಯಕರೇ ಹೇಳಿರುವಂತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸತ್ಯಾಸತ್ಯತೆ ಹೊರಬರಲು ಕೂಲಂಕಶವಾಗಿ ಸಮಗ್ರ ತನಿಖೆ ಆಗಬೇಕು. ನಮ್ಮ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದಂತೆ ತನಿಖೆ ಹಳ್ಳ ಹಿಡಿಯುತ್ತಿದೆ ಎಂದು ಅವರ ಕಿಡಿ ಕಾರಿದರು.

ಬಿಜೆಪಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಕೊರೊನಾ 2ನೇ ಅಲೆ ನೋಡಿದರೆ ಮತ್ತೆ ಆತಂಕ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದವರು ಹೇಳಿದರು.