ಮದ್ದೂರು (ಫೆ.12): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಬಗ್ಗೆ ಜೆಡಿಎಸ್‌ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಶಾಸಕ ಸುರೇಶ್‌ ಗೌಡ ಗುರುವಾರ ಹೇಳಿದರು.

ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಂಡ್‌ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಮಾಜಿ ಸಂಸದ ಎಲ್.ಆರ್‌.ಶಿವರಾಮೇಗೌಡ ನಾಗಮಂಗಲ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುತ್ತಿದ್ದೇನೆ ಹೊರತು ಶಿವರಾಮೇಗೌಡ ಹೇಳಿಕೆಗೆ ಉತ್ತರ ನೀಡುವುದಿಲ್ಲ ಎಂದರು.

JDSಗೆ ಬಿಗ್‌ ಶಾಕ್.. ಕಾಂಗ್ರೆಸ್‌ ಸೇರ್ಪಡೆಗೆ ಮುಂದಾದ ಯುವ ನಾಯಕ.. ಡಿಕೆಶಿ ಭೇಟಿ

ರಾಜ್ಯದ ಉಪಚುನಾವಣೆಗಳಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡರು ಆರ್ಥಿಕ ತೊಂದರೆಯಿಂದಾಗಿ ಆ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂಬ ಹೇಳಿಕೆಯನ್ನು ಸಮರ್ಥಿಕೊಂಡ ಶಾಸಕರು ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷ ಹಣ ಬಲದ ಮೂಲಕ ಚುನಾವಣೆಯಲ್ಲಿ ಗೆದ್ದು ಬರುತ್ತಿರುವುದು ಸಹಜವಾಗಿದೆ ಎಂದರು.

ಜೆಡಿಎಸ್‌ ಪಕ್ಷದಲ್ಲಿ ಉಪಚುನಾವಣೆಗೆ ಸ್ಪರ್ಧಿಸಲು ಹಣವಿಲ್ಲ ಎಂದು ದೇವೇಗೌಡರು ಸ್ಪಷ್ಟಿಕೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದರು.

ಇದೇ ವೇಳೆ ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ಯುವಘಟಕದ ಅಧ್ಯಕ್ಷ ಕೆ.ಟಿ.ಪ್ರದೀಪ್‌ ಕುಮಾರ್‌, ಮುಖಂಡರಾದ ಕೃಷ್ಣೇಗೌಡ ಇದ್ದರು.